
ಗುವಾಹಟಿ(ಜೂ.01): ಅಸ್ಸಾಂನಲ್ಲಿ ವೈದ್ಯರೊಬ್ಬರಿಗೆ ಥಳಿಸಿದ ಪ್ರಕರಣ ಸಂಬಂಧ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಘಾತಕ ಪ್ರಕರಣ ಎಂದು ಕರೆದಿರುವ ಸಿಎಂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ನಡೆದ ಈ ಪ್ರಕರಣದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅತ್ತ ಸಿಎಂ ಈ ಘಟನೆಯನ್ನು ಖಂಡಿಸಿದ್ದು, ವೈದ್ಯರೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಆಕ್ಸಿಜನ್ ಕೊರತೆಯಿಂದ ರೋಗಿ ಸಾವು
ಲಭ್ಯವಾದ ಮಾಹಿತಿ ಅನ್ವಯ ಈ ಘಟನೆ ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ನಡೆದಿದೆ. ಕೊರೋನಾ ವಾರ್ಡ್‌ನಲ್ಲಿ ದಾಖಲಾಗಿದ್ದ ಪೀಪಲ್ ಪುಖ್ರಿ ಹಳ್ಳಿ ನಿವಾಸಿ ಜಿಯಾಜುದ್ದೀನ್ ಮೃತಪಟ್ಟಿದ್ದರು. ಈ ವ್ಯಕ್ತಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇಲ್ಲಿ ಡ್ಯೂಟಿಯಲ್ಲಿದ್ದ ಡಾಕ್ಟರ್ ಡಾ. ಸೇಜ್‌ಕುಮಾರ್ ಸೇನಾಪತಿ ಈ ಬಗ್ಗೆ ಮಾಹಿತಿ ನೀಡುತ್ತಾ ಸುಮಾರು 1.30ಕ್ಕೆ ಡ್ಯೂಟಿಗೆ ಹಾಜರಾಗಿದ್ದೆ. ರೋಗಿಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಲಾಯ್ತು. ಆತನನ್ನು ತಪಾಸಣೆ ನಡೆಸಲು ಹೋಗುವಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದಿದ್ದಾರೆ.
ದಾಳಿಯಿಂದ ಪಾರಾಗಲು ಕೋಣೆಯಲ್ಲಿ ಬಂಧಿಯಾದ ಡಾಕ್ಟರ್
ರೋಗಿಯ ಸಾವಿನ ಬಳಿಕ, ಸುಮಾರು 15 ಮಂದಿ ಕುಟುಂಬ ಸದಸ್ಯರು ಜಗಳ ಆರಂಭಿಸಿದ್ದಾರೆ. ಅಲ್ಲದೇ ಕೈಗೆ ಸಿಕ್ಕ ವಸ್ತುಗಳಿಂದ ವೈದ್ಯರ ಮೇಲೆ ದಾಳಿ ನಡೆಸಿದ್ದಾಋಎ. ಈ ಜನರ ಗುಂಪಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಡಾಕ್ಟರ್ ಸೇನಾಪತಿ ತಮ್ಮನ್ನು ತಾವು ಕೋಣೆಯಲ್ಲಿ ಬಂಧಿಸಿಕೊಂಡಿದ್ದಾರೆ. ಹೀಗಿದ್ದರೂ ರೋಗಿಯ ಸಂಬಂಧಿಕರು ದಾಳಿ ಮುಂದುವರೆಸಿ, ಅವರಿಗೆ ಥಳಿಸಿದ್ದಾರೆ. ಹೀಗಿರುವಾಗ ಉಳಿದ ವೈದ್ಯರು ಹಾಗೂ ದಾದಿಯರು ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ. ಗಾಯಗೊಂಡಿದ್ದ ಡಾ. ಸೇನಾಪತಿಯನ್ನು ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಖಂಡಿಸಿದ ಐಎಂಎ
ಈ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಜೆಎ ಜಯ್‌ಲಾಲ್ ಘಟನೆಯನ್ನು ಖಂಡಿಸಿ, ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದೊಂದು ಅನಾಗರಿಕ ಘಟನೆ
ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಸ್ಸಾಂ ಸಿಎಂ ಈ ಘಟನೆಯನ್ನು ಖಂಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆದೇಶಿಸಿದ್ದಾರೆ. ಫ್ರಂಟ್ ಲೈನ್ ವರ್ಕರ್ಸ್ ಮೇಲಿನ ಈ ದಾಳಿ ಅಸಹನೀಯ ಎಂದಿದ್ದಾರೆ. ಇನ್ನು ಪೊಲೀಸ್ ಮಹಾ ನಿರ್ದೇಶಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಘಟನೆ ಸಂಬಂಧ ಮೂವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ