ಇನ್ಮುಂದೆ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸುತ್ತಾರೆ!

By Kannadaprabha NewsFirst Published Oct 2, 2020, 12:05 PM IST
Highlights

ಇನ್ಮುಂದೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಭಾಷೆಯಲ್ಲೇ ಮಾತಾಡ್ತಾರೆ. ಸ್ಥಳೀಯ ಭಾಷೆಯನ್ನೇ ಇನ್ನು ಅಧಿಕಾರಿಗಳು ವ್ಯವಹಾರ ಮಾಡ್ತಾರೆ

ನವದೆಹಲಿ(ಅ.02):  ಗ್ರಾಹಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಬ್ಯಾಂಕಿಂಗ್‌ ಸೇವೆ ಒದಗಿಸಲು ಸ್ಥಳೀಯ ಭಾಷೆ ಗೊತ್ತಿರುವ ಅಧಿಕಾರಿಗಳ ನಿಯೋಜನೆಗಾಗಿ ಐಎಎಸ್‌ ಮತ್ತು ಐಪಿಎಸ್‌ ರೀತಿಯಲ್ಲಿ ‘ಅಧಿಕಾರಿಗಳ ಕೇಡರ್‌’ ರಚಿಸುವಂತೆ ಬ್ಯಾಂಕ್‌ಗಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದ್ದಾರೆ. ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಬ್ಯಾಂಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಸದೇ ಹಿಂದಿಯಲ್ಲೇ ಮಾತನಾಡುವಂತೆ ಬಲವಂತಪಡಿಸುತ್ತಾರೆ ಎಂಬ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ನೇಮಕಾತಿಗಾಗಿ ಏಕರೂಪದ ತರಬೇತಿ ಕಾರ್ಯಕ್ರಮ ಹಾಗೂ ಮಧ್ಯಮ ಹಂತದ ತರಬೇತಿ ಯೋಜನೆ ಉದ್ಘಾಟಿಸಿ ಗುರುವಾರ ಮಾತನಾಡಿದ ಸಚಿವೆ ನಿರ್ಮಲಾ ಅವರು, ‘ಹಿಂದಿ ಗೊತ್ತಿಲ್ಲದ ಕಡೆಗಳಲ್ಲಿ ಬ್ಯಾಂಕಿಂಗ್‌ ಸೇವೆ ದೇಶದಾದ್ಯಂತ ಚಾಲ್ತಿಯಲ್ಲಿದೆ. ಹೀಗಾಗಿ, ಗ್ರಾಹಕರೇ ಹಿಂದಿ ಕಲಿಯಬೇಕು ಎಂದು ಅಧಿಕಾರಿಗಳು ಆಶಿಸುವುದು ಸರಿಯಲ್ಲ. ಇದಕ್ಕೆ ಬದಲಾಗಿ ಬ್ಯಾಂಕ್‌ ಅಧಿಕಾರಿಗಳು ಸ್ಥಳೀಯರ ಜೊತೆ ವ್ಯವಹಾರಕ್ಕಾಗಿ ಅಲ್ಲಿನ ಭಾಷೆಯನ್ನು ಕಲಿಯಲೇಬೇಕು ಎಂದು ಪ್ರತಿಪಾದಿಸಿದ್ದಾರೆ. 

ಅಕ್ಟೋಬರ್‌ನಲ್ಲಿ 11 ದಿನ ತೆರೆಯಲ್ಲ ಬ್ಯಾಂಕ್! ..

ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ನೇಮಕವು ಭಾರತದ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಹಿಂದಿ ಮಾತ್ರವೇ ಗೊತ್ತಿರುವ ಅಧಿಕಾರಿಗಳು ಹಿಂದಿ ಗೊತ್ತಿಲ್ಲದ ಭಾಗಗಳಿಗೆ ನೇಮಕವಾಗುತ್ತಾರೆ. ಇದರಿಂದ ಆ ಭಾಗದ ಜನರಿಗೆ ಬ್ಯಾಂಕಿಂಗ್‌ ಕ್ಷೇತ್ರದ ಅನುಕೂಲ ಅಲಭ್ಯವಾಗುವ ಸಾಧ್ಯತೆಯಿದೆ. ಹೀಗಾಗಿ, ನಿಯೋಜಿತಗೊಳ್ಳುವ ರಾಜ್ಯಗಳಲ್ಲಿನ ಸ್ಥಳೀಯ ಭಾಷೆ ಅರ್ಥ ಮಾಡಿಕೊಂಡು ಜನರಿಗೆ ನೆರವಾಗುವ ರೀತಿಯಲ್ಲಿ ಅಧಿಕಾರಿಗಳನ್ನು ಸಜ್ಜಗೊಳಿಸಬೇಕು. ಹೊಸದಾಗಿ ನೇಮಕವಾಗು ಅಧಿಕಾರಿಗಳು ತಾವು ಯಾವ ಸ್ಥಳೀಯ ಭಾಷೆಯನ್ನು ಕಲಿಯಬೇಕು ಎಂಬುದನ್ನು ಸ್ವಯಂಪ್ರೇರಿತವಾಗಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

click me!