ಗುಜರಾತ್‌ನಲ್ಲಿ ಭಯಾನಕ ದುರಂತ, ಉಪ್ಪಿನ ಫ್ಯಾಕ್ಟರಿಯ ಗೋಡೆ ಕುಸಿದು 12 ಕಾರ್ಮಿಕರು ಸಾವು!

By Suvarna NewsFirst Published May 18, 2022, 3:51 PM IST
Highlights

* ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ

* ಉಪ್ಪಿನ ಕಾರ್ಖಾನೆಯ ಗೋಡೆ ಇದ್ದಕ್ಕಿದ್ದಂತೆ ಕುಸಿತ

* ಗೋಡೆ ಕುಸಿತಕ್ಕೆ ಕನಿಷ್ಠ 12 ಬಲಿ

ಅಹಮದಾಬಾದ್(ಮೇ.18): ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಇಲ್ಲಿ ಉಪ್ಪಿನ ಕಾರ್ಖಾನೆಯ ಗೋಡೆ ಇದ್ದಕ್ಕಿದ್ದಂತೆ ಕುಸಿದಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಈ ದುರಂತದಲ್ಲಿ 12 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ. ಈ ಘಟನೆಯ ನಂತರ ಸ್ಥಳದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದ್ದು, ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್ಪಿ, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿ ಬೀಡು

ಈ ದುರಂತ ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಹಲ್ವಾಡ್ ಜಿಐಡಿಸಿಯಲ್ಲಿರುವ ಸಾಗರ್ ಸಾಲ್ಟ್ ಎಂಬ ಕಾರ್ಖಾನೆಯಲ್ಲಿ ಹತ್ತಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಸಮಾಧಿಯಾಗಿದ್ದಾರೆ. ಘಟನೆ ನಂತರ ಕೋಲಾಹಲ ಉಂಟಾಗಿದ್ದು, ತರಾತುರಿಯಲ್ಲಿ ಜೆಸಿಬಿ ಸಹಾಯದಿಂದ 12 ಮೃತದೇಹಗಳನ್ನು ಹೊರ ತೆಗೆಯುವುದರೊಂದಿಗೆ, ಕೆಲ ಗಾಯಾಳುಗಳನ್ನು ರಕ್ಷಿಸಲಾಗಿದೆ. ಘಟನೆಯ ನಂತರ ಸ್ಥಳೀಯ ಶಾಸಕ ಪರಶೋತ್ತಮ್ ಸಬರಿಯಾ, ಜಿಲ್ಲಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಗೋಡೆ ಕುಸಿಯಲು ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕರು 

1. ರಮೇಶಭಾಯಿ ನರಸಿಂಹಭಾಯಿ ಖಿರಾನಾ
2. ಶ್ಯಾಂಭಾಯಿ ರಮೇಶಭಾಯಿ ಕೋಲಿ
3. ರಮೇಶಭಾಯಿ ಮೇಘಾಭಾಯಿ ಕೋಲಿ
4. ದಿಲಾಭಾಯಿ ರಮೇಶಭಾಯಿ ಕೋಲಿ
5. ದೀಪಕಭಾಯ್ ಸೋಮಾನಿ
6. ರಾಜುಭಾಯಿ ಜೇರಂಭಾಯ್
7. ದಿಲೀಪಭಾಯಿ ರಮೇಶಭಾಯ್
8. ಶೀಟ್ಬೆನ್ ದಿಲೀಪ್ಭಾಯ್
9. ರಾಜಿಬೆನ್ ಭಾರವಾಡ್
10. ದೇವಿಬೆನ್ ಭಾರವಾಡ್
11. ಕಾಜಲ್ಬೆನ್ ಜೇಶಾಭಾಯಿ
12. ದಕ್ಷಬೆನ್ ರಮೇಶಭಾಯ್ ಕೋಲಿ

ಅಪಘಾತದ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ

ಈ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರ. ಈ ಬಗ್ಗಡ ಟ್ವಿಟರ್‌ನಲ್ಲಿ ಬರೆದಿರುವ ಪಿಎಂ ಮೋದಿ ಮೊರ್ಬಿಯಲ್ಲಿ ಸಂಭವಿಸಿದ ಗೋಡೆಯ ಕುಸಿತದ ದುರಂತ ಹೃದಯ ವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ, ಸ್ಥಳೀಯ ಅಧಿಕಾರಿಗಳು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಎಂದಿದ್ದಾಋಎ.

ಮೃತರ ಕುಟುಂಬಕ್ಕೆ ಗುಜರಾತ್ ಸರ್ಕಾರದಿಂದ ತಲಾ 4 ಲಕ್ಷ ರೂ

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಅಪಘಾತದಿಂದ ತೀವ್ರ ದುಃಖಿತರಾಗಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬಕ್ಕೆ ತಲಾ ರೂ.4 ಲಕ್ಷ ನೆರವು ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಇದೇ ವೇಳೆ ಈ ಅಪಘಾತದಲ್ಲಿ ಗಾಯಗೊಂಡವರಿಗೆ 50-50 ಸಾವಿರ ರೂಪಾಯಿಗಳ ನೆರವಿನೊಂದಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.

The tragedy in Morbi caused by a wall collapse is heart-rending. In this hour of grief, my thoughts are with the bereaved families. May the injured recover soon. Local authorities are providing all possible assistance to the affected.

— Narendra Modi (@narendramodi)

ಅನೇಕ ಮಕ್ಕಳು ಅವಶೇಷಗಳಡಿ ಸಿಲುಕಿರುವ ಶಂಕೆ

ಘಟನೆಯ ವೇಳೆ ಕೆಲ ಕೂಲಿ ಕಾರ್ಮಿಕರ ಮಕ್ಕಳೂ ಸ್ಥಳದಲ್ಲೇ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಅವರೆಲ್ಲರೂ ಈ ಅಪಘಾತಕ್ಕೆ ಬಲಿಯಾಗಿದ್ದಾರೆಂಬ ಶಂಕೆಡ ವ್ಯಕ್ತವಾಗಿದೆ. ಆದರೆ, ಇದನ್ನು ಕಂಪನಿಯಾಗಲಿ ಅಥವಾ ಪೊಲೀಸರಾಗಲಿ ಖಚಿತಪಡಿಸಿಲ್ಲ. ಗೋಡೆ ಬೀಳುವ ಸ್ವಲ್ಪ ಸಮಯದ ಮೊದಲು, ಅನೇಕ ಕಾರ್ಮಿಕರು ಊಟಕ್ಕೆ ಹೋಗಿದ್ದರು. ಇಲ್ಲದಿದ್ದರೆ ಅವರೂ ಅದಕ್ಕೆ ಬಲಿಯಾಗುವ ಸಾಧ್ಯತೆಗಳಿದ್ದವು. ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಬಲಿಯಾದ ಕಾರ್ಮಿಕರು ರಾಧನ್‌ಪುರ ತಹಸಿಲ್ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ. ಈ ಕಾರ್ಖಾನೆಯಲ್ಲಿ ಉಪ್ಪು ಪ್ಯಾಕಿಂಗ್ ಮಾಡುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ. 

click me!