ಬಿಹಾರ ಸಿಎಂ ನಿತೀಶ್‌ ಕುಮಾರ್ ಶಿಖಂಡಿ: ಆರ್‌ಜೆಡಿ ನಾಯಕ ಸುಧಾಕರ್‌

By Kannadaprabha NewsFirst Published Jan 4, 2023, 12:32 PM IST
Highlights

ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶಿಖಂಡಿ ಎಂದು, ಬಿಹಾರ ಸರ್ಕಾರದ ಭಾಗವಾಗಿರುವ ಆರ್‌ಜೆಡಿಯ ನಾಯಕ ಸುಧಾಕರ್‌ ಸಿಂಗ್‌ ಟೀಕಿಸಿದ್ದಾರೆ.

ಪಟನಾ: ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶಿಖಂಡಿ ಎಂದು, ಬಿಹಾರ ಸರ್ಕಾರದ ಭಾಗವಾಗಿರುವ ಆರ್‌ಜೆಡಿಯ ನಾಯಕ ಸುಧಾಕರ್‌ ಸಿಂಗ್‌ ಟೀಕಿಸಿದ್ದಾರೆ. ನಿತೀಶ್‌ ರಾಜ್ಯಕ್ಕೆ ಏನೂ ದೊಡ್ಡ ಕೊಡುಗೆ ನೀಡಿಲ್ಲ. ಅಧಿಕಾರದಿಂದ ಕೆಳಗಿಳಿದ ಬಳಿಕ ಯಾರೂ ಅವರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಅವರಿಗೆ ಸ್ವಂತ ಬಲ, ವರ್ಚಸ್ಸು ಏನೂ ಇಲ್ಲ. ಮಾಜಿ ಸಿಎಂಗಳಾದ ಕೃಷ್ಣ ಸಿನ್ಹಾ, ಕರ್ಪೂರಿ ಠಾಕೂರ್‌, ಲಾಲು ಪ್ರಸಾದ್‌ ರೀತಿ ನಿತೀಶ್‌ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರನ್ನು ಜನ ಶಿಖಂಡಿ ಎಂದೇ ಗುರುತಿಸಲಿದ್ದಾರೆ ಎಂದು ಹೇಳಿದ್ದಾರೆ.

75.53 ಲಕ್ಷ ಮೌಲ್ಯದ ಆಸ್ತಿ ಹೊಂದಿರುವ ನಿತೀಶ್

ಬಿಹಾರ ಮುಖ್ಯಮಂತ್ರಿ ಸಿಎಂ ನಿತೀಶ್‌ ಕುಮಾರ್‌ ಇತ್ತೀಚೆಗೆ ತಮ್ಮ ಆಸ್ತಿ ಘೋಷಿಸಿಕೊಂಡಿದ್ದರು. ಒಟ್ಟು 75.53 ಲಕ್ಷ ರು. ಮೌಲ್ಯದ ಆಸ್ತಿಯನ್ನು  ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದರು. ಇದರಲ್ಲಿ 58.85 ಲಕ್ಷ ರು. ಮೌಲ್ಯದ ಸ್ಥಿರಾಸ್ತಿಯಾಗಿದ್ದರೆ, 16.68 ಲಕ್ಷ ರು. ಸ್ಥಿರ ಆಸ್ತಿಯಾಗಿದೆ. ಇದೇ ವೇಳೆ ತಮ್ಮ ಬಳಿ ಬಳಿ 28,135 ರು. ನಗದು ಇರುವುದಾಗಿ ನಿತೀಶ್ ತಿಳಿಸಿದ್ದರು. ಇವರೊಂದಿಗೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ 75 ಸಾವಿರ ರೂ. ನಗದು ಹೊಂದಿದ್ದರೆ ಅವರ ಮಡದಿ 1.25 ಲಕ್ಷ ನಗದು ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಲಾಲು ಅವರ ಇನ್ನೊಬ್ಬ ಪುತ್ರ ತೇಜ್‌ ಪ್ರತಾಪ್‌ (Tej pratap) ತಮ್ಮ ಬಳಿ 1.7 ಲಕ್ಷ ನಗದು ಹಾಗೂ 3.2 ಕೋಟಿ ಮೌಲ್ಯದ ಸ್ಥಿರಾಸ್ಥಿ ಇರುವುದಾಗಿ ತಿಳಿಸಿದ್ದಾರೆ. 
ನಿತೀಶ್‌ ಕುಮಾರ್‌ ತಮ್ಮ ಕ್ಯಾಬಿನೆಟ್‌ ಸಚಿವರಿಗೆ, ಸರ್ಕಾರದ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿಯನ್ನು ಡಿ.31ರೊಳಗೆ ಘೋಷಿಸಬೇಕು ಎಂದು ಸೂಚಿಸಿದ್ದರು. ಈ ಪ್ರಕಾರ ಸಚಿವರು ಆಸ್ತಿ ಘೋಷಿಸಿಕೊಂಡಿದ್ದಾರೆ.

ಹೊಸ ರಾಷ್ಟ್ರಪಿತ ಏನು ಮಾಡಿದ್ದಾರೆ?

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನವರಾಷ್ಟ್ರದ ರಾಷ್ಟ್ರಪಿತ ಎಂಬ ಅಮೃತ ಪಡ್ನವಿಸ್‌ (Amrutha fadnavis) ಹೇಳಿಕೆ ಬಗ್ಗೆ ಕಿಡಿಕಾರಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಹೊಸ ರಾಷ್ಟ್ರದ ರಾಷ್ಟ್ರಪಿತ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಪ್ರಶ್ನಿಸಿದ್ದರು. ಮಹಾರಾಷ್ಟ್ರದ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಪತ್ನಿ ಅಮೃತಾ ಫಡ್ನವೀಸ್‌ ‘ಹಳೇ ಭಾರತದ ರಾಷ್ಟ್ರಪಿತ ಗಾಂಧೀಜಿಯಾದರೆ, ಹೊಸ ಭಾರತದ ರಾಷ್ಟ್ರಪಿತ ಮೋದೀಜಿ’ ಎಂದು ಹೇಳಿದ್ದರು. ಇದಕ್ಕೆ ಕಿಡಿಕಾರಿದ ನಿತೀಶ್‌ ಕುಮಾರ್‌,‘ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ಶೂನ್ಯ, ಆರ್‌ಎಸ್‌ಎಸ್‌ (RSS) ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಹೊಸ ರಾಷ್ಟ್ರಪಿತ ಏನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದ್ದರು. ಈ ನಡುವೆ, ಬಿಜೆಪಿಯ ನವಭಾರತದ ಬಗ್ಗೆ ವ್ಯಂಗ್ಯವಾಡಿದ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ, ‘ಗಾಂಧಿಯನ್ನು ಯಾರೊಂದಿಗೂ ಹೋಲಿಕೆ ಮಾಡಲಾಗುವುದಿಲ್ಲ, ನವಭಾರತ ಎಂದರೆ ಶ್ರೀಮಂತರನ್ನು ಬೆಳೆಸುವುದಾಗಿದೆ, ಉಳಿದ ಜನರು ಬಡತನ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ನವಭಾರತ ನಮಗೆ ಬೇಡ’ ಎಂದಿದ್ದಾರೆ.

 

click me!