
ನವದೆಹಲಿ (ಆ.20): ಉಪರಾಷ್ಟ್ರಪತಿ ಹುದ್ದೆಗೆ ವಿಪಕ್ಷ ಇಂಡಿಯಾ ಕೂಟ ತನ್ನ ಅಭ್ಯರ್ಥಿಯಾಗಿ ನಿವೃತ್ತ ನ್ಯಾ, ಬಿ.ಸುದರ್ಶನ್ ರೆಡ್ಡಿ ಹೆಸರು ಘೋಷಣೆ ಮಾಡಿದ ಬೆನ್ನಲ್ಲೇ, ಅಭ್ಯರ್ಥಿಯ ವಿರುದ್ಧ ನಕ್ಸಲಿಸಂಗೆ ಪ್ರೋತ್ಸಾಹ ನೀಡಿದ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥ ಅಮಿತ್ ಮಾಳವೀಯ, '2011ರಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವ ಉದ್ದೇಶದಿಂದ ಛತ್ತೀಸ್‌ಗಢದಲ್ಲಿ 'ಸಲ್ವಾ ಜುಡುಂ(ಶಾಂತಿ ಮೆರವಣಿಗೆ) ಎಂಬ ಚಳುವಳಿ ನಡೆಯಿತು.
ಸರ್ಕಾರ ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ (ಎಸ್‌ಪಿಒ) ನೇಮಕ ಮಾಡಿ, ಶಸ್ತ್ರಾಸ್ತ್ರಗಳನ್ನು ಒದಗಿಸಿತು. ಇದರಿಂದ ಅವರು ನಕ್ಸಲರ ವಿರುದ್ದ ಹೋರಾಡುತ್ತಾರೆ ಎಂಬುದು ಸರ್ಕಾರದ ಆಶಯವಾಗಿತ್ತು. ಆದರೆ ಆಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಬಿ. ಸುದರ್ಶನ್ ರೆಡ್ಡಿ, ಸರ್ಕಾರದ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಿ, ಎಸ್‌ಪಿಒಗಳನ್ನು ವಜಾಗೊಳಿಸುವಂತೆ ಆದೇಶಿಸಿದರು.
ಇದು ನಕ್ಸಲಿಸಂ ನಿರ್ಮೂಲನೆಗೆ ಹೊರಟಿದ್ದ ಸರ್ಕಾರಕ್ಕೆ ತೀವ್ರ ಹಿನ್ನಡೆ ಉಂಟುಮಾಡಿತ್ತು' ಎಂದು ಆರೋಪಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆಗೆ ಹೋರಾಡುತ್ತಿದ್ದರೆ, ಇಂಡಿಯಾ ಕೂಟ ಅದನ್ನು ಪ್ರೋತ್ಸಾಹಿಸಿದವರಿಗೆ ಮಣೆ ಹಾಕುತ್ತಿದೆ ಎಂದು ಆರೋಪಿಸಿದೆ.
ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ವಿಪಕ್ಷ ಇಂಡಿಯಾ ಕೂಟ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೆಡ್ಡಿ (79) ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಎನ್‌ಡಿಎ ಕೂಟ ಈಗಾಗಲೇ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಣೆ ಮಾಡಿದೆ. ಹೀಗಾಗಿ ಚುನಾವಣೆಯು ದಕ್ಷಿಣದ ಇಬ್ಬರು ಅಭ್ಯರ್ಥಿಗಳ ನಡುವಿನ ಮತ್ತು ಹಾಲಿ ಹಾಗೂ ಮಾಜಿ ರಾಜ್ಯಪಾಲರ ನಡುವಿನ ಕದನವಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಘೋಷಣೆ ಮಾಡಿದ್ದು, 'ಸರ್ವಾನುಮತದಿಂದ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಇವರು ಭಾರತದ ವಿಶಿಷ್ಟ ಮತ್ತು ಪ್ರಗತಿಪರ ನ್ಯಾಯಾಧೀಶರಲ್ಲಿ ಒಬ್ಬರು. ಅವರು ಬಡವರ ಪರವಾಗಿದ್ದರು ಮತ್ತು ಸಂವಿಧಾನ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಿದ್ದರು. ಸರ್ಕಾರದ ವಿರುದ್ಧ ಇದು ನಮ್ಮ ಸೈದ್ದಾಂತಿಕ ಹೋರಾಟವಾಗಿದೆ' ಎಂದು ಬಣ್ಣಿಸಿದ್ದಾರೆ.
ಎನ್‌ಡಿಎ ಗೆಲುವು ಖಚಿತ: ಹಾಲಿ ಲೋಕಸಭೆ ಮತ್ತು ರಾಜ್ಯ ಸಭೆಯ ಒಟ್ಟು 782 ಸದಸ್ಯ ಬಲ ಹೊಂದಿದ್ದು, 426 ಸಂಸದರ ಬೆಂಬಲ ಹೊಂದಿರುವ ಎನ್‌ಡಿಎ ಅಭ್ಯರ್ಥಿಯ ಗೆಲುವು ಖಚಿತವಾಗಿದೆ. ಹೀಗಾಗಿ ನ್ಯಾ.ರೆಡ್ಡಿ ಅವರನ್ನು ವಿಪಕ್ಷಗಳು ಸಾಂಕೇತಿಕವಾಗಿ ಕಣಕ್ಕೆ ಇಳಿಸಿವೆ. ಯಾವುದೇ ಪಕ್ಷದ ಅಭ್ಯರ್ಥಿ ಆಯ್ಕೆ ಕಿತ್ತಾಟಕ್ಕೆ ಕಾರಣವಾಗುವ ಸಾಧ್ಯತೆ ಇದ್ದ ಕಾರಣ ರಾಜಕೀಯೇತರ ವ್ಯಕ್ತಿಯನ್ನು ವಿಪಕ್ಷ ಆಯ್ಕೆ ಮಾಡಿದೆ. ಜಗದೀಪ್ ಧನಕರ್ ಅವರ ರಾಜೀನಾಮೆ ನೀಡಿದ ಕಾರಣ ಚುನಾವಣೆ ನಡೆಯಲಿದೆ. ನ್ಯಾ.ರೆಡ್ಡಿ ಆ.21ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ನ್ಯಾ.ಸುದರ್ಶನ್ ಪರಿಚಯ: ಆಂಧ್ರ ಮೂಲದ ನಿವೃತ್ತ ನ್ಯಾಯಮೂರ್ತಿ ರೆಡ್ಡಿ 1971ರಲ್ಲಿ ಹೈದರಾಬಾದ್ ನಲ್ಲಿ ವಕೀಲಿಕೆ ಆರಂಭಿಸಿ, 1995ರಲ್ಲಿ ಆಂಧ್ರ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ಬಳಿಕ 2005ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, 2001ರಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಆಗಿ, 2011 ರಲ್ಲಿ ನಿವೃತ್ತರಾದರು. 2013ರಲ್ಲಿ ಗೋವಾದ ಮೊದಲ ರಾಜ್ಯಪಾಲರಾದ ರೆಡ್ಡಿ, 7 ತಿಂಗಳಲ್ಲೇ ರಾಜೀನಾಮೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ