ಸೇನೆಯಿಂದ 5000 ಕೋಟಿ ರು ಮೊತ್ತದ ತುರ್ತು ಖರೀದಿ| ಚೀನಾ ಸಂಘರ್ಷ, ಪಾಕ್ ಕ್ಯಾತೆ ಬೆನ್ನಲ್ಲೇ ಶಸ್ತ್ರಾಸ್ತ್ರ ಖರೀದಿ| ಕಳೆದ ವರ್ಷ ಒಟ್ಟಾರೆ 18000 ಕೋಟಿ ಮೊತ್ತದ ಖರೀದಿ
ನವದೆಹಲಿ(ಜ.6): ಕಳೆದ ವರ್ಷ ಭಾರತೀಯ ಸೇನೆ, ತನ್ನ ಶಸ್ತ್ರಾಸ್ತ್ರ ಬಲವನ್ನು ಹೆಚ್ಚಿಸಿಕೊಳ್ಳಲು ಒಟ್ಟಾರೆ 18000 ಕೋಟಿ ರು. ವ್ಯಯಿಸಿತ್ತು. ಅದರಲ್ಲೂ ಚೀನಾ ಸಂಘರ್ಷ ಹೆಚ್ಚಾದ ಬಳಿಕ ತನ್ನ ತುರ್ತು ಬಳಕೆಯ ಅಧಿಕಾರ ಬಳಸಿ 5000 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಿತ್ತು ಎಂದು ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ತಿಳಿಸಿದ್ದಾರೆ.
ಸೇನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕ್ಯಾತೆ ಮತ್ತು ಲಡಾಖ್‌ನಲ್ಲಿ ಚೀನಾದ ಜೊತೆಗಿನ ಸಂಘರ್ಷ ಹೆಚ್ಚಾದ ಬಳಿಕ ತುರ್ತು ಬಳಕೆಯ ಅಧಿಕಾರ ಬಳಸಿ 38 ಒಪ್ಪಂದಗಳ ಮೂಲಕ 5000 ಕೋಟಿ ರು.ಮೊತ್ತದ ಶಸ್ತ್ರಾಸ್ತ್ರ ಖರೀದಿ ನಡೆಸಲಾಗಿತ್ತು. ಇಷ್ಟು ಮಾತ್ರವಲ್ಲದೇ, ಕಠಿಣ ವಾತಾವರಣದಲ್ಲಿ ಯೋಧರ ಯೋಗಕ್ಷೇಮಕ್ಕಾಗಿ ಮತ್ತು ಅವರ ಕುಟುಂಬ ಸದಸ್ಯರ ಕಲ್ಯಾಣ ಕಾರ್ಯಗಳಿಗಾಗಿ ನಾವು ಒಟ್ಟು 13000 ಕೋಟಿ ರು.ವೆಚ್ಚ ಮಾಡಿದ್ದೇವೆ.
ಇದರಲ್ಲಿ ಯೋಧರಿಗೆ ಚಳಿಯಿಂದ ರಕ್ಷಣೆ ನೀಡುವ ವಸ್ತ್ರಗಳು, ಟೆಂಟ್ ಮತ್ತಿತರೆ ವಸ್ತುಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.