
ಧಾರ್ (ಮಾ.23): ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ 11ನೇ ಶತಮಾನದ ಭೋಜ್‌ಶಾಲಾ ದೇಗುಲ ಮತ್ತು ಮಸೀದಿ ಪ್ರಾಂಗಣದ ಸರ್ವೇಕ್ಷಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಭಾರೀ ಬಿಗಿ ಭದ್ರತೆಯಲ್ಲಿ ಶುಕ್ರವಾರ ಆರಂಭಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್, ‘ಎಎಸ್‌ಐನ ತಂಡ ಪ್ರಾಂಗಣದ ಸರ್ವೇಕ್ಷಣೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಆರಂಭಿಸಿದ್ದು, ಅವರಿಗೆ ಅಗತ್ಯವಿರುವ ಎಲ್ಲ ಪರಿಕರ ಮತ್ತು ಸಹಕಾರವನ್ನು ಸ್ಥಳೀಯ ಜಿಲ್ಲಾಡಳಿತದ ವತಿಯಿಂದ ನೀಡಿದ್ದೇವೆ’ ಎಂದು ತಿಳಿಸಿದರು.
ಏನಿದು ವಿವಾದ?: ಭೋಜ್‌ಶಾಲಾ ಪ್ರಾಂಗಣದಲ್ಲಿ ಹಿಂದೂಗಳು ಮಧ್ಯಕಾಲೀನ ಯುಗದ ಕೆತ್ತನೆಯಿರುವ ವಾಗ್ದೇವಿ(ಸರಸ್ವತಿ) ಗುಡಿಯಿದೆ ಎಂದು ವಾದಿಸುತ್ತಿದ್ದರೆ ಮುಸಲ್ಮಾನರು ಆ ಜಾಗದಲ್ಲಿ ಕಮಲ್ ಮೌಲಾ ಮಸೀದಿಯಿದೆ ಎಂದು ವಾದಿಸುತ್ತಿದ್ದಾರೆ. ಪ್ರಸ್ತುತ ಪ್ರತಿ ಮಂಗಳವಾರದಂದು ಹಿಂದೂಗಳು ಪೂಜಿಸುತ್ತಿದ್ದರೆ, ಪ್ರತಿ ಶುಕ್ರವಾರಗಳಂದು ಮುಸಲ್ಮಾನರು ಪ್ರಾರ್ಥಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಮೂಲ ಕಟ್ಟಡವನ್ನು ಪತ್ತೆ ಮಾಡಲು ಈ ಜಾಗವನ್ನು 6 ವಾರಗಳೊಳಗೆ ಸರ್ವೇಕ್ಷಣೆ ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಎಎಸ್‌ಐಗೆ ಮಾ.11ರಂದು ಆದೇಶಿಸಿತ್ತು.
ಪೊಲೀಸರು ಮೈಯೆಲ್ಲಾ ಕಣ್ಣಾಗಿಸಿದ್ದರೂ ದಾವಣಗೆರೆಯ ದುಗ್ಗಮ್ಮನಿಗೆ ಹನ್ನೊಂದನೇ ಹೊಡೆತಕ್ಕೆ ಕೋಣ ಬಲಿ!
ಹಿಂದೂಗಳು ಇದನ್ನು ಭೋಜ ರಾಜ ನಿರ್ಮಿಸಿದ ವಾಗ್ದೇವಿ (ಸರಸ್ವತಿ) ದೇಗುಲ ಎನ್ನುತ್ತಾರೆ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಆಡಳಿತದಲ್ಲಿ ಧ್ವಂಸಗೊಳಿಸಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೂರುತ್ತಾರೆ. ಆದರೆ ಇದು ದೇಗುಲವಲ್ಲ, ಕಮಲ್ ಮೌಲಾ ಮಸೀದಿ ಎಂಬುದು ಮುಸ್ಲಿಮರ ವಾದ.
ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಸಂಬಂಧ ಉಭಯ ಬಣಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಆಗಾಗ್ಗೆ ನಿರ್ಮಾಣ ಆಗುತ್ತಿರುತ್ತದೆ. ಅದರಲ್ಲೂ ಸರಸ್ವತಿ ಆರಾಧನೆಯ ಬಸಂತ ಪಂಚಮಿಯು ಮುಸ್ಲಿಮರ ನಮಾಜ್ ನಡೆಯುವ ಶುಕ್ರವಾರವೇ ಬಂದಾಗ ಪೂಜೆ/ ಪ್ರಾರ್ಥನೆ ವಿವಾದ ಮತ್ತಷ್ಟು ಭುಗಿಲೇಳುತ್ತದೆ.
ಹೀಗಾಗಿ 2003ರಿಂದ ಇಲ್ಲಿ ಪ್ರತಿ ಮಂಗಳವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಪುರಾತತ್ವ ಇಲಾಖೆ ವಶದಲ್ಲಿರುವ ಈ ದೇಗುಲವನ್ನು ಮರಳಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಇದನ್ನು ಮುಸ್ಲಿಂ ಬಣ ವಿರೋಧಿಸಿತ್ತು. ಈ ಕುರಿತು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇದೀಗ ವಿವಾದಿತ ಪ್ರದೇಶದ ಇತಿಹಾಸ ಅರಿಯಲು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದೆ.
ರಷ್ಯಾ ಮ್ಯೂಸಿಕ್ ಕನ್ಸರ್ಟ್ ಹಾಲ್ ಮೇಲೆ ಭಾರೀ ಉಗ್ರರ ದಾಳಿ, 60 ಜನರ ಬಲಿ!
ವಿಶೇಷವೆಂದರೆ ಕಾಶಿ ಜ್ಞಾನವಾಪಿ ಮಸೀದಿ, ಮಥುರಾ ಕೃಷ್ಣ ಮಂದಿರ ಪ್ರಕರಣದಲ್ಲಿ ಹಿಂದೂಗಳ ಪರ ವಕೀಲರಾಗಿರುವ ವಿಷ್ಣು ಶಂಕರ್ ಜೈನ್ ಅವರ ಕೋರಿಕೆ ಅನ್ವಯ ಇಲ್ಲಿ ಸಮೀಕ್ಷೆಗೆ ಆದೇಶ ಹೊರಬಿದ್ದಿದೆ. 1902-03ರಲ್ಲಿ ಎಎಎಸ್‌ಐ ನಡೆಸಿದ್ದ ಉತ್ಖನನದ ವೇಳೆ ಇದು ಮೂಲ ಹಿಂದೂ ದೇಗುಲ ಎಂದು ಕಂಡುಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ