
ಬೀಜಿಂಗ್ (ಮಾ.18): ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದ ದ್ವಿಪಥ ಸುರಂಗ ಉದ್ಘಾಟಿಸಿದ ಬೆನ್ನಲ್ಲೇ ಮತ್ತೆ ಕ್ಯಾತೆ ತೆಗೆದಿದ್ದು, ಕ್ಸಿಜಾಂಗ್ (ಅರುಣಾಚಲಕ್ಕೆ ಚೀನಾ ಇಟ್ಟಿರುವ ಹೆಸರು) ತನಗೆ ಸೇರಿದ ಅಂತರ್ಗತ ಭಾಗ ಎಂದು ಪ್ರತಿಪಾದಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಚೀನಾದ ರಕ್ಷಣಾ ಇಲಾಖೆ ವಕ್ತಾರ ಜಾಂಗ್ ಶಿಯೋಗಾಂಗ್, ‘ಕ್ಸಿಜಾಂಗ್ ಪ್ರದೇಶವು ಚೀನಾದ ದಕ್ಷಿಣ ಟಿಬೆಟ್ ಪ್ರಾಂತ್ಯದ ಅಂತರ್ಗತ ಭಾಗವಾಗಿದ್ದು, ಭಾರತ ಅರುಣಾಚಲ ಎಂಬ ಹೆಸರಿನಲ್ಲೇ ಕಾನೂನುಬಾಹಿರವಾಗಿ ಆ ಜಾಗವನ್ನು ಅತಿಕ್ರಮಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.
ಈ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ‘ಅರುಣಾಚಲ ಹಿಂದೆಯೂ, ಇಂದು ಮತ್ತು ಮುಂದೂ ಸಹ ಭಾರತದ ಪ್ರದೇಶವಾಗಿರಲಿದೆ’ ಎಂದಿದ್ದಾರೆ.
Lok Sabha Election 2024: ಚಳಿಗಾಲದ ಚುನಾವಣೆ ಬಿರು ಬೇಸಿಗೆಗೆ ಶಿಫ್ಟ್!
ನವೀಕರಿಸಿರುವ ಭೂಪಟ ಮಾಡಿದ ಚೀನಾ: ಭಾರತಕ್ಕೆ ಕಿರಿಕಿರಿ ಉಂಟು ಮಾಡಲು, ಭಾರತದ ಗಡಿಯಲ್ಲಿ ಶಾಂತಿಯನ್ನು ಕದಡಲು ಹಾಗೂ ಈಶಾನ್ಯ ಭಾರತದಲ್ಲಿ ವಿವಾದಾಸ್ಪದ ಪ್ರದೇಶಗಳ ಮೇಲೆ ತನ್ನ ಪಾರಮ್ಯವನ್ನು ಸಾಧಿಸಲು ಕಮ್ಯುನಿಸ್ಟ್ ದೇಶ ಚೀನಾ ಕಳೆದ ವರ್ಷ ಪ್ರದೇಶಗಳ ಮರುನಾಮಕರಣ ಮಾಡಿತ್ತು. ಚೀನಾ ಈಗ ಭಾರತ ಸೇರಿದಂತೆ 14 ದೇಶಗಳೊಂದಿಗೆ 22,000 ಕಿಲೋಮೀಟರ್ ಉದ್ದವಾದ ಭೂ ಗಡಿಯನ್ನು ಹಂಚಿಕೊಂಡಿದೆ. ಸಂಪೂರ್ಣ ಅರುಣಾಚಲವು ತನ್ನ ಭೂಪ್ರದೇಶವಾಗಬೇಕೆಂದು ಚೀನಾ ಬಯಸುತ್ತಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ತನ್ನ ನಿಲ್ಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಚೀನಾ ಈಗಾಗಲೇ ಅಧಿಕೃತವಾಗಿ ನವೀಕರಿಸಿರುವ ಭೂಪಟ ಮಾಡಿದ್ದು, ಅದರಲ್ಲಿ ಭಾರತದ ಗಡಿಯನ್ನು ದಾಟಿದೆ. ಇನ್ನು ತೈವಾನ್ನ್ನು ಕೂಡ ತನ್ನ ಭೂಪ್ರದೇಶದಿಂದ ಬೇರ್ಪಡಿಸಲಾಗದ ಭಾಗವೆಂದು ಚೀನಾ ಹೇಳಿಕೊಂಡಿದೆ.
ಮಾರ್ಚ್ 9ರಂದು ಸುರಂಗ ಉದ್ಘಾಟಿಸಿದ್ದ ಮೋದಿ:ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಅರುಣಾಚಲಪ್ರದೇಶದ ತಾವಾಂಗ್ ಪ್ರದೇಶಕ್ಕೆ ಸರ್ವಋತು ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಸಮುದ್ರಮಟ್ಟದಿಂದ 13000 ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ಉದ್ದದ ಬೈಲೇನ್ ಸುರಂಗ (ಜೋಡಿ ಸುರಂಗ) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದರು.
ಚುನಾವಣೆಯಲ್ಲಿ ತಾರಾ ಪ್ರಚಾರಕರ ಕಮಾಲ್, ಬಿಜೆಪಿಯಲ್ಲಿ ಮೋದಿ ಚರಿಷ್ಮಾ, ಟಾಪ್ 10 ಗೇಮ್ ಚೇಂಜರ್‌ಗಳಿವರು
ಈ ಸುರಂಗ ಮಾರ್ಗದಿಂದ ಅಸ್ಸಾಂನ ತೇಜ್‌ಪುರದಿಂದ ಅರುಣಾಚಲಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಗೆ ಸಂಪರ್ಕ ಸಾಧ್ಯವಾಗಲಿದೆ. 825 ಕೋಟಿ ರು. ವೆಚ್ಚದಲ್ಲಿ ಸೇಲಾ ಎಂಬಲ್ಲಿ ಈ ಸುರಂಗ ನಿರ್ಮಿಸಲಾಗಿದೆ. ಅರುಣಾಚಲಪ್ರದೇಶ ತನ್ನದೆಂದು ಪದೇ ಪದೇ ಮೊಂಡು ವಾದ ಮಂಡಿಸಿ ತಗಾದೆ ತೆಗೆಯುವ ಚೀನಾಕ್ಕೆ ಈ ಸುರಂಗ ಉತ್ತರ ನೀಡಿದಂತಿದೆ. ಈ ಸುರಂಗ ಬಳಸಿ ಅರುಣಾಚಲಪ್ರದೇಶದ ಗಡಿ ವಾಸ್ತವಿಕ ರೇಖೆಗೆ ಸೇನಾಪಡೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭೂಕುಸಿತ, ಹಿಮಪಾತದಂತಹ ಪ್ರತಿಕೂಲ ಹವಾಮಾನ ಸಂದರ್ಭದಲ್ಲೂ ರವಾನಿಸಬಹುದಾಗಿದೆ.
ಸೇಲಾ ಸುರಂಗ ಯೋಜನೆಯಡಿ ಎರಡು ಪ್ರತ್ಯೇಕ ಸುರಂಗಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಸುರಂಗ 980 ಮೀಟರ್ ಉದ್ದವಿದೆ. ಅದು ಏಕ ಮಾರ್ಗವಾಗಿದೆ. ಮತ್ತೊಂದು ಸುರಂಗ 1555 ಮೀಟರ್ ಉದ್ದವಿದ್ದು, ದ್ವಿಪಥವಾಗಿದೆ. ಒಂದು ಮಾರ್ಗವನ್ನು ವಾಹನಗಳ ಸಂಚಾರಕ್ಕೆ, ಮತ್ತೊಂದನ್ನು ತುರ್ತು ಸೇವೆಗಳಿಗೆ ಬಳಸಬಹುದಾಗಿದೆ. ಈ ಎರಡೂ ಸುರಂಗಗಳಿಗೆ 1200 ಮೀಟರ್ ಉದ್ದದ ಲಿಂಕ್ ರಸ್ತೆಯನ್ನು ನಿರ್ಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ