ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನೂತನವಾಗಿ ನೇಮಕಗೊಂಡ ಶಿಕ್ಷಕರೊಬ್ಬರನ್ನು ಶಾಲೆಯಿಂದ ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಲು ಯತ್ನಿಸಲಾಗಿದೆ. ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಿಹಾರ (ಡಿ.04): ಬಿಹಾರದಲ್ಲಿ ನೂತನವಾಗಿ ನೇಮಕಗೊಂಡ ಸರ್ಕಾರಿ ಶಿಕ್ಷಕರೊಬ್ಬರನ್ನು ಬುಧವಾರ ಅವರ ಶಾಲೆಯಿಂದ ಅಪಹರಿಸಲಾಗಿದ್ದು, ಬಂದೂಕಿನಿಂದ ಬೆದರಿಸಿ ಮಹಿಳೆಯೊಬ್ಬರ ಜೊತೆ ಮದುವೆ ಮಾಡಲು ಒತ್ತಾಯಿಸಲಾಗಿದೆ ಎಂದು ಪೊಲೀಸರು ಗುರುವಾರ ಶಿಕ್ಷಕ ಪತ್ತೆಯಾದ ನಂತರ ತಿಳಿಸಿದ್ದಾರೆ.
ಇದೀಗ ಮಹಿಳೆಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಾತೇಪುರದ ರೇಪುರದಲ್ಲಿರುವ ಉನ್ನತೀಕರಿಸಿದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಗೌತಮ್ ಕುಮಾರ್ ನೇಮಕಗೊಂಡಿದ್ದರು. ಅವರನ್ನು ಬುಧವಾರ ಅಪಹರಿಸಲಾಗಿದೆ. ಕಾರಿನಲ್ಲಿ ಮೂರು-ನಾಲ್ಕು ಜನ ಶಾಲೆಗೆ ಬಂದು ಗೌತಮ್ ಕುಮಾರ್ ಅವರನ್ನು ಬಲವಂತವಾಗಿ ಎಳೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಗಂಟೆಗಟ್ಟಲೆ ರಸ್ತೆ ತಡೆ: ಮಾಹಿತಿಯ ಪ್ರಕಾರ, ಪಾತೇಪುರದ ರೇಪುರ ಉನ್ನತ ಶಾಲೆಯಲ್ಲಿ ನೂತನವಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್ ಅವರನ್ನು ಬುಧವಾರ ಮಧ್ಯಾಹ್ನ ಶಾಲಾ ಆವರಣದಿಂದ ಅಪಹರಿಸಲಾಗಿದೆ. ಆಕ್ರೋಶಗೊಂಡ ಜನರು ಮೊದಲು ಬುಧವಾರ ರಾತ್ರಿ ಮತ್ತು ನಂತರ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪತೇಪುರದಲ್ಲಿ ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ SH-49 ರಲ್ಲಿ ಸಂಚರಿಸುವ ವಾಹನಗಳು ಬರ್ಡಿಹಾ ಚೌಕದ ಮೂಲಕ ಬಹುರಾಕ್ಕೆ ತೆರಳಿದವು. ಆದರೆ, ರಸ್ತೆ ತಡೆಯಿಂದ ಭಾರೀ ಅನಾನುಕೂಲ ಆದ ಹಿನ್ನೆಲೆಯಲ್ಲಿ ಪೊಲೀಸರು ಅಪಹರಣವಾದ ಶಿಕ್ಷಕರನ್ನು ಹುಡುಕಿ ಕರೆದು ತಂದಿದ್ದಾರೆ.
ಇದನ್ನೂ ಓದಿ: ಸಂಸದ ಶಶಿ ತರೂರ್ ಮಡಿಲಲ್ಲಿ ಮಲಗಿ ಬಾಳೆಹಣ್ಣು ತಿಂದು ಹೋದ ಕೋತಿ!
ಶಿಕ್ಷಕರ ತಂದೆ ರಾಜೇಂದ್ರ ರೈ ಮತ್ತು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರು ಅಪಹರಣ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದಾರೆ. ಗುರುವಾರ ಪೊಲೀಸರ ಒತ್ತಡಕ್ಕೆ ಮಣಿದ ಅಪಹರಣಕಾರರು ಅಪಹೃತ ಶಿಕ್ಷಕರನ್ನು ಸುಮಾರು ಮಧ್ಯಾಹ್ನ 3 ಗಂಟೆಗೆ ಪಾತೇಪುರ ಠಾಣೆಗೆ ಕರೆತಂದರು. ಪಾತೇಪುರ BEO ತಿಳಿಸಿರುವಂತೆ ಶಿಕ್ಷಕ ಗೌತಮ್ ಕುಮಾರ್ ಅವರನ್ನು ಮದುವೆ ಮಾಡಿಸುವ ಉದ್ದೇಶದಿಂದ ಅಪಹರಿಸಲಾಗಿತ್ತು. ಅಪಹೃತ ಶಿಕ್ಷಕ ಪಾತೇಪುರ ಠಾಣಾ ವ್ಯಾಪ್ತಿಯ ಮಹೈಯಾ ಮಾಲ್ಪುರದ ನಿವಾಸಿ. ಠಾಣಾಧಿಕಾರಿ ಹೇಳುವಂತೆ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದು ಶಿಕ್ಷಕ ಗೌತಮ್ ಕುಮಾರ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಪಾತೇಪುರ ಠಾಣೆಯಲ್ಲಿ ದೂರು ದಾಖಲಾಗಿದೆ.