
ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಮೋದಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಕ್ಷದ ನಾಯಕರ ಮೇಲಿನ ಕ್ರಮವನ್ನು ಕಟುವಾಗಿ ಟೀಕಿಸಿರುವ ಅಣ್ಣಾಮಲೈ ಕೇಂದ್ರ ಸರ್ಕಾರದ ನಡೆ ಮೇಲೆ ತೀವ್ರ ಬೇಸರ ಹೊರ ಹಾಕಿದ್ದಾರೆ.
ಅಣ್ಣಾಮಲೈ ಹೇಳಿದ್ದೇನು?
ಕೇಂದ್ರದಲ್ಲಿ 12 ವರ್ಷಗಳಿಂದ ಆಡಳಿತ ನಡೆಸ್ತಿರುವ ಬಿಜೆಪಿ, ತಾನು ಅಧಿಕಾರದಲ್ಲಿದೆ ಎಂಬುದನ್ನೇ ಮರೆತಂತಿದೆ. ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಅದು ಸದಾ ಹೊಸದೊಂದು ಶತ್ರುವನ್ನು ಸೃಷ್ಟಿಸುತ್ತಲೇ ಇರಬೇಕೆಂದು ಭಾವಿಸುತ್ತದೆ.
2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ಮೇಲೆ ಅಂದಿನ ಸರ್ಕಾರ ಪೊಲೀಸ್ ದೌರ್ಜನ್ಯ ಎಸಗಿದಾಗ..ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ‘ನನ್ನ ಕೈಗಳನ್ನು ಕಟ್ಟಿಹಾಕಿರದಿದ್ದರೆ, ನಾನೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ಸಾರುತ್ತಿದ್ದೆ’ ಎಂದಿದ್ದರು. ಅಂದು ಮೋದಿ ಹೇಳಿದ್ದು ನೂರಕ್ಕೆ ನೂರು ಸರಿಯಾಗಿತ್ತು.
ಆದರೆ ಇಂದಿನ ಪರಿಸ್ಥಿತಿ ಏನಾಗಿದೆ ನೋಡಿ.. ಇಂದು ನೀವು ಅನಿರ್ದಿಷ್ಟಾವಧಿಯವರೆಗೆ ಜೈಲು ಪಾಲಾಗಬಹುದು. ನಿಮ್ಮ ಜಾಮೀನು ಬಾಂಡ್‌ಗಳು ತಿರಸ್ಕೃತಗೊಳ್ಳಬಹುದು. ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ನಿಮ್ಮನ್ನು ಇನ್ನಿಲ್ಲದಂತೆ ಅಲೆದಾಡಿಸಿ ಆಟವಾಡಿಸುತ್ತಾರೆ..
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಬದ್ಧ ಪ್ರಕ್ರಿಯೆಗಳ ಉಲ್ಲಂಘನೆಯನ್ನು ನೀವು ಪ್ರಶ್ನೆ ಮಾಡುವಂತಿಲ್ಲ. ಒಂದು ವೇಳೆ ಅದನ್ನು ಪ್ರಶ್ನೆ ಮಾಡಿದರೆ ಅವಹೇಳನಕಾರಿ ದಾಳಿಗಳು ಶುರುವಾಗುತ್ತವೆ.. ನಾನಾ ರೀತಿಯ ಹೆಸರುಗಳಿಂದ ಟೀಕೆ ಮಾಡಿದವರನ್ನು ಕರೆಯಲಾಗುತ್ತದೆ. ಕೊನೆಗೆ ವಿದೇಶಿ ಏಜೆಂಟ್ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ..
ನನಗಂತೂ ಅರ್ಥವಾಗುತ್ತಿಲ್ಲ. ಇಲ್ಲಿ ಬಿಜೆಪಿ ಸಿಜೆಪಿಯನ್ನ ವಿರೋಧಿಸುತ್ತಿದೆಯೋ ಅಥವಾ ಬಿಟ್ಟಿ ಪ್ರಚಾರ ಕೊಡುತ್ತಿದೆಯೋ? ಸಿಜೆಪಿಯನ್ನು ದೊಡ್ಡ ಶಕ್ತಿಯನ್ನಾಗಿ ಬಿಂಬಿಸಿ ವಿರೋಧ ಪಕ್ಷಗಳ ಮತಗಳನ್ನು ಒಡೆಯುವುದು ಇದರ ಉದ್ದೇಶವೇ? ಒಂದು ವೇಳೆ ಸಿಜೆಪಿಯವರೇ ಹಣ ಕೊಟ್ಟು ಪಿಆರ್ ತಂಡವನ್ನು ಇಟ್ಟುಕೊಂಡಿದ್ದರೂ ಅವರಿಗೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲವೇನೋ..
ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುವುದನ್ನ ಇಲ್ಲಿಗೆ ನಿಲ್ಲಿಸಿ. FCRA ಇರುವುದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲೇ ಅಲ್ಲವೇ? ಯಾರಾದರೂ ಭಾರತೀಯರು ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಲು ಸರ್ಕಾರದ ಬಳಿ ತನಿಖಾ ಸಂಸ್ಥೆಗಳು ಮತ್ತು ರಾಜತಾಂತ್ರಿಕ ಸಂಪನ್ಮೂಲಗಳಿವೆ. ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ ಅದಕ್ಕೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂಬ ಹಳೆಯ ರಾಗ ಹಾಡುವುದನ್ನ ಇಲ್ಲಿಗೆ ನಿಲ್ಲಿಸಬೇಕು.
12 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿರುವ ಸರ್ಕಾರವು ತನ್ನ ಮೇಲಿನ ಟೀಕೆಗಳಿಗೆ ವಸ್ತುನಿಷ್ಠವಾಗಿ ಉತ್ತರಿಸಬೇಕೇ ಹೊರತು.. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸದಾ ವಿರೋಧಿಗಳನ್ನು ಶತ್ರುಗಳಂತೆ ಬಿಂಬಿಸುತ್ತಾ.. ಕೃತಕ ಶತ್ರುಗಳನ್ನು ಸೃಷ್ಟಿಸುತ್ತಾ ಕೂರಬಾರದು.
ಕೆ.ಅಣ್ಣಾಮಲೈ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ