
ನವದೆಹಲಿ (ಅ.21) ಕಾಕ್ರೋಚ್ ಜನತಾ ಪಾರ್ಟಿ ಅಬ್ಬರಕ್ಕೆ ಹೈಕೋರ್ಟ್‌ನಲ್ಲಿ ಬ್ರೇಕ್ ಬಿದ್ದಿದೆ. ತಿರಂಗ ಹಿಡಿದ ಕಾರಣಕ್ಕೆ ಬಂಧಿಸಲಾಗಿದೆ, ತಿರಂಗ ಹಿಡಿದರೆ ಬಿಜೆಪಿ ಸರ್ಕಾರ ಅರೆಸ್ಟ್ ಮಾಡುತ್ತಿದೆ ಎಂದು ಬಿಂಬಿಸಲು ಹೊರಟ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಶ್ ರಂಕಾಗೆ ತೀವ್ರ ಹಿನ್ನಡೆಯಾಗಿದೆ.ನಿಷೇಧಿತ ಜಂತರ್ ಮಂತರ್ ಪ್ರವೇಶ ಮಾಡಿದ ಸಿಜೆಪಿ ನಾಯಕರಾದ ಅಶುತೋಶ್ ರಂಕಾ, ಸೌರವ್ ದಾಸ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಇದನ್ನು ಪ್ರಶ್ನಿಸಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಜೆಪಿ ನಾಯಕರನ್ನು ದೆಹಲಿ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನೀವು ಯಾರು? ನಿಮ್ಮ ವಯಸ್ಸು ನೋಡಿದರೆ ಜೆನ್‌ಝಿ ಕ್ಯಾಟಗರಿಯಲ್ಲಿ ನೀವು ಬರುವುದಿಲ್ಲ. ಬಾಂಡ್ ಉಲ್ಲಂಘಿಸಿದರೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುವುದು ತಪ್ಪಾ ಎಂದು ಹೈಕೋರ್ಟ್ ಪ್ರಶ್ನಿಸಿದೆ.ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ಸಲ್ಲಿಸಿದ ಅರ್ಜಿಯನ್ನು ಸಿಜೆಪಿ ಹಿಂಪಡೆದಿದೆ.
ದೆಹಲಿ 10ರಂದು ಸಿಜೆಪಿ ಆಯೋಜಿಸಿದ ಪ್ರತಿಭಟನೆ ವೇಳೆ ನಾಯಕರನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಮರು ದಿನ ಜಂತರ್ ಮಂತರ್ ಪ್ರತಿಭಟನಾ ಸ್ಥಳ ಅಲ್ಲ ಎಂದು ಘೋಷಿಸಿದ ಸರ್ಕಾರ, ಬೇರೆ ಸ್ಥಳ ಗುರುತಿಸಿತ್ತು. ಆದರೆ ನಿಷೇಧಿತ ಜಂತರ್ ಮಂತರ್ ಪ್ರವೇಶಿಸಿ ಪ್ರತಿಭಟಿಸಲು ಮುಂದಾದ ಸಿಜೆಪಿ ನಾಯಕರನ್ನು ಪೊಲೀಸರು ಅರೆಸ್ಟ್ ಮಾಡಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದೆ.
ಜಂತರ್ ಮಂತರ್ ನಿಷೇಧಿತ ಪ್ರದೇಶವಾಗಿತ್ತು. ಅಲ್ಲಿಗೆ ಬ್ಯಾರಿಕೇಡ್ ಮುರಿದು ಪ್ರವೇಶ ಮಾಡಿದ್ದೀರಿ. ಪ್ರತಿಭಟನೆ ಮಂಚೂಣಿಯಲ್ಲಿ ನೀವಿದ್ದೀರಿ. ನೀವೆ ನಾಯಕರು, ನೀವು ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದರೆ ಇತರರು ಅನುಸರಿಸುತ್ತಾರೆ. ನೀವು ನಿಯಂತ್ರಣದಲ್ಲಿರಬಹುದು, ಆದರೆ ನಿಮ್ಮ ನಿಯಂತ್ರಣದಲ್ಲಿರದ ಜನರು ಇರುತ್ತಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಸ್ಥಿತಿ ತಲುಪುತ್ತದೆ. ನಿಮಗೆ ವಿದೇಶಗಳಲ್ಲಿ ನಡೆಯತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳು ಗೊತ್ತಾ? ವಿದ್ಯಾರ್ಥಿ ಪ್ರತಿಭಟನೆಗಳು ಹಿಂಸಾರೂಪ ಪಡೆದಿದೆ. ಕಟ್ಟಡಕ್ಕೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದೆ. ನೀವೇ ಶಾಂತಿ ಪಾಲನೆ ಕುರಿತು ನೀಡಿದ ಬಾಂಡ್ ಉಲ್ಲಂಘಿಸಿದಾಗ ಅಧಿಕಾರಿಗಳು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬಾರದ ಎಂದು ಕೋರ್ಟ್ ಪ್ರಶ್ನಿಸಿದೆ.
ಸೌರವ್ ದಾಸ್ ಹಾಗೂ ಅಶುತೋಶ್ ರಾಂಕ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಜೆನ್‌ಝಿ ಹೆಸರಿನ ಪ್ರತಿಭಟನೆಯಲ್ಲಿ ನೀವು ಹೇಗೆ ಸೇರಿಕೊಂಡಿದ್ದೀರಿ ಎಂದು ಪ್ರಶ್ನಿಸಿತು. ಈ ಮೊದಲು ಮಾಡಿದ ಹೋರಾಟ ವಿದ್ಯಾರ್ಥಿಗಳ ಪ್ರತಿಭಟನೆಯಾಗಿತ್ತು. ಇಗೀಗ ಸ್ವರೂಪ ಬದಲಾಗಿದೆ. ಅಶುತೋಶ್ ರಂಗಾ ವಯಸ್ಸು 32 ಹಾಗೂ ಸೌರವ್ ದಾಸ್ 27. ನೀವು ಜೆನ್‌ಝಿ ಕ್ಯಾಟಗರಿಯಲ್ಲಿ ಬರುವುದಿಲ್ಲ. 1997ರ ನಂತರ ಜನಿಸಿದವರು ಜೆನ್‌ಝಿ, ನೀವು ಯಾರು ಎಂದು ಕೋರ್ಟ್ ಪ್ರಶ್ನಿಸಿತು.
ಘಟನೆ ನಡೆದ ಕೂಗಳತೆ ದೂರದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಇದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹೋಗದೆ ತುರ್ತಾಗಿ ಹೈಕೋರ್ಟ್‌ಗೆ ಬಂದಿದ್ದೇಕೆ, ಹೋರಾಟಕ್ಕೆ ಬೇರೆ ಸ್ಥಳ ಗುರುತಿಸಲಾಗಿತ್ತು. ಆದರೂ ಬಾಂಡ್, ನಿಯಮ ಉಲ್ಲಂಘಿಸಿ ಜಂತರ್ ಮಂತರ್ ಪ್ರವೇಶಿಸಿ ಏನು ಮಾಡಲು ಹೊರಟಿದ್ದೀರಿ ಎಂದು ಕೋರ್ಟ್ ಪ್ರಶ್ನಿಸಿದೆ. ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಇದೇ ವಿಚಾರಣೆ ನಡೆಯಲಿದೆ. ಇದಕ್ಕೂ ಮೊದಲು ಹೈಕೋರ್ಟ್‌ಗೆ ಬರುವ ಧಾವಂತ ಏನಿತ್ತು ಎಂದು ಕೋರ್ಟ್ ಕೇಳಿದೆ.
ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯುತ್ತೀರಾ ಅಥವಾ ಏನು ಎಂದು ಹೈಕೋರ್ಟ್ ಕೇಳಿದೆ. ಛೀಮಾರಿ ಹಾಕಿಕೊಂಡು ಸೊರಗಿದ್ದ ಸಿಜೆಪಿ ತಕ್ಷಣವೇ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯಲು ಒಪ್ಪಿಕೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ