ಅಮಿತ್‌ ಶಾ ಸಂಧಾನಕ್ಕೂ ಬಗ್ಗದ ರೈತರು!

Published : Dec 09, 2020, 10:40 AM IST
ಅಮಿತ್‌ ಶಾ ಸಂಧಾನಕ್ಕೂ ಬಗ್ಗದ ರೈತರು!

ಸಾರಾಂಶ

ಅಮಿತ್‌ ಶಾ ಸಂಧಾನಕ್ಕೂ ಬಗ್ಗದ ರೈತರು| ಕಾಯ್ದೆ ರದ್ದಿಗೆ ಸರ್ಕಾರ ನಕಾರ/ ತಿದ್ದುಪಡಿ ಕುರಿತು ಲಿಖಿತ ಭರವಸೆಯ ಘೋಷಣೆ| ಇಂದು ರೈತರಿಗೆ ಸರ್ಕಾರದ ಪ್ರಸ್ತಾಪ ಸಲ್ಲಿಕೆ/ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ

ನವದೆಹಲಿ(ಡಿ.09): ಕೃಷಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಮನವೊಲಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಯತ್ನಗಳು ಫಲ ಕೊಟ್ಟಿಲ್ಲ. ಇದರೊಂದಿಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತಷ್ಟುವಿಸ್ತರಣೆಗೊಳ್ಳುವ ಸಾಧ್ಯತೆಗಳು ಕಂಡುಬಂದಿವೆ.

ಮಂಗಳವಾರ ಭಾರತ್‌ ಬಂದ್‌ ಮುಕ್ತಾಯವಾದ ಬೆನ್ನಲ್ಲೇ, ರಾತ್ರಿ 8 ಗಂಟೆಯಿಂದ ಸುಮಾರು 3 ತಾಸುಗಳ ಕಾಲ 13 ರೈತ ಮುಖಂಡರೊಂದಿಗೆ ಅಮಿತ್‌ ಶಾ ಸುದೀರ್ಘ ಮಾತುಕತೆ ನಡೆಸಿದರು. ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಕೂಡಾ ಹಾಜರಿದ್ದರು.

ಮಾತುಕತೆ ವೇಳೆ ಕಾಯ್ದೆ ರದ್ದುಪಡಿಸಲು ಸಾಧ್ಯವಿಲ್ಲ. ಆದರೆ ರೈತರ ಕಳವಳಕ್ಕೆ ಕಾರಣವಾಗಿರುವ ಕೆಲ ಅಂಶಗಳ ತಿದ್ದುಪಡಿಗೆ ಸರ್ಕಾರ ಸಿದ್ಧವಿದೆ. ಏನೆಲ್ಲಾ ತಿದ್ದುಪಡಿ ಮಾಡಲಾಗುವುದು ಎಂಬುದರ ಬಗ್ಗೆ ಲಿಖಿತವಾಗಿಯೇ ಭರವಸೆ ನೀಡಲಾಗುವುದು ಎಂದು ಅಮಿತ್‌ ಶಾ ರೈತ ಮುಖಂಡರಿಗೆ ಭರವಸೆ ನೀಡಿದರು.

ಆದರೆ ತಿದ್ದುಪಡಿಗೆ ಒಪ್ಪದ ರೈತ ಮುಖಂಡರು, ಸಂಪೂರ್ಣವಾಗಿ ಕಾಯ್ದೆ ರದ್ದು ಹೊರತುಪಡಿಸಿ ಇನ್ಯಾವುದೇ ವಿಷಯ ನಮಗೆ ಒಪ್ಪಿತವಿಲ್ಲ ಎಂಬ ಹಠಕ್ಕೆ ಬಿದ್ದರು. ಹೀಗಾಗಿ ಯಾವುದೇ ಫಲ ಕಾಣದೇ ಸಭೆ ಮುಕ್ತಾಯವಾಯಿತು.

ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ ಹನ್ನನ್‌ ಮೊಲ್ಲಾ, ಕಾಯ್ದೆ ರದ್ದುಪಡಿಸಲು ಸರ್ಕಾರ ಸಿದ್ಧವಿಲ್ಲ ಎಂದು ಸಚಿವ ಅಮಿತ್‌ ಶಾ ಸಭೆಗೆ ತಿಳಿಸಿದ್ದಾರೆ. ಹೀಗಾಗಿ ನಾವು ನಾಳೆ ಆಯೋಜನೆಗೊಂಡಿದ್ದ ಸಭೆಯನ್ನು ಬಹಿಷ್ಕರಿಸಲಿದ್ದೇವೆ. ಸರ್ಕಾರ ನಮಗೆ ಅದರ ಪ್ರಸ್ತಾಪಗಳನ್ನು ರವಾನಿಸಲಿದೆ. ಅದನ್ನು ನೋಡಿಕೊಂಡು ನಾವು ಇತರೆ ರೈತರ ಜೊತೆ ಮಾತುಕತೆ ನಡೆಸಿ ಮುಂದಿನ ಹೋರಾಟದ ಹಾದಿ ನಿರ್ಧರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

6ನೇ ಸುತ್ತಿನ ಸಭೆ ಬಗ್ಗೆ ಅನುಮಾನ

ನವದೆಹಲಿ: ಬುಧವಾರ ಇಲ್ಲಿ ಆಯೋಜನೆಗೊಂಡಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ 6ನೇ ಸುತ್ತಿನ ಮಾತುಕತೆ ನಡೆಯುವ ಬಗ್ಗೆ ಅನುಮಾನ ಮೂಡಿವೆ. ಮಂಗಳವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಕೆಲ ರೈತ ಮುಖಂಡರು ಬುಧವಾರದ ಸಭೆಯಲ್ಲಿ ಭಾಗಿಯಾಗದೇ ಇರುವ ನಿರ್ಧಾರ ಪ್ರಕಟಿಸಿದ್ದರೆ ಇನ್ನು ಕೆಲವರು ಭಾಗಿಯಾಗುವ ಸುಳಿವು ನೀಡಿದ್ದಾರೆ. ರೈತರ ಕಳವಳಕ್ಕೆ ಕಾರಣವಾಗಿರುವ ಕನಿಷ್ಠ ಬೆಂಬಲ ಬೆಲೆ, ಮಂಡಿ ವ್ಯವಸ್ಥೆ ಕುರಿತಾದ ಅಂಶಗಳ ತಿದ್ದುಪಡಿ ಮಾಡುವ ಅಮಿತ್‌ ಶಾ ಸುಳಿವು ನೀಡಿದ್ದಾರೆ. ಹೀಗಾಗಿ ಚರ್ಚೆಯಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್