ರಾಜಸ್ಥಾನ ಪಂ. ಚುನಾವಣೆ: ಭಿನ್ನಮತಕ್ಕೆ ಬೆಲೆ ತೆತ್ತ ಕಾಂಗ್ರೆಸ್‌!

By Suvarna NewsFirst Published Dec 10, 2020, 12:05 PM IST
Highlights

ರಾಜಸ್ಥಾನ ಪಂ. ಚುನಾವಣೆ: ಭಿನ್ನಮತಕ್ಕೆ ಬೆಲೆತೆತ್ತ ಕಾಂಗ್ರೆಸ್‌| 4371 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 1852, 1989ರಲ್ಲಿ ಬಿಜೆಪಿ ಜಯಭೇರಿ

ಜೈಪುರ/ನವದೆಹಲಿ(ಡಿ.10): ರಾಜಸ್ಥಾನ ಪಂಚಾಯತ್‌ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ರಾಜ್ಯದಲ್ಲಿನ ವಿಪಕ್ಷ ಬಿಜೆಪಿ ಮೇಲುಗೈ ಸಾಧಿಸಿದ್ದರೆ ಆಡಳಿತಾರೂಢ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ರಾಜ್ಯದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಯುವ ನಾಯಕ ಸಚಿನ್‌ ಪೈಲಟ್‌ ನಡುವಣ ಅಂತರಿಕ ಸಂಘರ್ಷವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಒಟ್ಟಾರೆ 4371 ಗ್ರಾಮ ಪಂಚಾಯತ್‌ ಸೀಟುಗಳ ಪೈಕಿ ಕಾಂಗ್ರೆಸ್‌ 1852 ಸ್ಥಾನಗಳಿಗಷ್ಟೇ ಗೆಲ್ಲುವಲ್ಲಿ ಯಶಸ್ವಿಯಾದರೆ, ಪ್ರತಿಪಕ್ಷ ಬಿಜೆಪಿ ಭರ್ಜರಿ 1989ರಲ್ಲಿ ಗೆದ್ದಿದೆ. ಅಲ್ಲದೆ ಒಟ್ಟಾರೆ 635 ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 252 ಕ್ಷೇತ್ರಗಳು ಒಲಿದರೆ, 353 ಕ್ಷೇತ್ರಗಳಲ್ಲಿ ಕಮಲ ಅರಳಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2 ವರ್ಷ ಪೂರೈಸುತ್ತಿರುವ ಮತ್ತು ಸರ್ಕಾರದ ವಿರುದ್ಧವೇ ಬಂಡಾಯ ಸಾರಿದ್ದ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಅವರು ಪಕ್ಷ ತ್ಯಜಿಸುವ ಸುಳಿವು ನೀಡಿ ಬಳಿಕ ಪಕ್ಷದಲ್ಲೇ ಉಳಿದುಕೊಂಡ ಕೆಲವೇ ದಿನಗಳಲ್ಲಿ ಈ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ನಲ್ಲಿ ಇನ್ನೂ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶ ರವಾನಿಸಿದೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ರಾಜ್ಯ ಸಚಿವರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲೇ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿದೆ.

ಈ ಬಗ್ಗೆ ಬುಧವಾರ ಹರ್ಷ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು, ‘ರಾಜಸ್ಥಾನದಲ್ಲಿ ಬಿಜೆಪಿಯ ಯಶಸ್ವಿಯು ಅನ್ನದಾತರು, ಕಾರ್ಮಿಕರು ಮತ್ತು ಬಡ ಜನರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ಇಟ್ಟವಿಶ್ವಾಸದ ಪ್ರತಿರೂಪ’ ಎಂದು ಹೇಳಿದ್ದಾರೆ.

click me!