
ನವದೆಹಲಿ: ಬೀಡಿ ಮೇಲಿನ ಜಿಎಸ್ಟಿ ದರವನ್ನು ಶೇ.28ರಿಂದ 18ಕ್ಕೆ ಇಳಿಸಿದ್ದನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಕೇರಳ ಕಾಂಗ್ರೆಸ್ ಘಟಕದ ಈ ಟ್ವೀಟ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ವಿವಾದದ ಬಳಿಕ ಪಕ್ಷ ಕ್ಷಮೆ ಯಾಚಿಸಿದೆ.
‘ಬಿಹಾರ ಮತ್ತು ಬೀಡಿ ಎರಡೂ ಬಿ ಇಂದ ಶುರುವಾಗುತ್ತದೆ. ಇನ್ನು ಮುಂದೆ ಇವೆರಡೂ ಪಾಪಗಳಲ್ಲ’ ಎಂದು ಕೇರಳ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿತ್ತು. ‘ಈ ಮೊದಲು ಶೇ.28ರಷ್ಟು ತೆರಿಗೆಗೆ ಒಳಪಡುತ್ತಿದ್ದ ಸಿಗರೆಟ್, ತಂಬಾಕಿನಂಥ ಪಾಪದ ವಸ್ತುಗಳನ್ನು (ಸಿನ್ ಗೂಡ್ಸ್) ಶೇ.40ರ ತೆರಿಗೆ ಸ್ತರಕ್ಕೆ ಏರಿಸಲಾಗಿದೆ. ಆದರೆ ಬೀಡಿಯನ್ನು ಮಾತ್ರ 28ರಿಂದ 18ರ ಸ್ತರಕ್ಕೆ ಇಳಿಸಲಾಗಿದೆ. ಬಿಹಾರದಲ್ಲಿ ಬೀಡಿ ಬಳಕೆ ವ್ಯಾಪಕ ಆಗಿರುವ ಕಾರಣ, ಮುಂಬರುವ ಬಿಹಾರ ಚುನಾವಣೆಯಲ್ಲಿ ಮತದಾರರ ಓಲೈಸಲು ಹೀಗೆ ಮಾಡಲಾಗಿದೆ’ ಎಂಬುದು ಟ್ವೀಟ್‌ನ ಉದ್ದೇಶವಾಗಿತ್ತು.
ಎನ್‌ಡಿಎ ಕಿಡಿ:
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ‘ಕಾಂಗ್ರೆಸ್ಸಿಗರು ಮೊದಲು ಪ್ರಧಾನಿ ಮೋದಿಯವರ ತಾಯಿಯನ್ನು ಅವಮಾನಿಸಿದರು. ಈಗ ಇಡೀ ರಾಜ್ಯವನ್ನೇ ಅಪಮಾನಿಸುತ್ತಿದ್ದಾರೆ. ಇದೇ ಕಾಂಗ್ರೆಸ್‌ನ ನಿಜಬಣ್ಣವಾಗಿದ್ದು, ದೇಶದೆದುರು ಮತ್ತೆಮತ್ತೆ ಬಹಿರಂಗವಾಗುತ್ತಿದೆ’ ಎಂದು ಕಿಡಿ ಕಾರಿದ್ದಾರೆ. ಹೀಗೆ ಮಾಡುವ ಮೂಲಕ ಕಾಂಗ್ರೆಸ್ ತನ್ನ ಮಿತಿಯನ್ನು ಮೀರುತ್ತಿದೆ ಎಂದು ಎಚ್ಚರಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ‘ಆರ್‌ಜೆಡಿಯ ತೇಜಸ್ವಿ ಯಾದವ್ ಕಾಂಗ್ರೆಸ್ ಹೇಳಿಕೆಯನ್ನು ಬೆಂಬಲಿಸುವರೇ?’ ಎಂದು ಪ್ರಶ್ನಿಸಿದ್ದಾರೆ. ಜೆಡಿಯು ನಾಯಕ ಸಂಜಯ್ ಕುಮಾರ್ ಝಾ ಮಾತನಾಡಿ, ‘ಬಿ ಇಂದ ಬುದ್ಧಿ, ಬಜೆಟ್ ಕೂಡ ಬರುತ್ತದೆ. ಆದರೆ ಬಿಹಾರಕ್ಕೆ ವಿಶೇಷ ಸೌಲಭ್ಯ ಲಭಿಸಿದಾಗೆಲ್ಲಾ ಕಾಂಗ್ರೆಸ್‌ಗೆ ಕಿರಿಕಿರಿಯಾಗುತ್ತದೆ’ ಎಂದರು.
ಕಾಂಗ್ರೆಸ್ ಕ್ಷಮೆ:
ಎನ್‌ಡಿಎ ಮೈತ್ರಿಕೂಟದ ವಾಗ್ದಾಳಿ ಬೆನ್ನಲ್ಲೇ ತನ್ನ ಪೋಸ್ಟ್ ತೆಗೆದುಹಾಕಿದ ಕೇರಳ ಕಾಂಗ್ರೆಸ್, ‘ಜಿಎಸ್‌ಟಿ ಬಳಸಿಕೊಂಡು ಮೋದಿ ಮಾಡಿದ ಗಿಮಿಕ್ ಟೀಕಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ನಮ್ಮ ಟ್ವೀಟ್ ಅನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಇದರಿಂದ ಬೇಸರವಾಗಿದ್ದರೆ ಕ್ಷಮೆಯಿರಲಿ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.
- ಬೀಡಿ ಮೇಲಿನ ಜಿಎಸ್ಟಿ ಶೇ.18ಕ್ಕೆ ಇಳಿಸಿದ್ದಕ್ಕೆ ಕಿಡಿ
- ಬಿಹಾರ ಚುನಾವಣೆಗಾಗಿ ದರ ಇಳಿಕೆ ಎಂದು ಆಕ್ಷೇಪ
- ಬಿಹಾರ ಚುನಾವಣೆ ಮುಂದೆ ಕಾಂಗ್ರೆಸ್ ಎಡವಟ್ಟು
- ಕಾಂಗ್ರೆಸ್‌ನ ಅಸಲಿಯತ್ತು ಬಹಿರಂಗ: ಬಿಜೆಪಿ ಕಿಡಿ
- ಆಕ್ರೋಶದ ಬೆನ್ನಲ್ಲೇ ಪಕ್ಷದಿಂದ ಕ್ಷಮೆ ಯಾಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ