ವಿಮಾನ ಸಂಚಾರ ಶುರುವಾದ್ರೆ ಬೆಂಗಳೂರಿಗೆ ವೈರಸ್ ಕಂಟಕ!| ಏರ್‌ಪೋರ್ಟ್‌ನಿಂದ ಸೋಂಕು: ದೇಶದಲ್ಲಿ 3ನೇ ಸ್ಥಾನ ಸಂಭವ
ನವದೆಹಲಿ(ಮೇ.17): ಆರ್ಥಿಕ ಚಟುವಟಿಕೆಗಳಿಗೆ ಮರುಜೀವ ನೀಡಲು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ವಿಮಾನಯಾನ ಸೇವೆ ಪುನಾರಂಭಕ್ಕೆ ಸಿದ್ಧತೆ ನಡೆಸಿರುವಾಗಲೇ, ವಿಮಾನ ಸಂಚಾರ ಮತ್ತೆ ಆರಂಭವಾದರೆ ಕೊರೋನಾ ಸೋಂಕು ಮತ್ತಷ್ಟುವ್ಯಾಪಕವಾಗುವ ಸಾಧ್ಯತೆ ಇದೆ ಎಂದು ಸಂಶೋಧನಾ ವರದಿಯೊಂದು ಎಚ್ಚರಿಸಿದೆ.
ಭಾರತದಲ್ಲಿ ಸೋಂಕು ವ್ಯಾಪಕವಾಗಲು ಕಾರಣವಾಗಬಲ್ಲ ಏರ್‌ಪೋರ್ಟ್‌ಗಳ ಪೈಕಿ ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್ ಮೊದಲ ಸ್ಥಾನದಲ್ಲಿದ್ದರೆ, ಮುಂಬೈನ ಛತ್ರಪತಿ ಶಿವಾಜಿ ಏರ್‌ಪೋರ್ಟ್ ಹಾಗೂ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್ 3ನೇ ಸ್ಥಾನದಲ್ಲಿವೆ ಎಂದು ಹೇಳಿದೆ.
ಭಾರತ ಮತ್ತು ಚೀನಾ ದೇಶಗಳು ವಿಮಾನ ಸಂಚಾರದಿಂದ ಸೋಂಕು ಏರಿಕೆಯದಂತಹ ಅಪಾಯವನ್ನು ಹೆಚ್ಚೆಚ್ಚು ಎದುರಿಸಲಿವೆ. ಜೊತೆಗೆ ಇಂಥ ಅಪಾಯ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಭಿನ್ನವಾಗಿದೆ ಎಂದು ಇಸ್ರೇಲ್‌ನ ಟೆಲ್ ಅವೀವ್ ವಿವಿಯ ಇಬ್ಬರು ಸಂಶೋಧಕರು, ಆಕ್ಸ್‌ಫರ್ಡ್ ಮ್ಯಾಥಮೆಟಿಕ್ ಇನ್ಸ್‌ಟಿಟ್ಯೂಟ್‌ನ ಸಂಶೋಧಕರೊಬ್ಬರು ಸಿದ್ಧಪಡಿಸಿರುವ ವರದಿ ಹೇಳಿದೆ.
ವಿಶ್ವದ 1364 ವಿಮಾನ ನಿಲ್ದಾಣಗಳ ಅಂಕಿಅಂಶ, ವಿವಿಧ ದೇಶಗಳ ಜನಸಾಂದ್ರತೆ, ದೇಶೀಯ ವಿಮಾನಯಾನ ಸಂಚಾರ ಪ್ರಮಾಣ ಮೊದಲಾದ ವಿಷಯಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಜಾಗತಿಕವಾಗಿ ಅತಿ ಹೆಚ್ಚು ಅಪಾಯಕಾರಿ ಏರ್‌ಪೋರ್ಟ್‌ಗಳ ಪೈಕಿ ಚೀನಾ ರಾಜಧಾನಿ ಬೀಜಿಂಗ್ ಏರ್‌ಪೋರ್ಟ್ ಮೊದಲ ಸ್ಥಾನದಲ್ಲಿ ಮತ್ತು ದೆಹಲಿ ಏರ್‌ಪೋರ್ಟ್ 4ನೇ ಸ್ಥಾನದಲ್ಲಿದೆ.
ದೇಶೀ ಸಂಚಾರ ಅಪಾಯ:
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸಂಚಾರದಿಂದ ಸೋಂಕು ವ್ಯಾಪಕವಾಗಿ ಹಬ್ಬುತ್ತದೆ ಎಂಬ ನಂಬಿಕೆ ಇದೆ. ಆದರೆ ಸೋಂಕಿತರು ದೇಶೀಯವಾಗಿ ಹೆಚ್ಚು ಸಂಚರಿಸುವ ಸಾಧ್ಯತೆ ಹೆಚ್ಚಿರುವ ಕಾರಣ, ದೇಶೀಯ ಸಂಚಾರವೇ ಸೋಂಕು ವ್ಯಾಪಕವಾಗಲು ಕಾರಣವಾಗಬಹುದು ಎಂದು ತಿಳಿಸಿದೆ.
ಭಾರತ ಮತ್ತು ಚೀನಾದಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣ ಮತ್ತು ಜನರ ದೇಶೀಯ ವಿಮಾನ ಸಂಚಾರ ಹೆಚ್ಚಿರುವ ಕಾರಣ, ಇಲ್ಲಿ ವಿಮಾನಯಾನ ಸೇವೆ ಪುನಾರಂಭವಾದರೆ ಸೋಂಕು ವ್ಯಾಪಕವಾಗುವ ಅಪಾಯ ಹೆಚ್ಚಿದೆ ಎಂದು ವರದಿ ಹೇಳಿದೆ.
ಬೆಂಗಳೂರು ನಂ.3: ಭಾರತಕ್ಕೆ ಡೇಂಜರ್:
ಭಾರತಕ್ಕೆ ಹೆಚ್ಚು ಅಪಾಯತರಬಲ್ಲ ಏರ್‌ಪೋರ್ಟ್‌ಗಳ ಪೈಕಿ 8 ಭಾರತದೊಳಗೇ ಇದೆ. ಇನ್ನೆರೆಡು ಏರ್‌ಪೋರ್ಟ್‌ಗಳೆಂದರೆ ದುಬೈ ಮತ್ತು ಸಿಂಗಾಪುರ.
ಬೀಜಿಂಗ್ ಅಪಾಯ: ಅಪಾಯ ಏಕೆ?:
ಸದ್ಯ ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ದೇಹದ ಉಷ್ಣತೆ ಪರೀಕ್ಷೆಗೆ ಸೀಮಿತವಾಗಿದೆ. ಇಂಥ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇಲ್ಲದವರು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಿಕ ಸೋಂಕು ಹಬ್ಬಿಸುತ್ತಾರೆ. ಹೀಗಾಗಿ ಸೋಂಕು ಪರೀಕ್ಷೆಗೆ ಹೊಸ ವಿಧಾನ ಅವಿಷ್ಕಾರವಾಗಬೇಕು. ತಕ್ಷಣಕ್ಕೆ ಪರೀಕ್ಷಾ ವಿಧಾನಗಳನ್ನು ಕಠಿಣಗೊಳಿಸಬೇಕು ಎಂದು ವರದಿ ಹೇಳಿದೆ.