
ಪಾಟ್ನಾ (ಅ.23) ಬಿಹಾರ ಚುನಾವಣೆ ಕಣ ರಂಗೇರುತ್ತಿದೆ. ಈಗಾಗಲೇ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಹೆಚ್ಚಿನ ತಕರಾರಿಲ್ಲದೆ ಅಂತ್ಯಗೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆಯಲ್ಲಿ ಭಾರಿ ಕಸರತ್ತು ನಡೆದಿತ್ತು. ತೀವ್ರ ಅಸಮಧಾನ, ಬಹಿರಂಗ ಹೇಳಿಕೆಗಳಿಂದ ಹಿನ್ನಡೆ ಅನುಭವಿಸಿತ್ತು. ಆದರೆ ಇಂಡಿಯಾ ಒಕ್ಕೂಟ ಕೊನೆಗೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಕುತೂಹಲಕ್ಕೆ ತೆರೆ ಎಳೆದಿದೆ. ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂಡಿಯಾ ಒಕ್ಕೂಟ ಘೋಷಿಸಿದೆ. ಇದೇ ವೇಳೆ ವಿಪ್ ಮುಖ್ಯಸ್ಥ ಮುಕೇಶ್ ಸಹಾನಿ ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂಡಿಯಾ ಬ್ಲಾಕ್ ಘೋಷಿಸಿದೆ.
ಮಹತ್ವದ ಸಭೆ ಸೇರಿದ್ದ ಇಂಡಿಯಾ ಒಕ್ಕೂಟ ಭಾರಿ ಚರ್ಚೆ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ಅಂತಿಮಗೊಳಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅಶೋಕ್ ಗೆಹ್ಲೋಟ್, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕಳೆದ 2 ದಶಕಗಳಿಂದ ಬಿಹಾರದಲ್ಲಿ ಆಡಳಿತ ನಡೆಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಗೊತ್ತಿಲ್ಲದೆ ಚುನಾವಣೆ ಎದುರಿಸುತ್ತಿದೆ. ಎನ್‌ಡಿಎ ಪಕ್ಷದಲ್ಲಿನ ಗೊಂದಲ, ತಿಕ್ಕಾಟಗಳಿಂದ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಸೂಚಿಸಲು ಸಾಧ್ಯವಾಗುತ್ತಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಇಂಡಿಯಾ ಒಕ್ಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಅಂತಿಮಗೊಂಡಿದೆ. ಆದರೆ ಕೆಲ ಸೀಟು ಹಂಚಿಕೆಯಲ್ಲಿ ಗೊಂದಲ ಮುಂದುವರಿದಿದೆ. ಪ್ರಮುಖವಾಗಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡಿಲ್ಲ. ಗೊಂದಲ, ಮಾತುಕತೆ ಮುಂದುುವರಿದಿದೆ.
ಎನ್‌ಡಿಎ ಒಕ್ಕೂಟದಲ್ಲಿ ಶಾಸಕರು ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಬಿಹಾರ ಚುನಾವಣೆಯನ್ನು ಎನ್‌ಡಿಎ ಒಕ್ಕೂಟ ನಿತೀಶ್ ಕುಮಾರ್ ನೇತೃತ್ವದಲ್ಲಿ ಎದುರಿಸಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ನಿತೀಶ್ ಕುಮಾರ್ ನಮ್ಮ ನಾಯಕರು, ಸುದೀರ್ಧ ರಾಜಕೀಯ ಇತಿಹಾಸ ಹೊಂದಿದ್ದಾರೆ. ಗೆಲುವಿನ ಬಳಿಕ ಶಾಸಕರು, ಪಕ್ಷದ ಮುಖಂಡರು ಸೇರಿದಂತೆ ಎನ್‌ಡಿಎ ಒಕ್ಕೂಟದ ಸದಸ್ಯರು ಕುಳಿತು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಇತರ ರಾಜ್ಯಗಳಲ್ಲಿ ಬಿಜೆಪಿ ಅನುಸರಿಸುವ ಪದ್ಧತಿಯೇ ಇಲ್ಲೂ ಪಾಲನೆಯಾಗಲಿದೆ ಎಂದು ಇತ್ತೀಚೆಗೆ ಅಮಿತ್ ಶಾ ಹೇಳಿದ್ದರು.
ನಿತೀಶ್ ಕುಮಾರ್ ಸರ್ಕಾರ ಒಂದು ಹಂತದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸಿದೆ. ಬಿಹಾರದಲ್ಲಿ ಹೊಸ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದರೆ ಸಾಂಪ್ರದಾಯಿಕ ಮತಗಳು ಛಿದ್ರವಾಗಲಿದೆ ಅನ್ನೋ ಸಮೀಕರಣ ಲೆಕ್ಕಾಚಾರ ಭಾರಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಬಳಿಕ ಸಿಎಂ ಯಾರು ಅನ್ನೋದು ನಿರ್ಧರಿಸಲು ಎನ್‌ಡಿಎ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ