Latest Videos

ಅಗ್ನಿವೀರರಿಗಷ್ಟೇ ಸೇನೆಯಲ್ಲಿ ಎಂಟ್ರಿ: ವೈದ್ಯ, ತಾಂತ್ರಿಕ ಸಿಬ್ಬಂದಿ ಹೊರತುಪಡಿಸಿ ಮಿಕ್ಕವರಿಗೆ ಅವಕಾಶವಿಲ್ಲ!

By Suvarna NewsFirst Published Jun 21, 2022, 11:17 AM IST
Highlights

* ವೈದ್ಯ, ತಾಂತ್ರಿಕ ಸಿಬ್ಬಂದಿ ಹೊರತುಪಡಿಸಿ ಮಿಕ್ಕವರಿಗೆ ನೇಮಕದಲ್ಲಿ ಅವಕಾಶವಿಲ್ಲ

* 4 ವರ್ಷದ ಬಳಿಕ ಸೇನೆ ಸೇರುವವರಿಗೆ ಸಿಗುವ ನಿಧಿಯಲ್ಲಿ ಸರ್ಕಾರದ ಪಾಲಿರಲ್ಲ

* ಮಧ್ಯದಲ್ಲೇ ಸೇನಾ ನೌಕರಿ ತೊರೆವ ಅಗ್ನಿವೀರರಿಗೂ ಸರ್ಕಾರಿ ನಿಧಿ ಸಿಗುವುದಿಲ್ಲ

* ಸೇನಾ ಮಾಹಿತಿ ಸೋರಿಕೆ ನಿಷಿದ್ಧ, ಜುಲೈನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ

ನವದೆಹಲಿ(ಜೂ.21): ‘ಅಗ್ನಿಪಥ’ ಯೋಜನೆಯಡಿ ನಾಲ್ಕು ವರ್ಷಗಳಷ್ಟುಅಲ್ಪ ಅವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಸಂಬಂಧ ವಾಯುಪಡೆ ಬಳಿಕ ಇದೀಗ ಭೂಸೇನೆ ಕೂಡ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಒಳಗೊಂಡ ಅಧಿಸೂಚನೆ ಪ್ರಕಟಿಸಿದೆ. ಅಗ್ನಿಪಥ ಯೋಜನೆ ಜಾರಿಯೊಂದಿಗೆ, ಭೂಸೇನೆಯ ಸಾಮಾನ್ಯ ನೇಮಕಾತಿಯಲ್ಲಿ ಅಗ್ನಿವೀರರಿಗಷ್ಟೇ ಅವಕಾಶ ಇರಲಿದೆ. ಅಂದರೆ, ಅಗ್ನಿವೀರರಾಗಿ ಸೇವೆ ಸಲ್ಲಿಸದಂತಹ ವ್ಯಕ್ತಿಗಳು ಸೇನೆಯಲ್ಲಿ ಪ್ರವೇಶ ಪಡೆಯುವುದು ಇನ್ನು ಸಾಧ್ಯವಿಲ್ಲ. ಆದರೆ ಇದು ವೈದ್ಯಕೀಯ ವಿಭಾಗದಂತಹ ತಾಂತ್ರಿಕ ವಿಭಾಗಗಳಿಗೆ ಅನ್ವಯವಾಗುವುದಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.

ನಾಲ್ಕು ವರ್ಷಗಳ ಸೇವಾವಧಿ ಸಲ್ಲಿಸಿದವರ ಪೈಕಿ ಶೇ.25 ಮಂದಿಯನ್ನು ಸೇನೆಗೆ ಸಾಮಾನ್ಯ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ಆ ರೀತಿ ಆಯ್ಕೆಯಾದವರಿಗೆ ದೊರೆಯುವ ಸೇವಾ ನಿಧಿಯಲ್ಲಿ ಸರ್ಕಾರ ಪಾಲು ಇರುವುದಿಲ್ಲ. ಅಂದರೆ ಶೇ.75ರಷ್ಟುಅಭ್ಯರ್ಥಿಗಳಿಗೆ 10.04 ಲಕ್ಷ ರು. (ಬಡ್ಡಿ ಹೊರತುಪಡಿಸಿ) ಪ್ಯಾಕೇಜ್‌ ಸಿಕ್ಕರೆ, ಸೇನೆಗೆ ಆಯ್ಕೆಯಾದವರಿಗೆ ಸೇವಾವಧಿಯಲ್ಲಿ ತಮ್ಮ ವೇತನದಿಂದ ಕಡಿತಗೊಂಡ ಮೊತ್ತವಾದ 5.02 ಲಕ್ಷ ರು. (ಬಡ್ಡಿ ಹೊರತುಪಡಿಸಿ) ಮಾತ್ರ ಸಿಗಲಿದೆ.

ಅಗ್ನಿವೀರರ ನೇಮಕಾತಿಗೆ ಸೇನಾ ವೆಬ್‌ಸೈಟ್‌ ಡಿಡಿಡಿ.್ಜಟಜ್ಞಿಜ್ಞಿdಜಿa್ಞa್ಟಞy.್ಞಜ್ಚಿ.ಜ್ಞಿ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಈ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಜುಲೈನಿಂದ ಆರಂಭವಾಗಲಿದೆ. ಅಗ್ನಿವೀರರಾಗಿ ಆಯ್ಕೆಯಾದವರು ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಗಳಿಸಿದ ಅತ್ಯಂತ ರಹಸ್ಯ ಮಾಹಿತಿಗಳನ್ನು ಅನಧಿಕೃತ ವ್ಯಕ್ತಿಗಳು ಹಾಗೂ ಮೂಲಗಳಿಗೆ ನೀಡುವುದು 1923ರ ಅಧಿಕೃತ ರಹಸ್ಯ ಕಾಯ್ದೆಯಡಿ ನಿಷಿದ್ಧವಾಗಿರುತ್ತದೆ ಎಂದು ಸೇನೆ ಹೇಳಿದೆ.

ನಾಲ್ಕು ವರ್ಷಗಳ ಸೇವಾವಧಿ ಮುಗಿವ ಮುನ್ನವೇ ಅಗ್ನಿವೀರರು ಸ್ವಯಂ ಕೋರಿಕೆ ಇಟ್ಟು ಸೇನೆಯಿಂದ ಹೊರಬರುವುದಕ್ಕೆ ಅವಕಾಶವಿಲ್ಲ. ಆದರೆ ಅಸಾಧಾರಣ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರ ಅನುಮತಿಯೊಂದಿಗೆ ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ಅಂಥವರು ಎಷ್ಟುದಿನಗಳ ಕಾಲ ಸೇವೆ ಸಲ್ಲಿಸಿದ್ದಾರೋ ಅಲ್ಲಿವರೆಗೆ ಸಂಗ್ರಹಗೊಂಡಿರುವ ಸೇವಾ ನಿಧಿ ಪ್ಯಾಕೇಜ್‌ ಅನ್ನು ನೀಡಲಾಗುತ್ತದೆ. ಆದರೆ ಅದರಲ್ಲಿ ಸರ್ಕಾರದ ಕೊಡುಗೆ ಅಂಶ ಸೇರಿರುವುದಿಲ್ಲ. 4 ವರ್ಷ ಅವಧಿ ಪೂರೈಸಿದವರಿಗೆ ಮಾತ್ರ ಸರ್ಕಾರದ ಪಾಲು ದಕ್ಕಲಿದೆ ಎಂದು ನಿಯಮಾವಳಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾಮಾನ್ಯ ಸೇವೆಯಲ್ಲಿರುವ ಯೋಧರಿಗೆ ವಾರ್ಷಿಕ 90 ದಿನಗಳ ರಜೆ ಸಿಗಲಿದೆ. ಆದರೆ ಅಗ್ನಿವೀರರಿಗೆ ವಾರ್ಷಿಕ 30 ದಿನ ರಜೆ ಲಭಿಸಲಿವೆ. ವೈದ್ಯಕೀಯ ಸಲಹೆ ಆಧರಿಸಿ ವೈದ್ಯಕೀಯ ರಜೆ ಮಂಜೂರು ಮಾಡಲಾಗುತ್ತದೆ. 18 ವರ್ಷದೊಳಗಿನವರು ಅಗ್ನಿವೀರರಾಗಲು ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ ಎಂದು ಮಾರ್ಗಸೂಚಿ- ನಿಯಮಾವಳಿಗಳು ಹೇಳುತ್ತವೆ.

click me!