ರೈತರಿಂದ ನಾಳೆ ಭಾರತ್‌ ಬಂದ್‌: ಆದರೆ ಯಶಸ್ಸು ಡೌಟ್‌!

By Suvarna NewsFirst Published Sep 26, 2021, 12:10 PM IST
Highlights

* ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ದೇಶಾದ್ಯಂತ ಮುಷ್ಕರಕ್ಕೆ ಕರೆ

* ರಾಜ್ಯದ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ಘೋಷಣೆ

* ರೈತರಿಂದ ನಾಳೆ ಭಾರತ್‌ ಬಂದ್‌, ಆದರೆ ಬಂದ್‌ ಆಗೋದು ಡೌಟ್‌

ಬೆಂಗಳೂರು(ಸೆ.26): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಗಳನ್ನು(Farm Bill) ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ದೇಶಾದ್ಯಂತ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ(Bharat bandh) ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.

ಕೊರೋನಾ(Coronavirus) ಸಂಕಷ್ಟದಿಂದ ಈಗಾಗಲೇ ಸಮಸ್ಯೆ ಅನುಭವಿಸುತ್ತಿರುವ ಆಟೋ, ಟ್ಯಾಕ್ಸಿ, ವಾಣಿಜ್ಯ ವಾಹನ, ಖಾಸಗಿ ಶಾಲಾ-ಕಾಲೇಜು, ಸಾರಿಗೆ ಬಸ್‌, ಚಲನಚಿತ್ರ ಮಂದಿರ, ಮಾಲ್‌, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಹುತೇಕ ಸಂಘಟನೆಗಳು ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಷ್ಟೇ ಸೀಮಿತವಾಗಿವೆ. ಕೊರೋನಾ ನೆಪ ನೀಡಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ ಯಾವುದೇ ಬೆಂಬಲ ನೀಡದಿರಲು ನಿರ್ಧಾರ ಮಾಡಿದೆ.

ಹೀಗಾಗಿ, ಸೋಮವಾರ ಸಾರ್ವಜನಿಕರಿಗೆ ಬಹುತೇಕ ಎಲ್ಲಾ ಸೇವೆಗಳೂ ಲಭ್ಯವಾಗಲಿವೆ. ಹೀಗಾಗಿ ರಾಜ್ಯದಲ್ಲಿ ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದ್ದು, ಪರಿಣಾಮ ಬಂದ್‌ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆಗಷ್ಟೇ ಸೀಮಿತವಾಗುವ ಸಾಧ್ಯತೆ ಇದೆ.

ಬೃಹತ್‌ ಪ್ರತಿಭಟನಾ ಜಾಥಾ:

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕಾಯಿದೆಗಳಿಂದ ರೈತರು(Farmers) ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಕೆ.ಆರ್‌. ಪುರ ಮಾರುಕಟ್ಟೆಯಿಂದ ಟೌನ್‌ಹಾಲ್‌ವರೆಗೆ ಬೃಹತ್‌ ಪ್ರತಿಭಟನಾ ಜಾಥಾ ನಡೆಯಲಿದೆ. ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ರಾರ‍ಯಲಿ ನಡೆಸಿ, ಕೂಡಲೇ ಕಾಯಿದೆಗಳನ್ನು ಹಿಂಪಡೆಯಲು ಒತ್ತಾಯಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಸಂಕಷ್ಟದಲ್ಲಿ ಬಂದ್‌ ಬೇಡ:

ಕೊರೋನಾ ಹಿನ್ನೆಲೆಯಲ್ಲಿ ಹಲವಾರು ತಿಂಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಜೀವನ ದುಸ್ತರಗೊಂಡಿದೆ. ಇದೀಗ ಮತ್ತೆ ಬಂದ್‌ ಹೆಸರಿನಲ್ಲಿ ಚಟುವಟಿಕೆ ಸ್ಥಗಿತಗೊಂಡರೆ ಮತ್ತಷ್ಟುಸಮಸ್ಯೆಯಾಗಲಿದೆ. ಹೀಗಾಗಿ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೇವೆ. ವ್ಯಾಪಾರ ಚಟುವಟಿಕೆ ಸ್ಥಗಿತಗೊಳಿಸುವುದಿಲ್ಲ ಎಂದು ಬಹುತೇಕ ಸಂಘಟನೆಗಳು ಕೈ ತೊಳೆದುಕೊಂಡಿವೆ.

ಆಟೋ, ಟ್ಯಾಕ್ಸಿ, ಓಲಾ, ಊಬರ್‌ ಮಾಲೀಕರು ಹಾಗೂ ಚಾಲಕರ ಸಂಘ, ಚಿತ್ರಮಂದಿರಗಳ ಮಾಲೀಕರ ಸಂಘ, ವಕೀಲರ ಸಂಘ, ಮಾಲ್‌ಗಳ ಮಾಲೀಕರ ಸಂಘ, ಸಾರಿಗೆ ನಿಗಮಗಳ ನೌಕರರ ಸಂಘ, ಖಾಸಗಿ ಶಾಲಾ-ಕಾಲೇಜುಗಳ ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ಬಹುತೇಕರು ನೈತಿಕ ಬೆಂಬಲ ನೀಡಿರುವುದರಿಂದ ಈ ಎಲ್ಲಾ ಸೇವೆಗಳೂ ಲಭ್ಯವಿರಲಿವೆ. ಖಾಸಗಿ ಶಾಲಾ-ಕಾಲೇಜುಗಳ ಸಿಬ್ಬಂದಿ ಹಸಿರು ಪಟ್ಟಿಧರಿಸಿ ಸೇವೆಗೆ ಹಾಜರಾಗುವುದಾಗಿ ಘೋಷಿಸಿದ್ದಾರೆ.

ರಕ್ಷಣೆಗೆ ಮನವಿ:

ಅಲ್ಲದೆ, ಬಂದ್‌ಗೆ ಬೆಂಬಲಿಸದೆ ಎಂದಿನಂತೆ ಬಸ್ಸುಗಳು ಸಂಚರಿಸಲು ಸಾರಿಗೆ ಬಸ್ಸುಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸಾರಿಗೆ ಇಲಾಖೆ ಪೊಲೀಸ್‌ ಇಲಾಖೆಗೆ ಮನವಿ ಮಾಡಿದೆ. ಬೆಂಗಳೂರು ಮೆಟ್ರೋ ನೌಕರರು ಸಹ ನೈತಿಕ ಬೆಂಬಲ ನೀಡಿದ್ದು ಎಂದಿನಂತೆ ರೈಲು ಸಂಚರಿಸಲಿವೆ.

ಅಗತ್ಯ, ತುರ್ತು ಸೇವೆ ಲಭ್ಯ:

ಇನ್ನು ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುವ ಹಾಲು, ದಿನಸಿ, ದಿನಪತ್ರಿಕೆ ಹಾಗೂ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್‌ ಸ್ಟೋರ್‌ ಸೇವೆ ಎಂದಿನಂತೆ ಮುಕ್ತವಾಗಿ ಇರಲಿದೆ. ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು, ಕಾರ್ಖಾನೆಗಳು ರಜೆ ಘೋಷಣೆ ಮಾಡಿಲ್ಲ. ಹೀಗಾಗಿ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ.

ಬಂದ್‌ಗೆ ನೈತಿಕ ಬೆಂಬಲ

ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟ, ಓಲಾ, ಊಬರ್‌ ಟ್ಯಾಕ್ಸಿ ಮಾಲೀಕರ ಸಂಘ, ಆಟೋ ಡ್ರೈವರ್ಸ್‌ ಯೂನಿಯನ್‌, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಪೀಸ್‌ ಆಟೋ, ಲಾರಿ ಮಾಲೀಕರ ಸಂಘ, ರಾಜ್ಯ ಟ್ರಾವೆಲ್ಸ್‌ ಟ್ಯಾಕ್ಸಿ ಮಾಲೀಕರ ಸಂಘ, ಖಾಸಗಿ ಶಾಲಾ-ಕಾಲೇಜುಗಳ ಸಂಘ, ವಕೀಲರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌ ನೌಕರರ ಸಂಘಟನೆಗಳು ಮತ್ತು ಎಪಿಎಂಸಿ ವರ್ತಕರ ಸಂಘ.

ಬಂದ್‌ಗೆ ಸಂಪೂರ್ಣ ಬೆಂಬಲ

- ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ (ಕುರುಬೂರು ನೇತೃತ್ವದ ರೈತ ಸಂಘ), ದಲಿತ ಸಂಘಟನೆಗಳು, ಕನ್ನಡ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್‌ ಶೆಟ್ಟಿಬಣ), ಕಾರ್ಮಿಕ ಸಂಘಟನೆಗಳ ಯೂನಿಯನ್‌ ಮತ್ತು ಗ್ರಾಮೀಣ ಬ್ಯಾಂಕ್‌ ನೌಕರರ ಸಂಘ.

ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಬೆಂಬಲಿಸಿ: ಕೋಡಿಹಳ್ಳಿ

ಬಂದ್‌ಗೆ ಸಂಬಂಧಿಸಿದಂತೆ ರೈತ, ಕಾರ್ಮಿಕ ಸಂಘಟನೆಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸೇರಿ ಒಕ್ಕೊರಲಿನ ನಿರ್ಧಾರ ತೆಗೆದುಕೊಂಡಿದ್ದೇವೆ. ಹೀಗಾಗಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ವಿವಿಧ ಸಂಘಟನೆಗಳ ಜೊತೆ ಪೂರ್ವಭಾವಿ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರೈಲು, ಬಂದರು, ಹೆದ್ದಾರಿ ಸೇರಿ ಎಲ್ಲವನ್ನೂ ಹಂತ-ಹಂತವಾಗಿ ಖಾಸಗೀಕರಣ ಮಾಡಲು ಹೊರಟಿದೆ. ಕೇಂದ್ರದ ಧೋರಣೆಗೆ ರೈತರು ಬಲಿಯಾಗಿ ರೈತರೂ ಖಾಸಗೀಕರಣ ಆಗಬಾರದು ಎಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೆ.ಆರ್‌ ಪುರಂ ಮಾರುಕಟ್ಟೆಯಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಸಲಾಗುವುದು. ಸರ್ಕಾರದ ಪರ ಇರುವವರು ಮಾತ್ರ ಬಂದ್‌ ಕುರಿತು ಅಪಸ್ವರ ಎತ್ತುತ್ತಿದ್ದು, ರೈತರ ಪರ ಇರುವವರೆಲ್ಲರೂ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂರ್ಣ ಬೆಂಬಲ ಏಕಿಲ್ಲ?

- ಕೊರೋನಾದಿಂದ ಹಲವಾರು ತಿಂಗಳಿಂದ ವ್ಯಾಪಾರ ನಡೆದಿಲ್ಲ

- ಹೆಚ್ಚು ಆದಾಯವಿಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ

- ಇದೀಗ ಮತ್ತೆ ಬಂದ್‌ ಮಾಡಿದರೆ ಮತ್ತಷ್ಟುಸಮಸ್ಯೆಯಾಗಲಿದೆ

- ಹೀಗಾಗಿ ನೈತಿಕ ಬೆಂಬಲ, ವ್ಯಾಪಾರ- ವಹಿವಾಟು ಸ್ಥಗಿತ ಇಲ್ಲ

- ರಾಜ್ಯದ ಬಹುತೇಕ ಸಂಘಟನೆಗಳಿಂದ ಘೋಷಣೆ

click me!