ತೆಲಂಗಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕ ಮೂಲದ ಚುನಾವಣಾ ತಂತ್ರಗಾರ (Election Stretegist) ಸುನೀಲ್ ಕನುಗೋಲು (Sunil Kanugolu) ಅವರ ಮಾತು ಕೇಳದೇ ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಯನ್ನು ಕಾಂಗ್ರೆಸ್ ಸೋತಿತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದ್ದರ ಹಿಂದೆ ಕರ್ನಾಟಕ ಮೂಲದ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು (Sunil Kanugolu) ಅವರ ದೊಡ್ಡ ಪಾತ್ರವಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಅವರ ಮಾತು ಕೇಳದೇ ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಯನ್ನು ಕಾಂಗ್ರೆಸ್ ಸೋತಿತು ಎಂಬ ಅಚ್ಚರಿಯ ವಿಷಯವೂ ಹೊರಬಿದ್ದಿದೆ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Assembly Election Result) ಕನುಗೋಲು ರೂಪಿಸಿದ್ದ ತಂತ್ರ ಬಳಸಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ಪೈಕಿ ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಇವರ ನೆರವು ಪಡೆಯಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಅದಕ್ಕೆಂದೇ ಅವರನ್ನು ರಣತಂತ್ರ ರೂಪಿಸಲು ಮಧ್ಯಪ್ರದೇಶ (Madya Pradesh Assembly Election Result) ಮತ್ತು ರಾಜಸ್ಥಾನಕ್ಕೂ ಕಳುಹಿಸಲಾಗಿತ್ತು. ಅಲ್ಲಿನ ಹಿರಿಯ ಕಾಂಗ್ರೆಸ್ಸಿಗರಾದ ಕಮಲನಾಥ್ ಹಾಗೂ ಅಶೋಕ್ ಗೆಹ್ಲೋಟ್ ಅವರು ಕನುಗೋಲು ನೀಡಿದ್ದ ಸಲಹೆಗಳನ್ನು ಒಪ್ಪಿಕೊಳ್ಳದೆ ಕಡೆಗಣಿಸಿದರು ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದಲ್ಲಿ ಕಮಲನಾಥ್ ಅಡ್ಡಿ:
ಮಧ್ಯಪ್ರದೇಶಕ್ಕೂ ಸುನೀಲ್ ಕನುಗೋಲು (Sunil Kanugolu) ಅವರನ್ನು ಕಾಂಗ್ರೆಸ್ ವರಿಷ್ಠರು ಕಳುಹಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು, ‘ಸಂಜಯ್ ಗಾಂಧಿ ಕಾಲದಿಂದ ರಾಜಕಾರಣ ಮಾಡಿದ ಅನುಭವ ನನಗಿದೆ. ಟಿಕೆಟ್ ಯಾರಿಗೆ ನೀಡಬೇಕೆಂದು ನಾವು ನಿರ್ಧರಿಸುತ್ತೇವೆ’ ಎಂದು ಹೇಳುವ ಮೂಲಕ ಕನುಗೋಲು ಅವರನ್ನು ಕಡೆಗಣಿಸಿದ್ದರು ಎನ್ನಲಾಗಿದೆ.
ರಾಜಸ್ಥಾನದಲ್ಲಿ ಗೆಹ್ಲೋಟ್ ಅಡ್ಡಗಾಲು:
ರಾಜಸ್ಥಾನಕ್ಕೂ ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ಕನುಗೋಲು ತೆರಳಿದ್ದರು. ಆದರೆ ಅವರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಡೆಗಣಿಸಿ ಡಿಸೈನ್‌ಬಾಕ್ಸ್ ಪ್ರಚಾರ ಸಂಸ್ಥೆಯ ನರೇಶ್ ಅರೋರಾಗೆ ಅಭ್ಯರ್ಥಿಗಳ ಆಯ್ಕೆ ಸಮೀಕ್ಷೆ ಹಾಗೂ ಪ್ರಚಾರದ ಹೊಣೆ ನೀಡಿದ್ದರು ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ ರಣತಂತ್ರ:
ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಸುನೀಲ್ ಕನುಗೋಲು ಅವರಿಗೆ ಪಕ್ಷದ ಪರ ಪ್ರಚಾರದ ರಣತಂತ್ರ ರೂಪಿಸಲು ಹಾಗೂ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳನ್ನು ನಿಗದಿಪಡಿಸಲು ಮುಕ್ತಹಸ್ತ ನೀಡಿದ್ದರು. ಕನುಗೋಲು ನಡೆಸಿದ ಸಮೀಕ್ಷೆಗಳಲ್ಲಿ ಯಾರು ಗೆಲ್ಲಬಹುದು ಎಂಬ ಮಾಹಿತಿ ದೊರೆತಿತ್ತೋ ಅವರಿಗೇ ಟಿಕೆಟ್ ನೀಡಲಾಗಿತ್ತು ಎಂದೂ ಹೇಳಲಾಗಿದೆ.
ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಿದ್ದರಾಮಯ್ಯ ಅವರ ಸರ್ಕಾರ ಸುನೀಲ್ ಕನುಗೋಲು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಿದೆ.
ಬಿಜೆಪಿ ಪರವೂ ಕನುಗೋಲು ಕೆಲಸ:
ಬಳ್ಳಾರಿ ಮೂಲದವರಾದ ಸುನೀಲ್ ಕನುಗೋಲು ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ರೂಪಿಸಿದ್ದ ‘ಪೇಸಿಎಂ’ (Pay CM) ಆಂದೋಲನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅದಕ್ಕೂ ಮುಂಚೆ 2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪರವಾಗಿಯೂ ಅವರು ಚುನಾವಣಾ ತಂತ್ರಗಾರಿಕೆ ರೂಪಿಸಿದ್ದರು. 2014ರಲ್ಲಿ ನರೇಂದ್ರ ಮೋದಿಯವರ ಪ್ರಚಾರ ತಂಡದಲ್ಲೂ ಇದ್ದರು. ಉತ್ತರ ಪ್ರದೇಶ ಮತ್ತು ಗುಜರಾತಿನಲ್ಲೂ ಬಿಜೆಪಿ ಪರ ಕೆಲಸ ಮಾಡಿದ್ದರು. 2019ರ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪರ, ನಂತರ ಎಐಎಡಿಎಂಕೆ ಪರವಾಗಿ ಕೆಲಸ ಮಾಡಿದ್ದರು. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ‘ಭಾರತ್ ಜೋಡೋ ಯಾತ್ರೆ’ ಕೂಡ ಇವರದೇ ಕಲ್ಪನೆಯಾಗಿದೆ.