ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಂಡದ ಮೇಲೆ ಕಲ್ಲು, ಬಡಿಗೆಗಳಿಂದ ಭಾರೀ ದಾಳಿ

By Kannadaprabha NewsFirst Published Dec 11, 2020, 7:05 AM IST
Highlights

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತಂಡದ ಮೇಲೆ ಭಾರೀ ದಾಳಿ ನಡೆಸಲಾಗಿದೆ. ಕಲ್ಲು ಬಡಿಗೆಗಳಿಂದ ಹಲ್ಲೆ ನಡೆಸಲಾಗಿದೆ.

ಪಿಟಿಐ ಡೈಮಂಡ್‌ ಹಾರ್ಬರ್‌ (ಪ.ಬಂಗಾಳ) (ಡಿ.11): ತೃಣಮೂಲ ಕಾಂಗ್ರೆಸ್‌ ಪಕ್ಷದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಗಳು ಮುಂದುವರೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ಹಲವು ವಾಹನಗಳ ಮೇಲೆ ಗುರುವಾರ ಭಾರೀ ಪ್ರಮಾಣದ ಕಲ್ಲು ತೂರಾಟ ನಡೆದಿದೆ. ನಡ್ಡಾ ಅವರು ಗುಂಡುನಿರೋಧಕ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಆದರೆ ಬಿಜೆಪಿ ನಾಯಕರಾದ ವಿಜಯ್‌ ವರ್ಗೀಯಾ, ಮುಕುಲ್‌ ರಾಯ್‌ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ನಡ್ಡಾ, ಪ.ಬಂಗಾಳದಲ್ಲಿ ಗೂಂಡಾ ರಾಜ್ಯವಿದೆ. ಇಲ್ಲಿ ಕಾನೂನು ಎಂಬುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಘಟನೆ ಕುರಿತು ರಾಜ್ಯ ಸರ್ಕಾರದಿಂದ ವರದಿ ಬಯಸಿದೆ. ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಾಳಿ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಘಟನೆಯನ್ನು ಅಮಿತ್‌ ಶಾ, ಬಂಗಾಳದ ರಾಜ್ಯಪಾಲ ಜಗದೀಪ್‌ ಧನಖರ್‌, ಹಲವು ಕೇಂದ್ರ ಸಚಿವರು, ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲೆ FIR ...

ಈ ನಡುವೆ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತರ ಕೈವಾಡವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಿನ ಬೆಳಗಾದರೆ ಮದ್ದುಗುಂಡು ಹಿಡಿದುಕೊಂಡು ಬಿಜೆಪಿ ಕಾರ್ಯಕರ್ತರು ರಾರ‍ಯಲಿ ನಡೆಸುತ್ತಿದ್ದಾರೆ. ಈ ವೇಳೆ ಪರಸ್ಪರ ಹೊಡೆದಾಡಿಕೊಂಡು ಸರ್ಕಾರ, ಟಿಎಂಸಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಜೆಪಿಯ ಇಂಥ ಆಟ ರಾಜ್ಯದಲ್ಲಿ ನಡೆಯಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಎಲ್ಲರೂ ಸುರಕ್ಷಿತರಾಗಿದ್ದಾರೆ. ದಾಳಿಯ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಬಂಗಾಳ ಪೊಲೀಸರು ಹೇಳಿಕೆ ನೀಡಿದ್ದಾರೆ.

ಏನಾಯಿತು?:

ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ಹಿನ್ನಲೆಯಲ್ಲಿ ನಡ್ಡಾ ಬಂಗಾಳಕ್ಕೆ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಂಧುವಾದ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಕ್ಷೇತ್ರವಾದ ಡೈಮಂಡ್‌ ಹಾರ್ಬರ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡ್ಡಾ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರ ವಾಹನಗಳು ರಸ್ತೆಯಲ್ಲಿ ಸಾಗುತ್ತಿದ್ದವು. ಆಗ ಇಕ್ಕೆಲಗಳಲ್ಲಿ ನೆರೆದಿದ್ದ ಟಿಎಂಸಿ ಧ್ವಜ ಹಾಗೂ ಕಪ್ಪು ಧ್ವಜ ಹಿಡಿದಿದ್ದ 200 ಕಾರ್ಯಕರ್ತರು ನಡ್ಡಾ ಹಾಗೂ ಇತರರ ವಾಹನಗಳ ಮೇಲೆ ಕಲ್ಲಿನ ಮಳೆಗರೆದರು. ಅವರ ವಾಹನಗಳ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಬಡಿಗೆಗಳಿಂದ ಥಳಿಸಿದರು. ಈ ವೇಳೆ ಹಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಗಾಯಗೊಂಡಿದ್ದು, ವಾಹನಗಳು ಕೂಡಾ ಜಖಂ ಆಗಿವೆ.

ದುರ್ಗೆ ದಯೆಯಿಂದ ಪಾರು:

ಈ ಬಗ್ಗೆ ಮಾತನಾಡಿದ ನಡ್ಡಾ, ‘ನಾನು ಬಚಾವಾಗಿ ಬಂದಿದ್ದು ದುರ್ಗೆಯ ದಯೆ. ಇಂದಿನ ಘಟನೆ ಆಘಾತಕಾರಿ ಹಾಗೂ ಕಂಡು ಕೇಳರಿಯದ್ದು. ನನ್ನದ್ದೇ ಈ ಕತೆಯಾದರೆ ಇನ್ನು ರಾಜ್ಯದ ಜನಸಾಮಾನ್ಯರ ಪಾಡು ಹೇಳತೀರದು. ಈ ಗೂಂಡಾ ರಾಜ್ಯಕ್ಕೆ ಅಂತ್ಯ ಹಾಡಲೇಬೇಕು. ರಾಜ್ಯದಲ್ಲಿ ಟಿಎಂಸಿ ದುರಾಡಳಿತವಿದೆ. ಅಸಹಿಷ್ಣುತೆ ನೆಲೆಸಿದೆ’ ಎಂದು ಕಿಡಿಕಾರಿದರು.

click me!