ಅ.5ಕ್ಕೆ ಕೋರ್ಟ್‌ಗೆ ಮಲ್ಯ ಹಾಜರುಪಡಿಸಿ: ಸುಪ್ರೀಂ!

By Kannadaprabha NewsFirst Published Sep 1, 2020, 8:30 AM IST
Highlights

ಅ.5ಕ್ಕೆ ಕೋರ್ಟ್‌ಗೆ ಮಲ್ಯ ಹಾಜರುಪಡಿಸಿ: ಸುಪ್ರೀಂ| ಕೇಂದ್ರ ಗೃಹ ಇಲಾಖೆಗೆ ಕೋರ್ಟ್‌ ನಿರ್ದೇಶನ| ಲಂಡನ್‌ನಿಂದ ಗಡೀಪಾರಾಗ್ತಾರಾ ಮದ್ಯದ ದೊರೆ?

ನವದೆಹಲಿ(ಸೆ.01): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಆಗಿರುವ ದೇಶಭ್ರಷ್ಟಉದ್ಯಮಿ ವಿಜಯ ಮಲ್ಯ, ಆ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಸಬೇಕಾಗಿರುವುದರಿಂದ ಅ.5ರಂದು ಮಧ್ಯಾಹ್ನ 2 ಗಂಟೆಗೆ ತನ್ನ ಎದುರು ಹಾಜರಾಗುವಂತೆ ‘ಮದ್ಯದ ದೊರೆ’ಗೆ ತಾಕೀತು ಮಾಡಿದೆ. ಮಲ್ಯ ಕೋರ್ಟ್‌ ಮುಂದೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೂ ನಿರ್ದೇಶನ ನೀಡಿದೆ.

ಸದ್ಯ ಲಂಡನ್‌ನಲ್ಲಿರುವ ಮಲ್ಯ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಹೀಗಾಗಿ ಸುಪ್ರೀಂಕೋರ್ಟ್‌ಗೆ ಮಲ್ಯ ಹಾಜರಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದಾ ಎಂಬ ಕುತೂಹಲ ಗರಿಗೆದರಿದೆ.

ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿದ್ದ ಮಲ್ಯಗೆ ಡಿಯಾಜಿಯೋ ಕಂಪನಿಯಿಂದ 290 ಕೋಟಿ ರು. ಹಣ ಬಂದಿತ್ತು. ಅದನ್ನು ಕೋರ್ಟ್‌ ಆದೇಶ ಉಲ್ಲಂಘಿಸಿ ಮಕ್ಕಳ ಖಾತೆಗೆ ವರ್ಗಾಯಿಸಿದ್ದರು. ಇದರ ವಿರುದ್ಧ ಬ್ಯಾಂಕುಗಳು ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದವು. ಈ ಪ್ರಕರಣದಲ್ಲಿ ಮಲ್ಯ ದೋಷಿ ಎಂದು 2017ರಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಅದರ ವಿರುದ್ಧ ಮಲ್ಯ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್‌ ವಜಾಗೊಳಿಸಿದೆ.

ಸುಮಾರು 9 ಸಾವಿರ ಕೋಟಿ ರು. ಬ್ಯಾಂಕ್‌ ಸಾಲ ಮಾಡಿ ಕಟ್ಟದೇ ಮಲ್ಯ ಅವರು ಲಂಡನ್‌ಗೆ ಪರಾರಿಯಾಗಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ನ್ಯಾಯಾಲಯ ಆದೇಶಗಳನ್ನು ಉಲ್ಲಂಘಿಸಿ ಅವರು ಬ್ರಿಟನ್‌ ಕಂಪನಿ ‘ಡಿಯಾಜಿಯೋ’ದಿಂದ ಸ್ವೀಕರಿಸಿದ್ದ 40 ದಶಲಕ್ಷ ಡಾಲರ್‌ ಅನ್ನು ಮಕ್ಕಳ ಖಾತೆಗೆ ವರ್ಗಾಯಿಸಿದ್ದರು. ಇದನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ತಂಡವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಮಲ್ಯ ಅವರನ್ನು 2017ರಲ್ಲೇ ನ್ಯಾಯಾಲಯ ದೋಷಿ ಎಂದು ಠರಾಯಿಸಿತ್ತು.

ತಮ್ಮ ಖಾತೆಯಲ್ಲಿದ್ದ 40 ದಶಲಕ್ಷ ಡಾಲರ್‌ (290 ಕೋಟಿ ರು.) ಹಣವನ್ನು ಮಕ್ಕಳಿಗೆ ವರ್ಗಾಯಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ 2017ರಲ್ಲಿ ಅವರನ್ನು ‘ನ್ಯಾಯಾಂಗ ನಿಂದನೆ ದೋಷಿ’ ಎಂದು ಘೋಷಿಸಿತ್ತು. ಆದರೆ ಇದನ್ನು ಮರುಪರಿಶೀಲಿಸುವಂತೆ ಮಲ್ಯ ಕೋರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ| ಉದಯ್‌ ಲಲಿತ್‌ ಹಾಗೂ ನ್ಯಾ| ಅಶೋಕ್‌ ಭೂಷಣ್‌ ಅವರ ಪೀಠ, ‘ಈ ಅರ್ಜಿಯಲ್ಲಿ ಹುರುಳಿಲ್ಲ. ಹೀಗಾಗಿ ಇದನ್ನು ವಜಾಗೊಳಿಸುತ್ತಿದ್ದೇವೆ’ ಎಂದು ಹೇಳಿತು.

click me!