ಜಾತಿ ತಾರತಮ್ಯದ ಅಮಾನವೀಯ ಮುಖ: ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಣೆ, ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

Published : Oct 03, 2026, 11:34 AM IST
Bhadohi Woman Gives Birth Outside Hospital

ಸಾರಾಂಶ

ಉತ್ತರ ಪ್ರದೇಶದ ಭದೋಹಿಯಲ್ಲಿ ದಲಿತ ಗರ್ಭಿಣಿಗೆ ಜಾತಿ ತಾರತಮ್ಯ ಮಾಡಿ ಆಸ್ಪತ್ರೆಗೆ ಪ್ರವೇಶ ನಿರಾಕರಿಸಿದ ಪರಿಣಾಮ, ಆಕೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಮಾನವೀಯ ಘಟನೆ ವೈರಲ್ ಆದ ಬಳಿಕ ಸರ್ಕಾರ ತನಿಖೆ ನಡೆಸಿ, ಕರ್ತವ್ಯಲೋಪವೆಸಗಿದ ವೈದ್ಯನನ್ನು ವಜಾಗೊಳಿಸಿದೆ.

ವಾರಣಾಸಿ (ಅ.3): ಉತ್ತರ ಪ್ರದೇಶದ ಭದೋಹಿಯಲ್ಲಿ ಜಾತಿ ತಾರತಮ್ಯದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ದಲಿತ ಮುಸಹಾರ್ (Mushar) ಸಮುದಾಯಕ್ಕೆ ಸೇರಿದ ಗರ್ಭಿಣಿಯೊಬ್ಬರಿಗೆ ಜಾತಿಯ ಕಾರಣ ನೀಡಿ ಸರ್ಕಾರಿ ಆಸ್ಪತ್ರೆಯೊಳಗೆ ಪ್ರವೇಶ ನಿರಾಕರಿಸಿದ ಪರಿಣಾಮ, ಆಕೆ ಆಸ್ಪತ್ರೆಯ ಹೊರಗಿನ ಸಾರ್ವಜನಿಕ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಬೇಕಾದ ಶೋಚನೀಯ ಪರಿಸ್ಥಿತಿ ಎದುರಾಗಿದೆ. ಈ ಅಮಾನವೀಯ ಘಟನೆಯ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಸ್ಪತ್ರೆಯ ಕರ್ತವ್ಯನಿರತ ವೈದ್ಯನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ.

ಆರೋಗ್ಯ ಇಲಾಖೆಯ ಉಸ್ತುವಾರಿಯನ್ನೂ ವಹಿಸಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ತನಿಖೆಗೆ ಆದೇಶಿಸಿದ್ದರು.

ಘಟನೆಯ ಹಿನ್ನೆಲೆ

ಮಂಗಳವಾರ ರಾತ್ರಿ ಪ್ರಸವ ವೇದನೆಯಿಂದ ಬಳಲುತ್ತಿದ್ದ 20 ವರ್ಷದ ರಾಣಿ ಎಂಬ ಯುವತಿಯನ್ನು ಆಕೆಯ ಕುಟುಂಬಸ್ಥರು ಜ್ಞಾನಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ಮುಸಹಾರ್ ಸಮುದಾಯದವಳು ಎಂದು ಗುರುತಿಸಿ, ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಚಿಕಿತ್ಸೆ ಸಿಗದೆ ಬೇರೆದಾರಿಯಿಲ್ಲದೆ ಕುಟುಂಬಸ್ಥರು ಆಕೆಯನ್ನು ಕರೆದುಕೊಂಡು ಆಸ್ಪತ್ರೆಯಿಂದ ಹೊರಡುತ್ತಿದ್ದಾಗ, ರಾಣಿ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತೀವ್ರ ಪ್ರಸವ ವೇದನೆಯಿಂದ ಬಳಲುತ್ತಿದ್ದ ಆಕೆಗೆ ಕುಟುಂಬದವರೇ ನೆರವಾಗಿ, ಆಸ್ಪತ್ರೆಯ ಹೊರಗಿನ ರಸ್ತೆಬದಿಯಲ್ಲೇ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯ ವೈದ್ಯಾಧಿಕಾರಿ (CMO) ಡಾ. ಎಸ್.ಕೆ. ಚಕ್ ಅವರು ಸ್ಥಳಕ್ಕೆ ಧಾವಿಸಿ, ತಾಯಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಕೊಡಿಸಿದರು. ಜೊತೆಗೆ ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶಿಸಿದರು.

ನಾಲ್ವರ ಸಮಿತಿಯಿಂದ ತನಿಖೆ: ವೈದ್ಯ ವಜಾ, ಅಧಿಕಾರಿಗಳ ಅಮಾನತು

ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ನಾಲ್ಕು ಸದಸ್ಯರ ತನಿಖಾ ಸಮಿತಿಯು ವರದಿ ನೀಡಿದ ಬೆನ್ನಲ್ಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ತವ್ಯದಲ್ಲಿದ್ದ ಎಮರ್ಜೆನ್ಸಿ ಮೆಡಿಕಲ್ ಆಫೀಸರ್ (EMO) ಡಾ. ಪಂಕಜ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ (Sacked). ಕರ್ತವ್ಯ ಲೋಪವೆಸಗಿದ ಸಿಬ್ಬಂದಿ ನರ್ಸ್ ನೀಲಂ ಮೌರ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಪ್ರಸೂತಿ ತಜ್ಞ ಡಾ. ಮುಖೇಶ್ ಪ್ರಜಾಪತಿ ಅವರ ವೇತನವನ್ನು ತಡೆಹಿಡಿಯಲಾಗಿದೆ.

ಇಷ್ಟೇ ಅಲ್ಲದೆ, ಆಸ್ಪತ್ರೆಯ ಸಿಎಂಎಸ್ (CMS) ಡಾ. ಅಜಯ್ ತಿವಾರಿ ಮತ್ತು ಡಾ. ನೀಲಿಮಾ ಧವನ್ ಅವರ ವಿರುದ್ಧವೂ ಸೂಕ್ತ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ.

ತನಿಖಾ ವರದಿಯಲ್ಲಿ ಬಿಚ್ಚಿಬಿದ್ದ ನಿರ್ಲಕ್ಷ್ಯ

ತನಿಖಾ ವರದಿಯ ಪ್ರಕಾರ, ಗರ್ಭಿಣಿ ರಾಣಿ ಆಸ್ಪತ್ರೆಗೆ ಬಂದಾಗ ಕರ್ತವ್ಯದಲ್ಲಿದ್ದ ಡಾ. ಪಂಕಜ್ ಅವರು ಆಕೆಯನ್ನು ಯಾವುದೇ ಪ್ರಾಥಮಿಕ ತಪಾಸಣೆ ನಡೆಸದೆ ನೇರವಾಗಿ ಬೇರೆಡೆಗೆ ರಫರ್ ಮಾಡಿದ್ದರು. ಇನ್ನು ಡಾ. ನೀಲಿಮಾ ಧವನ್ ಅವರು ಘಟನೆಗೆ ಒಂದು ದಿನ ಮುಂಚಿತವಾಗಿ ರಾಣಿ ಅವರನ್ನು ತಪಾಸಣೆ ನಡೆಸಿದ್ದರೂ, ಆಕೆಗೆ ತೀವ್ರ ರಕ್ತಹೀನತೆ (Severe Anaemia) ಇರುವುದು ಗೊತ್ತಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಬೇರೆಡೆಗೆ ಕಳುಹಿಸಿದ್ದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (CMS) ಕೂಡ ಈ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಪತ್ತೆಯಾಗಿದೆ.

ಇನ್ನೊಂದೆಡೆ, ಡಾ. ಪ್ರಜಾಪತಿ ಅವರು ಹೆರಿಗೆ ಸಮಯದಲ್ಲಿ ಜಿಲ್ಲೆಯಿಂದ ಹೊರಗಿದ್ದು, ಘಟನೆ ನಡೆದು ಒಂದೂವರೆ ಗಂಟೆಯ ನಂತರ ಆಸ್ಪತ್ರೆಗೆ ಆಗಮಿಸಿದ್ದರು. ಪ್ರಮುಖವಾಗಿ, ಆಸ್ಪತ್ರೆಯ ನರ್ಸ್ ಗರ್ಭಿಣಿಯ ಕುಟುಂಬವನ್ನು 'ಮುಸಹಾರ್' ಎಂದು ಹೀನಾಯವಾಗಿ ನಿಂದಿಸಿ ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳೂರು ಬೆನ್ನಲ್ಲೇ ತಿರುಪತಿಯ ಫಾರ್ಮಾ ಫ್ಯಾಕ್ಟರಿಯಲ್ಲಿ ಸ್ಫೋಟಕ್ಕೆ 5 ಸಾವು, ಹಲವರು ಗಾಯ
"ಇದು ನನ್ನ ಜೀವನದ ಶ್ರೇಷ್ಠ ನಿರ್ಧಾರ!" - ಚೆನ್ನೈನಿಂದ ಸಿಲಿಕಾನ್ ಸಿಟಿಗೆ ಶಿಫ್ಟ್ ಆದ ಉದ್ಯಮಿ ಹೇಳಿದ್ದೇನು?