
ಮುಂಬೈ [ನ.02]: ‘ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಆದರೆ ಟೀಕೆಗಳನ್ನು ಸಹಿಸುವುದಿಲ್ಲ. ಒಂದು ವೇಳೆ ನಾವೇನಾದರೂ ನಿಮ್ಮನ್ನು ಟೀಕಿಸಿದರೆ ಅದನ್ನು ಮೆಚ್ಚುತ್ತೀರಿ ಎಂಬ ಯಾವ ವಿಶ್ವಾಸವೂ ಇಲ್ಲ’ ಎಂದು ದೇಶದ ಪ್ರಸಿದ್ಧ ಉದ್ಯಮಿ, ಬಜಾಜ್ ಗ್ರೂಪ್ ಮುಖ್ಯಸ್ಥ ರಾಹುಲ್ ಬಜಾಜ್ ಅವರು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖವೇ ಹೇಳಿದ ಘಟನೆ ನಡೆದಿದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಯಾರೂ ಹೆದರಬೇಕಿಲ್ಲ ಎಂದು ಭರವಸೆ ತುಂಬಿದ ಪ್ರಸಂಗವೂ ಜರುಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ವಾಣಿಜ್ಯ ಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಉದ್ಯಮಿ ರಾಹುಲ್ ಬಜಾಜ್, ಪ್ರಧಾನಿ ಮೋದಿ ಹಾಗೂ ಆವರ ಆಡಳಿತವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ. ತಾವು ಪ್ರತೀಕಾರಕ್ಕೆ ಒಳಗಾಗಬಹುದು ಎಂಬ ಭೀತಿ ಕಾಡುತ್ತಿದೆ. ಈ ವಾತಾವರಣ ನಮ್ಮ ಮನಸ್ಸಿನಲ್ಲಿ ಇದೆ. ಆದರೆ ಇದನ್ನು ಯಾರೂ ಹೇಳುವುದಿಲ್ಲ. ನಮ್ಮ ಉದ್ಯಮ ಸ್ನೇಹಿತರೂ ಮಾತನಾಡುವುದಿಲ್ಲ. ಆದರೆ ನಾನು ನೇರವಾಗಿ ಹೇಳುತ್ತೇನೆ. ಟೀಕಿಸುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಮಹಾರಾಷ್ಟ್ರದ ಬೆನ್ನಲ್ಲೇ ಗೋವಾದಲ್ಲೂ ಅಧಿಕಾರ ಕಳೆದುಕೊಳ್ಳುತ್ತಾ ಬಿಜೆಪಿ?..
ನೀವು ಒಳ್ಳೆಯ ಕೆಲಸ ಮಾಡುತ್ತೀದ್ದೀರಿ. ಆದರೆ ಟೀಕಿಸಿದರೆ ಅದನ್ನು ಮೆಚ್ಚುತ್ತೀರಿ ಎಂಬ ಯಾವುದೇ ವಿಶ್ವಾಸ ಇಲ್ಲ. ಇಂತಹ ಪರಿಸ್ಥಿತಿ ಯುಪಿಎ ಸರ್ಕಾರದ ಅವಧಿಯಲ್ಲಿ ಇರಲಿಲ್ಲ. ಆ ಸರ್ಕಾರದಲ್ಲಿ ನಾವು ಯಾರ ವಿರುದ್ಧ ಬೇಕಾದರೂ ಟೀಕೆ ಮಾಡಬಹುದಿತ್ತು. ನಾನು ಹೇಳುತ್ತಿರುವುದು ತಪ್ಪೇ ಇರಬಹುದು. ಆದರೆ ಅಂತಹ ಭಾವನೆ ನಮ್ಮೆಲ್ಲರಲ್ಲೂ ಇದೆ ಎಂದು ಹೇಳಿದರು.
ಹೆದರಬೇಡಿ- ಅಮಿತ್ ಶಾ:
ಬಜಾಜ್ ಅಭಿಪ್ರಾಯವನ್ನು ಆಲಿಸಿದ ಅಮಿತ್ ಶಾ, ದೇಶದಲ್ಲಿ ಭಯದ ವಾತಾವರಣವಿದೆ ಎಂಬ ವಾದವನ್ನು ತಳ್ಳಿ ಹಾಕಿದರು. ಯಾವುದಕ್ಕೂ ಹೆದರಬೇಕಿಲ್ಲ. ನರೇಂದ್ರ ಮೋದಿ ಸರ್ಕಾರವನ್ನು ಮಾಧ್ಯಮಗಳು ನಿರಂತರವಾಗಿ ಟೀಕಿಸುತ್ತಿವೆ. ಆದರೆ ನೀವು, ಅಂತಹ ವಾತಾವರಣವೇ ಇಲ್ಲ ಎನ್ನುತ್ತಿದ್ದೀರಿ. ಹೀಗಾಗಿ ಪರಿಸ್ಥಿತಿಯ ಸುಧಾರಣೆಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಟಾಂಗ್; ಬಿಜೆಪಿ ತಿರುಗೇಟು
ಅಮಿತ್ ಶಾ ಎದುರೇ ಮೋದಿ ಸರ್ಕಾರದಲ್ಲಿ ಟೀಕಿಸುವ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ ರಾಹುಲ್ ಬಜಾಜ್ ಹೇಳಿಕೆ ಬಳಸಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಬಜಾಜ್ ಅವರ ರೀತಿಯ ಅಭಿಪ್ರಾಯದ ದೇಶದ ಎಲ್ಲೆಡೆ, ಎಲ್ಲ ಕ್ಷೇತ್ರಗಳಲ್ಲೂ ಇದೆ. ಅವರು ಅಧಿಕಾರಸ್ಥರ ಎದುರು ಸತ್ಯ ಮಾತನಾಡಿದ್ದಾರೆ ಎಂದು ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ತಮ್ಮ ಮನಸ್ಸಿನಲ್ಲಿರುವುದನ್ನು ಬಜಾಜ್ ಅವರು ಹೇಳುತ್ತಾರೆ ಎಂದರೆ, ಮೋದಿ ಸರ್ಕಾರ ಟೀಕೆಗಳನ್ನು ಸ್ವಾಗತಿಸುತ್ತದೆ ಎಂದೇ ಅರ್ಥ ಎಂದು ವ್ಯಾಖ್ಯಾನಿಸಿದ್ದಾರೆ.
ರಾಹುಲ್ ಬಜಾಜ್ ಹೇಳಿದ್ದೇನು?
ಪ್ರಧಾನಿ ಮೋದಿ ಹಾಗೂ ಆವರ ಆಡಳಿತವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ. ತಾವು ಪ್ರತೀಕಾರಕ್ಕೆ ಒಳಗಾಗಬಹುದು ಎಂಬ ಭೀತಿ ಕಾಡುತ್ತಿದೆ. ಈ ವಾತಾವರಣ ನಮ್ಮ ಮನಸ್ಸಿನಲ್ಲಿ ಇದೆ. ಆದರೆ ಇದನ್ನು ಯಾರೂ ಹೇಳುವುದಿಲ್ಲ. ನಮ್ಮ ಉದ್ಯಮ ಸ್ನೇಹಿತರೂ ಮಾತನಾಡುವುದಿಲ್ಲ. ಆದರೆ ನಾನು ನೇರವಾಗಿ ಹೇಳುತ್ತೇನೆ. ಟೀಕಿಸುವ ವಾತಾವರಣವನ್ನು ಸೃಷ್ಟಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ