
ಜೈಪುರ/ಬೆಂಗಳೂರು: ವರದಕ್ಷಿಣೆ ಕಿರುಕುಳದ ಆರೋಪಿಯಿಂದ 40 ಸಾವಿರ ರು. ಲಂಚಕ್ಕೆ ಕೈಯೊಡ್ಡಿದ್ದ ಆರೋಪದ ಮೇರೆಗೆ ಬೆಂಗಳೂರಿನ ಎಚ್‌ಎಎಲ್ ಠಾಣೆ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. ಪಿಎಸ್‌ಐ ಕೆ.ಅನಿತಾ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಉಳುವಪ್ಪ ತೆಗೂರು, ಯತೀಶ್ ಬಂಧಿತರು.
ಎಚ್‌ಎಎಲ್ ಸಮೀಪದ ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು. ಅವರು ಮೂಲತಃ ರಾಜಸ್ಥಾನದ ಜೈಪುರದವರಾಗಿದ್ದು, ಅಲ್ಲಿಗೆ ತೆರಳಿದ್ದರು. ಆರೋಪಿಯ ಬಂಧನಕ್ಕೆ ಬೆಂಗಳೂರಿನಿಂದ ಜೈಪುರಕ್ಕೆ ಎಚ್‌ಎಎಲ್ ಪೊಲೀಸರು ತೆರಳಿದ್ದರು. ಅಲ್ಲಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಪ್ರಕರಣದಿಂದ ಕೈ ಬಿಡಲು ಆರೋಪಿಗಳ ಕುಟುಂಬದವರಿಂದ ಎರಡು ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ರಾಜಸ್ಥಾನದ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಜೈಪುರದ ಹೋಟೆಲ್ ಗಂಗೌರ್‌ನಲ್ಲಿ 40 ಸಾವಿರ ರು. ಲಂಚ ಸ್ವೀಕರಿಸುತ್ತಿದ್ದಾಗ ಹೆಡ್‌ಕಾನ್‌ಸ್ಟೇಬಲ್ ಉಳುವಪ್ಪ ಅವರನ್ನು ಹಣ ಸಮೇತ ಬಂಧಿಸಿದ್ದಾರೆ. ಬಳಿಕ ನಡೆದ ವಿಚಾರಣೆಯಲ್ಲಿ ಕೆ.ಅನಿತಾ ಮತ್ತು ಯತೀಶ್ ಅವರ ಪಾತ್ರವೂ ಬೆಳಕಿಗೆ ಬಂದಿದ್ದು, ನಂತರ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ಲಂಚದ ಬೇಡಿಕೆ, ಕರೆ ವಿವರಗಳು, ಹಣಕಾಸು ವ್ಯವಹಾರಗಳ ಮಾಹಿತಿ ಸೇರಿ ಇತರೆ ಆಯಾಮಗಳಲ್ಲಿ ರಾಜಸ್ಥಾನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಂಚ ಸ್ವೀಕರಿಸಿದ ಆರೋಪದಲ್ಲಿ ರಾಜಸ್ಥಾನ ಪೊಲೀಸರಿಂದ ನಮ್ಮ ರಾಜ್ಯದ ಪೊಲೀಸರು ಬಂಧನವಾಗಿರುವುದು ಕರ್ನಾಟಕ ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದೆ. ಈ ಬಗ್ಗೆ ಜೈಪುರ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಂಧಿತ ಪೊಲೀಸರ ವಿರುದ್ಧ ಇಲಾಖಾ ತನಿಖೆಯು ನಡೆಯುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ