
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station)ಕ್ಕೆ ನಿರೀಕ್ಷಿತ ಆಕ್ಸಿಯಮ್-4 ಮಿಷನ್ (Axiom-4 mission) ಉಡಾವಣೆಯನ್ನು ನಾಸಾ (NASA) ಆರನೇ ಬಾರಿಗೆ ಮುಂದೂಡಿದೆ. ಈ ಮಿಷನ್ ತಂಡದಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭಾಗವಹಿಸುತ್ತಿದ್ದಾರೆ. ಈ ಒಂದೇ ತಿಂಗಳು 6 ಬಾರಿ ಮುಂದೂಡಲಾಗಿದೆ.
ಮೊದಲಿಗೆ ಮೇ 29ರಂದು ಉಡಾವಣೆಯಾಗಬೇಕಾಗಿದ್ದ ಆಕ್ಸಿಯಮ್-4 ಕಾರ್ಯಾಚರಣೆ, ಜೂನ್ 8, 10, 11, 19 ಹಾಗೂ 22ರಂದು ಕ್ರಮವಾಗಿ ಪುನರ್‌ನಿಗದಿಯಾಗಿತ್ತು. ಇದೀಗ, ನಾಸಾ ಮುಂದಿನ ದಿನಾಂಕವನ್ನು ಘೋಷಿಸಬೇಕಿರುವ ತನಕ ಈ ಮಿಷನ್‌ನ್ನು ಮತ್ತೊಮ್ಮೆ ಮುಂದೂಡಲಾಗಿದೆ.
ಆಕ್ಸಿಯಮ್ ಸ್ಪೇಸ್ ನೀಡಿದ ಮಾಹಿತಿಯ ಪ್ರಕಾರ, ಇತ್ತೀಚೆಗೆ ISSನಲ್ಲಿ ಜ್ವೆಜ್ಡಾ ಸೇವಾ ಮಾಡ್ಯೂಲ್‌ನ ಹಿಂಭಾಗದ ವಿಭಾಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನಾಸಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳು ಸುರಕ್ಷಿತವಾಗಿರುವುದನ್ನು ದೃಢಪಡಿಸಿಕೊಳ್ಳಲು ಮತ್ತು ಎಲ್ಲಾ ತಾಂತ್ರಿಕ ಅಂಶಗಳನ್ನು ಮೌಲ್ಯಮಾಪನ ಮಾಡಲು ಹೆಚ್ಚು ಸಮಯ ಬೇಕೆಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ISS ಯಂತಹ ಜಟಿಲ ಮತ್ತು ಪರಸ್ಪರ ಅವಲಂಬಿತ ವ್ಯವಸ್ಥೆಗಳ ನಿರ್ವಹಣೆಗೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದೆ. ಮುಂದಿನ ಉಡಾವಣೆಗೆ ಮುನ್ನ, ಡೇಟಾವನ್ನು ಪರಿಶೀಲಿಸಿ ಮತ್ತು ಸಿಬ್ಬಂದಿಗೆ ಬೆಂಬಲ ನೀಡಲು ನಾಸಾ ಸಿದ್ಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಉಡಾವಣೆಗೆ ಮುನ್ನ ಎಲ್ಲ ಡೇಟಾವನ್ನೂ ನಿಖರವಾಗಿ ಪರಿಶೀಲಿಸುವ ಅಗತ್ಯವಿದೆ" ಎಂದು ಆಕ್ಸಿಯಮ್ ಸ್ಪೇಸ್ ಸ್ಪಷ್ಟಪಡಿಸಿದೆ.
1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನಂತರ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹೆಜ್ಜೆ ಇಡುವ ಭಾರತದ ಎರಡನೇ ವ್ಯಕ್ತಿಯಾಗಿದ್ದಾರೆ. ಅವರು ಪಾಲ್ಗೊಳ್ಳುತ್ತಿರುವ ಆಕ್ಸಿಯಮ್-4 (Ax-4) ಖಾಸಗಿ ಗಗನಯಾತ್ರಿ ಮಿಷನ್, ನಾಸಾ ಹಾಗೂ ಭಾರತದ ಬಾಹ್ಯಾಕಾಶ ಸಹಯೋಗದತ್ತ ಮಹತ್ತರ ಹೆಜ್ಜೆಯಾಗಿದೆ.
ಈ ಹಿನ್ನೆಲೆಯಲ್ಲಿ, ಜೂನ್ 22ರಂದು ನಿಗದಿಯಾಗಿದ್ದ ಉಡಾವಣೆಯನ್ನು ನಾಸಾ, ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಮುಂದೂಡಿವೆ. ಮೂರು ಸಂಸ್ಥೆಗಳೂ ಆಕ್ಸಿಯಮ್-4 ಮಿಷನ್‌ಗೆ ಲಭ್ಯವಿರುವ ಉಡಾವಣಾ ಅವಕಾಶಗಳನ್ನು ಇನ್ನೂ ಪರಿಶೀಲಿಸುತ್ತಿವೆ. "ಜೂನ್ 22ರ ಭಾನುವಾರದ ಉಡಾವಣೆಯಿಂದ ಹಿಂದೆ ಸರಿದಿದ್ದು, ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು" ಎಂದು ನಾಸಾ ತಿಳಿಸಿದೆ.
ಈ ಮಿಷನ್‌ನಲ್ಲಿ ನಾಲ್ವರು ಗಗನಯಾತ್ರಿಗಳು ಭಾಗಿಯಾಗಿದ್ದಾರೆ ಅವರೆಂದರೆ ಅಮೆರಿಕದ ಪೆಗ್ಗಿ ವಿಟ್ಸನ್ (ಕಮಾಂಡರ್), ಭಾರತದ ಶುಭಾಂಶು ಶುಕ್ಲಾ (ಪೈಲಟ್), ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು (ಮಿಷನ್ ತಜ್ಞರು).
ಈ ನಡುವೆ, ಎಲ್ಲಾ ಗಗನಯಾತ್ರಿಗಳು ಮತ್ತು ಸಿಬ್ಬಂದಿ ಫ್ಲೋರಿಡಾದಲ್ಲಿ ಸಜ್ಜಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣವು ಅವರನ್ನು ಸ್ವಾಗತಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ದೃಢಪಟ್ಟ ತಕ್ಷಣ, ಮಿಷನ್ ಉಡಾವಣೆಗೆ ಸಿದ್ಧವಾಗಲಿದೆ. ಜೂನ್ 30ರಂದು ಈ ಮಿಷನ್ ಉಡಾವಣಾ ಅವಧಿಗೆ ಗಡುವು ಇಡಲಾಗಿದೆ. ಆದರೆ ಸುರಕ್ಷತಾ ತಪಾಸಣಾ ಕಾರ್ಯಗಳು ಮುಂದುವರೆದರೆ, ಉಡಾವಣೆ ಜುಲೈ ತಿಂಗಳ ಮಧ್ಯಭಾಗಕ್ಕೆ ಮುಂದೂಡುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ