
ನವದೆಹಲಿ (ಏ.23): ಜನರ ದಿಕ್ಕುತಪ್ಪಿಸುವ ಜಾಹೀರಾತು ಪ್ರಕಟಿಸಿದ ಆರೋಪದಲ್ಲಿ ಪತಂಜಲಿ ಅಯುರ್ವೇದ ಕಂಪನಿಯ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿತು. ಈ ವೇಳೆ ಕಂಪನಿ ಈವರೆಗೂ ದೇಶದ 67 ಪತ್ರಿಕೆಗಳಲ್ಲಿ ಕ್ಷಮಾಪಣೆಯನ್ನು ಪ್ರಕಟ ಮಾಡಿದ್ದೇವೆ ಎಂದು ತಿಳಿಸಿದ್ದಲ್ಲದೆ, ನ್ಯಾಯಾಲಯದ ಬಗ್ಗೆ ಹೆಚ್ಚಿನ ಗೌರವವಿದೆ ಮತ್ತು ನಮ್ಮ ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿತು. ಈ ವೇಳೆ ಸುಪ್ರೀಂ ಕೋರ್ಟ್, ನೀವು ಉತ್ಪನ್ನಗಳಿಗೆ ನೀಡುವಷ್ಟು ದೊಡ್ಡದಾಗಿಯೇ ಕ್ಷಮಾಪಣೆಯನ್ನೂ ಪ್ರಿಂಟ್ ಮಾಡಿಸಿದ್ದೀರಾ? ಎಂದು ಪ್ರಶ್ನೆ ಮಾಡಿದೆ. "ನಮ್ಮ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ ನಂತರವೂ ಜಾಹೀರಾತುಗಳನ್ನು ಪ್ರಕಟಿಸಿ ಮತ್ತು ಪತ್ರಿಕಾಗೋಷ್ಠಿ ನಡೆಸಿದ ತಪ್ಪಿಗೆ" ಜಾಹೀರಾತಿನಲ್ಲಿ ಪತಂಜಲಿ ಕ್ಷಮೆಯಾಚಿಸಿದೆ. ಜಾಹೀರಾತಿಗೆ 10 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಪತಂಜಲಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೊಂಡಿದೆ. ಈ ವೇಳೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ವಾರದ ಮುಂಚಿತವಾಗಿ ಈ ಕ್ಷಮಾಪಣೆಯನ್ನು ಏಕೆ ಸಲ್ಲಿಸಿದೆ ಎಂದು ಪ್ರಶ್ನೆ ಮಾಡಿದೆ. ಅದಲ್ಲದೆ, ನೀವು ನಿಮ್ಮ ಉತ್ಪನ್ನಗಳಿಗೆ ನೀಡಿದಷ್ಟು ದೊಡ್ಡದಾಗಿಯೇ ಕ್ಷಮಾಪಣೆಯನ್ನು ಪ್ರಿಂಟ್ ಮಾಡ್ಸಿದ್ದೀರಾ? ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಪ್ರಶ್ನೆ ಮಾಡಿದ್ದಾರೆ.
ಬಾಬಾ ರಾಮದೇವ್ ಮತ್ತು ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದರು. ಜಾಹಿರಾತುಗಳನ್ನು ಒಟ್ಟುಗೂಡಿಸಿ ಪೀಠದ ಮುಂದೆ ಸಲ್ಲಿಸುವಂತೆ ನ್ಯಾಯಾಲಯವು ಪತಂಜಲಿಗೆ ಆದೇಶ ನೀಡಿದೆ.
ನೀವು ನೀಡಿರುವ ಜಾಹೀರಾತುಗಳನ್ನು ಎನ್‌ಲಾರ್ಜ್ ಅಂದರೆ ದೊಡ್ಡದಾಗಿಸಿ ನಮಗೆ ಸಲ್ಲಿಕೆ ಮಾಡುವ ಸಾಹಸ ಮಾಡಬೇಡಿ. ನೀವು ಎಷ್ಟು ದೊಡ್ಡ ಪ್ರಮಾಣದ ಕ್ಷಮಾಪಣೆಯನ್ನು ಪ್ರಿಂಟ್ ಮಾಡಿಸಿದ್ದೀರಿ ಎನ್ನುವುದನ್ನು ನೋಡಲು ಬಯಸುತ್ತೇವೆ. . ನೀವು ಜಾಹೀರಾತನ್ನು ನೀಡಿದಾಗ ನಾವು ಅದನ್ನು ಸೂಕ್ಷ್ಮದರ್ಶಕದ ಮೂಲಕ ನೋಡಬೇಕೇ ಎನ್ನುವುದು ನೋಡಬೇಕಾಗಿದೆ. ಕ್ಷಮಾಪಣೆ ಕೇವಲ ಪೇಪರ್‌ನ ಮೇಲೆ ಪ್ರಿಂಟ್ ಆಗೋದು ಮುಖ್ಯವಲ್ಲ. ಅದು ಓದಲು ಕೂಡ ಸಾಧ್ಯವಾಗಬೇಕುಎಂದು ಕೋರ್ಟ್ ತಿಳಿಸಿದೆ. ಕಳೆದ ವಾರ, ಸುಪ್ರೀಂ ಕೋರ್ಟ್ ರಾಮ್ ದೇವ್ ಅವರನ್ನು "ಅಲೋಪತಿಯನ್ನು ಕೆಳಮಟ್ಟಕ್ಕಿಳಿಸುವ" ಯಾವುದೇ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿತ್ತು ಮತ್ತು ಒಂದು ವಾರದೊಳಗೆ ಸಾರ್ವಜನಿಕ ಕ್ಷಮೆಯಾಚನೆ ನೀಡುವಂತೆ ತಿಳಿಸಿತ್ತು.
ಮಂಗಳವಾರ, ಇತರ ಎಫ್‌ಎಂಸಿಜಿಗಳು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುತ್ತಿವೆ ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. "ಇದು ವಿಶೇಷವಾಗಿ ಶಿಶುಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂಥ ತಪ್ಪು ದಾರಿಗೆಳೆಯುವ ಎಫ್‌ಎಂಸಿಜಿ ಉತ್ಪನ್ನಗಳನ್ನು ಇವರು ಸೇವಿಸುತ್ತಿದ್ದಾರೆ" ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು.
ಬಾಬಾ ರಾಮ್‌ದೇವ್ ಕ್ಷಮೆ ಒಪ್ಪಿಕೊಳ್ಳಲು ನಿರಾಕರಿಸಿದ ಸುಪ್ರೀಂ, ಮತ್ತೊಂದು ಸಮನ್ಸ್ ಜಾರಿ!
ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಯ ದುರ್ಬಳಕೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಈ ಪ್ರಕರಣದಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. 1945ರ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ನಿಯಮ 170ರ ಪ್ರಕಾರ ಆಯುಷ್ ಉತ್ಪನ್ನಗಳ ಜಾಹೀರಾತಿನ ವಿರುದ್ಧ ಕ್ರಮ ಕೈಗೊಳ್ಳದಂತೆ ರಾಜ್ಯಗಳಿಗೆ ಆಯುಷ್ ಸಚಿವಾಲಯ ನೀಡಿರುವ ಪತ್ರದ ಕುರಿತು ಸುಪ್ರೀಂ ಕೋರ್ಟ್ ಕೇಂದ್ರದಿಂದ ವಿವರಣೆ ಕೇಳಿದೆ.
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಮುಂದೆ ಬೇಷರತ್ ಕ್ಷಮೆ ಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ!
ಆಧುನಿಕ ವೈದ್ಯಕೀಯ ಪದ್ಧತಿಗಳ ವಿರುದ್ಧ ಪತಂಜಲಿ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ