ಸಿಎಂ ಬೊಮ್ಮಾಯಿ ದಿಲ್ಲಿಗೆ: 10 ದಿನದಲ್ಲಿ ಸಂಪುಟ?

By Kannadaprabha NewsFirst Published Jul 29, 2021, 7:09 AM IST
Highlights

* ಸಂಪುಟ ರಚನೆ: ಇಂದು ರಾತ್ರಿ ಬೊಮ್ಮಾಯಿ ದಿಲ್ಲಿಗೆ

* ನಾಳೆ ಪ್ರಧಾನಿ ಮೋದಿ, ಅಮಿತ್‌ ಶಾ, ನಡ್ಡಾ ಭೇಟಿ

* ಮುಂದಿನ ವಾರ ಮತ್ತೆ ತೆರಳಿ 10 ದಿನದಲ್ಲಿ ಸಂಪುಟ?

ಬೆಂಗಳೂರು(ಜು.29): ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಸಂಪುಟ ರಚನೆ ಕಸರತ್ತು ಆರಂಭವಾಗಿದ್ದು, ಒಂದು ವಾರ ಅಥವಾ ಹತ್ತು ದಿನಗಳ ಒಳಗಾಗಿ ಪ್ರಕ್ರಿಯೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ರಾತ್ರಿ ದೆಹಲಿಗೆ ತೆರಳಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ. ಇದು ಸೌಜನ್ಯದ ಭೇಟಿಯಾಗಲಿದೆ.

ಮುಂದಿನ ವಾರ ಮತ್ತೆ ದೆಹಲಿಗೆ:

ಅಲ್ಲಿಂದ ವಾಪಸಾದ ಬಳಿಕ ಸಂಪುಟ ರಚನೆ ಪ್ರಕ್ರಿಯೆಗೆ ಕೈಹಾಕುವ ಬೊಮ್ಮಾಯಿ ಅವರು ಪಕ್ಷದ ನಾಯಕರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡು ಮುಂದಿನ ವಾರ ಮತ್ತೊಮ್ಮೆ ದೆಹಲಿಗೆ ಪ್ರಯಾಣಿಸುವ ಸಂಭವವಿದೆ. ಆ ಪಟ್ಟಿಯನ್ನು ವರಿಷ್ಠರ ಮುಂದಿಟ್ಟಬಳಿಕ ಸಚಿವರಾಗುವವರ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲಿ ಮುಖ್ಯಮಂತ್ರಿಗಳು ಕೊಂಡೊಯ್ಯುವ ಪಟ್ಟಿಯಲ್ಲಿನ ಕೆಲವು ಹೆಸರುಗಳು ಕೈಬಿಡುವ ಹಾಗೂ ಹೊಸದಾಗಿ ಸೇರ್ಪಡೆಯಾಗುವ ಬಗ್ಗೆ ಸಮಾಲೋಚನೆ ನಡೆದ ಬಳಿಕವೇ ಅಂತಿಮಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, ಹೊಸ ಸಂಪುಟ ಹೇಗಿರಬೇಕು ಎಂಬುದರ ರೂಪರೇಷೆಯ ಬಗ್ಗೆ ಮೊದಲ ದೆಹಲಿ ಭೇಟಿಯ ವೇಳೆಯೇ ವರಿಷ್ಠರು ಬೊಮ್ಮಾಯಿ ಅವರಿಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿಗಳು ವಾಪಸಾದ ಬಳಿಕ ಪಟ್ಟಿಸಿದ್ಧಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ಹೀಗಾಗಿ, ಸಂಪುಟ ರಚನೆಗಾಗಿ ಆಕಾಂಕ್ಷಿಗಳು ಇನ್ನೂ ಕೆಲದಿನಗಳವರೆಗೆ ಕಾಯಬೇಕಾಗಿ ಬರಬಹುದು. ಮುಖ್ಯಮಂತ್ರಿಗಳು ಶುಕ್ರವಾರ ಅಥವಾ ಶನಿವಾರ ದೆಹಲಿಯಿಂದ ವಾಪಸಾದ ಬಳಿಕವೇ ಆಯ್ಕೆ ಕಸರತ್ತು ಆರಂಭಿಸಲಿದ್ದಾರೆ. ಹೊಸ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಇದುವರೆಗೆ ಯಡಿಯೂರಪ್ಪ ಸಂಪುಟದಲ್ಲಿದ್ದವರ ಪೈಕಿ ಮತ್ತೆ ಸಚಿವ ಸ್ಥಾನ ಅಲಂಕರಿಸುವವರು ಯಾರು? ಉಪಮುಖ್ಯಮಂತ್ರಿ ಸ್ಥಾನ ಎಷ್ಟುಸೃಷ್ಟಿಯಾಗಬಹುದು ಮತ್ತು ಯಾರಿಗೆಲ್ಲ ಅದೃಷ್ಟಖುಲಾಯಿಸಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಲಭಿಸಲು ಇನ್ನಷ್ಟುಕಾಲ ಬೇಕಾಗುತ್ತದೆ. ಅಲ್ಲಿವರೆಗೆ ಆಕಾಂಕ್ಷಿಗಳು ತುದಿಗಾಲ ಮೇಲೆ ನಿಲ್ಲುವುದು ಅನಿವಾರ್ಯವಾಗಬಹುದು.

click me!