
ನವದೆಹಲಿ[ಫೆ.10]: ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳು ಆಗಾಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತವೆ. ಸದ್ಯ ಆನೆಯ ವಿಡಿಯೋ ಒಂದು ಭಾರೀ ಫೇಮಸ್ ಆಗಿದ್ದು, ಇದನ್ನು ನೋಡಿದ್ರೆ ನೀವು ಕೂಡಾ ಒಂದು ಬಾರಿ ಶಾಕ್ ಆಗ್ತೀರಾ. ಸಿಟ್ಟುಗೊಂಡ ಆನೆಯೊಂದು ಬೈಕ್ ಸವಾರನನ್ನು ಬೆನ್ನಟ್ಟಿದ್ದು, ಅದೃಷ್ಟವಶಾತ್ ಆ ಸವಾರ ಬಚಾವಾಗಿದ್ದಾನೆ. ಕೊಂಚವೂ ಯಾಮಾರಿದ್ರೆ ಆ ಬೈಕ್ ಸವಾರ ತನ್ನ ಪ್ರಾಣ ಕಳೆದುಕೊಳ್ಳುತ್ತಿದ್ದ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಾಸ್ವಾನ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ರಸ್ತೆಯೊಂದರ ಎರಡೂ ಬದಿಯಲ್ಲಿ ಜನರು ತಮ್ಮ ವಾಹನದೊಂದಿಗೆ ನಿಂತಿರುವುದನ್ನು ನೋಡಬಹುದು. ಪಾರೆಸ್ಟ್ ಆಫೀಸರ್ ಆನೆಗಾಗಿ ಸಾಗಲು ಇವರನ್ನೆಲ್ಲಾ ನಿಲ್ಲಿಸಿದ್ದರು. ಹೀಗಿರುವಾಗ ಎಲ್ಲರೂ ಆನೆಗಳು ತೆರಳಲಿ ಎಂದು ಕಾಯುತ್ತಿದ್ದರು. ಆದರೆ ಈ ನಡುವೆ ವ್ಯಕ್ತಿಯೊಬ್ಬ ಬೈಕ್ ಏರಿ ರಸ್ತೆ ಮೇಲೆ ಹೊರಟೇ ಬಿಟ್ಟಿದ್ದಾನೆ. ಇದರಿಂದ ಕೆರಳಿದ ಆನೆಯೊಂದು ಬೈಕ್ ಸವಾರನ ಬೆನ್ನತ್ತಿದೆ. ಇದನ್ನರಿತ ಬೈಕ್ ಸವಾರ ಬೈಕ್ ವೇಗ ಹೆಚ್ಚಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಒಂದು ವೇಳೆ ಆನೆ ಅವಾರನಿಗಿಂತ ವೇಗವಾಗಿ ಓಡಿದ್ದರೆ ಕತೆ ಬೇರೆಯೇ ಇರುತ್ತಿತ್ತು.
ಇನ್ನು ವಿಡಿಯೋ ಶೇರ್ ಮಾಡಿಕೊಂಡಿರುವ ಪ್ರವೀಣ್ ಕಾಸ್ವಾನ್ 'ವನ್ಯಜೀವಿ ನಿರ್ವಹಣೆಯ ಅತ್ಯಂತ ಕಠಿಣ ಭಾಗ ಯಾವುದು ಎಂದು ನಿಮಗೆ ಗೊತ್ತಾ? ಮಾನುಷ್ಯರನ್ನು ತಡೆ ಹಿಡಿಯುವುದು. ಅರಣ್ಯಾಧಿಕಾರಿ ರಸ್ತೆ ಸಂಚಾರಕ್ಕೆ ಅನುಮತಿ ನೀಡದಿದ್ದರೂ, ಆ ಎಚ್ಚರಿಕೆಯನ್ನು ಅಲ್ಲಗಳೆದ ಈ ವ್ಯಕ್ತಿ ಬೈಕ್ ಏರಿ ಹೊರಟಿದ್ದಾನೆ. ಕೆಲವೇ ಕ್ಷಣಗಳ ಅಂತರದಿಂದ ಈತ ಬದುಕುಳಿದಿದ್ದಾನೆ' ಎಂದು ಬರೆದಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ಬೈಕ್ ಸವಾರನ ವರ್ತನೆಗೆ ಆಕ್ರೋಶವೂ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ