ಭಾರತದ ಸಹನೆ ಪರೀಕ್ಷಿಸಲು ಬರಬೇಡಿ| ಗಲ್ವಾನ್ ವೀರರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ| ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾಕ್ಕೆ ಸೇನೆ ಎಚ್ಚರಿಕೆ
ನವದೆಹಲಿ(ಜ.16: ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಹಾಗೂ ರಾಜಕೀಯ ಪ್ರಯತ್ನಗಳ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಬದ್ಧರಾಗಿದ್ದೇವೆ. ಹಾಗಂತ ಯಾರೇ ಆಗಲಿ ಭಾರತದ ಸಹನೆ ಕೆಣಕುವ ತಪ್ಪು ಮಾಡಬಾರದು ಎಂದು ಗಡಿಯಲ್ಲಿ ನಿರಂತರವಾಗಿ ಕ್ಯಾತೆ ತೆಗೆದುಕೊಂಡು ಬಂದಿರುವ ಚೀನಾಕ್ಕೆ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಗಡಿಯಲ್ಲಿ ಏಕಪಕ್ಷೀಯವಾಗಿ ಬದಲಾವಣೆ ಮಾಡುವ ಸಂಚಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೇವೆ. ಪೂರ್ವ ಲಡಾಖ್‌ನಲ್ಲಿ ಹುತಾತ್ಮರಾದ ಗಲ್ವಾನ್ ವೀರರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಭರವಸೆಯನ್ನು ದೇಶಕ್ಕೆ ನೀಡುತ್ತೇವೆ. ಅಲ್ಲದೆ ದೇಶದ ಸಾರ್ವಭೌಮತೆ ಹಾಗೂ ಭದ್ರತೆಗೆ ಘಾಸಿಯಾಗಲು ಭಾರತೀಯ ಸೇನೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ಪಾಕಿಸ್ತಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಸ್ತಾಪಿಸಿದ ಅವರು, ಭಯೋತ್ಪಾದಕರಿಗೆ ನೆರೆಯ ದೇಶ ಆಶ್ರಯ ಒದಗಿಸಿದೆ. ಶತ್ರು ದೇಶಕ್ಕೆ ಕಠಿಣ ಪ್ರತ್ಯುತ್ತರ ನೀಡಲಾಗುತ್ತದೆ. ಗಡಿಯಾಚೆ ಇರುವ ಭಯೋತ್ಪಾದಕರ ಶಿಬಿರಗಳಲ್ಲಿ 300ರಿಂದ 400 ಉಗ್ರರು ಭಾರತಕ್ಕೆ ನುಸುಳಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ಕದನ ವಿರಾಮ ಉಲ್ಲಂಘನೆ ಶೇ.40ರಷ್ಟುಏರಿಕೆಯಾಗಿದೆ. ಪಾಕಿಸ್ತಾನದ ದುಷ್ಟಯೋಜನೆಗೆ ಇದುವೇ ನಿದರ್ಶನ. ಡ್ರೋನ್‌ಗಳನ್ನು ಬಳಸಿ ಶಸ್ತ್ರಾಸ್ತ್ರ ಸಾಗಿಸುವ ಯತ್ನವೂ ನಡೆದಿದೆ ಎಂದು ಹೇಳಿದರು.
ಕಳೆದ ಮೇ ತಿಂಗಳಿನಿಂದ ಪೂರ್ವ ಲಡಾಖ್ ಗಡಿಯಲ್ಲಿ ಭಾರತ- ಚೀನಾ ನಡುವೆ ಸಂಘರ್ಷವೇರ್ಪಟ್ಟಿದೆ. ಕಳೆದ ಜೂ.15ರಂದು ಇದು ತಾರಕಕ್ಕೇರಿ ಉಭಯ ದೇಶಗಳ ಯೋಧರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದರು. ತನ್ನ ಎಷ್ಟುಯೋಧರು ಮಡಿದಿದ್ದಾರೆ ಎಂದು ಚೀನಾ ಈವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಅಮೆರಿಕದ ಗುಪ್ತಚರ ಸಂಸ್ಥೆಯ ವರದಿಯ ಪ್ರಕಾರ, ಭಾರತದ ಯೋಧರ ಜತೆಗಿನ ಕಾದಾಟ ವೇಳೆ 35 ಚೀನಾ ಯೋಧರು ಹತರಾಗಿದ್ದರು.