Latest Videos

ಮೋದಿ ಭೇಟಿ ಬಳಿಕ ಗೂಗಲ್‌ನಲ್ಲಿ 50 ಸಾವಿರ ಜನರಿಂದ 'ಲಕ್ಷದ್ವೀಪ ಸರ್ಚ್‌'

By Kannadaprabha NewsFirst Published Jan 6, 2024, 7:41 AM IST
Highlights

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ಸ್ನಾರ್ಕಲಿಂಗ್‌ ಮಾಡಿದ ಫೋಟೋ ವೈರಲ್‌ ಆಗುತ್ತಿದ್ದಂತೆ ಭಾರತೀಯರು ಲಕ್ಷದ್ವೀಪದ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ದಿಢೀರ್‌ ಏರಿಕೆಯಾಗಿದೆ. ಅದರ ಜೊತೆಗೇ, ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ತೆರಳಿ ಎಂದು ಮೋದಿ ಕರೆ ನೀಡಿರುವುದು ಇತ್ತೀಚೆಗೆ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ದೊಡ್ಡ ಶಾಕ್‌ ನೀಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ಸ್ನಾರ್ಕಲಿಂಗ್‌ ಮಾಡಿದ ಫೋಟೋ ವೈರಲ್‌ ಆಗುತ್ತಿದ್ದಂತೆ ಭಾರತೀಯರು ಲಕ್ಷದ್ವೀಪದ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ದಿಢೀರ್‌ ಏರಿಕೆಯಾಗಿದೆ. ಅದರ ಜೊತೆಗೇ, ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ತೆರಳಿ ಎಂದು ಮೋದಿ ಕರೆ ನೀಡಿರುವುದು ಇತ್ತೀಚೆಗೆ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ದೊಡ್ಡ ಶಾಕ್‌ ನೀಡಿದೆ.

ಬುಧವಾರ ಭಾರತದಲ್ಲಿ ಅತಿಹೆಚ್ಚು ಗೂಗಲ್‌ ಸರ್ಚ್‌ ಆದ 9ನೇ ಪದ ಲಕ್ಷದ್ವೀಪವಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಇದರ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಾಡಿದ್ದಾರೆ.

ಒಂದೇ ಏಟಿಗೆ ಎರಡು ಹಕ್ಕಿ:

ಮಾಲ್ಡೀವ್ಸ್‌ಗೆ ಪ್ರತಿ ವರ್ಷ ಲಕ್ಷಾಂತರ ಭಾರತೀಯರು ತೆರಳುತ್ತಾರೆ. ತನ್ಮೂಲಕ ಅಲ್ಲಿನ ಪ್ರವಾಸೋದ್ಯಮವನ್ನು ಬೆಳೆಸುತ್ತಾರೆ. ಅವರನ್ನು ಲಕ್ಷದ್ವೀಪದತ್ತ ತಿರುಗಿಸಿ, ನಮ್ಮ ದೇಶದ ಪ್ರವಾಸಿಗರು ಮಾಡುವ ಖರ್ಚು ನಮ್ಮ ದೇಶದ ಪ್ರವಾಸೋದ್ದಿಮೆಗೇ ಆದಾಯವಾಗುವಂತೆ ಮಾಡುವ ತಂತ್ರ ಮೋದಿ ನಡೆಯಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್, ಸಮುದ್ರ ಸೌಂದರ್ಯಕ್ಕೆ ಮಂತ್ರಮುಗ್ಧ

ಭಾರತದ ಸ್ನೇಹಿತ ರಾಷ್ಟ್ರವಾಗಿದ್ದ ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ಹೊಸ ಸರ್ಕಾರ ರಚನೆಯಾಗಿದ್ದು, ಅದು ಭಾರತವನ್ನು ಬದಿಗೊತ್ತಿ ಚೀನಾದತ್ತ ವಾಲುತ್ತಿದೆ. ಜೊತೆಗೆ, ತನ್ನ ನೆಲದಿಂದ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಸೂಚಿಸಿದೆ. ಪ್ರವಾಸೋದ್ದಿಮೆಯ ಮೇಲೆ ಆರ್ಥಿಕತೆಯನ್ನು ಕಟ್ಟಿಕೊಂಡಿರುವ ಮಾಲ್ಡೀವ್ಸ್‌ಗೆ ಪ್ರತಿ ವರ್ಷ ಸುಮಾರು 3 ಲಕ್ಷ ಭಾರತೀಯರು ತೆರಳುತ್ತಾರೆ. ಮಾಲ್ಡೀವ್ಸ್‌ಗೆ ಭೇಟಿ ನೀಡುವ ಹೆಚ್ಚಿನ ವಿದೇಶಿ ಪ್ರವಾಸಿಗರು ಭಾರತೀಯರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಲಕ್ಷದ್ವೀಪಕ್ಕೆ ತೆರಳುವಂತೆ ಮೋದಿ ನೀಡಿರುವ ಕರೆ ಏಕಕಾಲಕ್ಕೆ ಮಾಲ್ಡೀವ್ಸ್‌ಗೆ ಪಾಠ ಕಲಿಸುವ ಹಾಗೂ ಲಕ್ಷದ್ವೀಪದ ಪ್ರವಾಸೋದ್ಯಮವನ್ನು ಬೆಳೆಸುವ ಗುರಿ ಹೊಂದಿದೆ ಎಂದು ಹೇಳಲಾಗುತ್ತಿದೆ.

ಮಾಲ್ಡೀವ್ಸ್‌, ಲಕ್ಷದ್ವೀಪ ನಡುವೆ ಸಾಮ್ಯತೆ:

ಲಗೂನ್‌ಗಳು, ಬಿಳಿ ಮರಳು, ಸ್ವಚ್ಛ ಬೀಚ್‌ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್‌ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಆದರೆ ಸಾಕಷ್ಟು ಮೂಲಸೌಕರ್ಯ ಇಲ್ಲದಿರುವುದು ಮತ್ತು ಪೂರ್ವಾನುಮತಿ ಪಡೆಯಬೇಕೆಂಬ ನಿಯಮಗಳು ಲಕ್ಷದ್ವೀಪಕ್ಕೆ ಹೆಚ್ಚು ಭಾರತೀಯರು ಪ್ರವಾಸಕ್ಕೆ ಹೋಗದಂತೆ ಮಾಡಿವೆ. ಆದರೂ ಇತ್ತೀಚೆಗೆ ಲಕ್ಷದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ತೀವ್ರ ಹೆಚ್ಚಳವಾಗಿದ್ದು, 2021ರಲ್ಲಿ ಇಲ್ಲಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ 4000 ಇದ್ದರೆ, 2022ರಲ್ಲಿ ಅದು 1 ಲಕ್ಷಕ್ಕೆ ಏರಿಕೆಯಾಗಿದೆ.

2021ರಲ್ಲಿ ಕೊರೋನಾದಿಂದಾಗಿ ಭಾರತದ ಪ್ರವಾಸೋದ್ಯಮ ತೀವ್ರ ಕುಸಿದಿದ್ದಾಗ ಪ್ರಧಾನಿ ಮೋದಿ ಕಾಶ್ಮೀರದ ಟ್ಯೂಲಿಪ್‌ ಗಾರ್ಡನ್‌ನಲ್ಲಿ ವಿಹರಿಸಿ, ಕಾಶ್ಮೀರಕ್ಕೆ ಭೇಟಿ ನೀಡಲು ಇದು ಒಳ್ಳೆಯ ಸಮಯ ಎಂದು ಟ್ವೀಟ್‌ ಮಾಡಿದ್ದರು. ಬಳಿಕ ಕಾಶ್ಮೀರಕ್ಕೆ ಪ್ರವಾಸಿಗರ ಸಾಗರವೇ ಹರಿದಿತ್ತು.

ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!

click me!