ಹೊಸ ವರ್ಷದವರೆಗೂ ಇಳಿಯಲ್ಲ ಈರುಳ್ಳಿ ದರ : ಭಾರಿ ದುಬಾರಿ

By Kannadaprabha NewsFirst Published Dec 2, 2019, 7:49 AM IST
Highlights

ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಬೆಳೆ ನಾಶವಾದ ಕಾರಣ ಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ 100 ರು. ಗಡಿ ದಾಟಿರುವುದರಿಂದ ಜನಾಕ್ರೋಶ ವ್ಯಕ್ತವಾಗುತ್ತಿ ರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದೇಶಗಳಿಂದ ಈರುಳ್ಳಿ ಆಮದಿಗೆ ಮುಂದಾಗಿದೆ.

ನವದೆಹಲಿ [ನ.02]: ಕೇಜಿಗೆ 100 ರು. ಗಡಿ ದಾಟಿ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ ಇನ್ನು ಕೆಲವೇ ದಿನಗಳಲ್ಲಿ 50 ರು.ಗಿಂತ ಕೆಳಕ್ಕೆ ಬರಬಹುದು ಎಂಬ ನಿರೀಕ್ಷೆಯನ್ನೇನಾದರೂ ಹೊಂದಿದ್ದರೆ ಬಿಟ್ಟು ಬಿಡಿ. ಪ್ರಾಯಶಃ ಜನವರಿವರೆಗೂ ಈರುಳ್ಳಿ ಈ ಮೊದಲಿನ ದರಕ್ಕೆ ಬರುವುದಿಲ್ಲ.

ಈರುಳ್ಳಿ ಹೆಚ್ಚು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಬೆಳೆ ನಾಶವಾದ ಕಾರಣ ಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ 100 ರು. ಗಡಿ ದಾಟಿರುವುದರಿಂದ ಜನಾಕ್ರೋಶ ವ್ಯಕ್ತವಾಗುತ್ತಿ ರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದೇಶಗಳಿಂದ ಈರುಳ್ಳಿ ಆಮದಿಗೆ ಮುಂದಾಗಿದೆ.

ಈಗಾಗಲೇ ಈಜಿಪ್ಟ್ ಹಾಗೂ ಟರ್ಕಿಯಿಂದ ತರಿಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಈಜಿಪ್ಟ್‌ನಿಂದ 6090 ಟನ್ ಈರುಳ್ಳಿ ಆಮದಿಗೆ ಸರ್ಕಾರ ನಿರ್ಧರಿಸಿದ್ದು, ಅದು ಡಿಸೆಂಬರ್ 2 ನೇ ವಾರ ಮುಂಬೈಗೆ ಬರಲಿದೆ. ಈಜಿಪ್ಟ್ ಈರುಳ್ಳಿ ಬಂದರೂ ಬೆಲೆ 55ರಿಂದ 60 ರು.ವರೆಗೆ ಇರಲಿದೆ. ಇನ್ನು ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿ ಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆ ಆರ್ಡರ್ ನೀಡಿದೆ. 

ಆ ಈರುಳ್ಳಿ ಬರಲು ಜನವರಿವರೆಗೂ ಕಾಯಬೇಕಾಗುತ್ತದೆ. ಆನಂತರವಷ್ಟೇ ಈರುಳ್ಳಿ ಬೆಲೆ ತಗ್ಗುವ ನಿರೀಕ್ಷೆ ಇದೆ. ಈಜಿಪ್ಟ್‌ನಿಂದ ಆಮದಾಗುವ ಈರುಳ್ಳಿಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ವಿತರಿಸಲಿದೆ. ಸುಮಾರು 55 ರಿಂದ 60  ರು. (ಕೇಜಿಗೆ) ದರದಲ್ಲಿ ಕೇಂದ್ರವು ರಾಜ್ಯಗಳಿಗೆ ನೀಡಲಿದೆ. ಭಾರತದಲ್ಲಿ ಅತಿವೃಷ್ಟಿಯ ಕಾರಣ ಈರುಳ್ಳಿ ಬೆಳೆ ಹಾಳಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿದೆ.ಹೀಗಾಗಿ ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ 1.2 ಲಕ್ಷ ಟನ್ ಈರುಳ್ಳಿ ಆಮದಿಗೆ ತೀರ್ಮಾನಿಸಿತ್ತು. ಈಗಾಗಲೇ ಈರುಳ್ಳಿ ದರದ ಮೇಲೆ ನಿಗಾ ಇಡಲು ಸಚಿವರ ಸಮೂಹವನ್ನು ರಚಿಸಲಾಗಿದೆ.

ಹಣಕಾಸು, ಗ್ರಾಹಕ ವ್ಯವಹಾರ, ಕೃಷಿ ಹಾಗೂ ಸಾರಿಗೆ ಸಚಿವರು ಈ ಸಮೂಹದಲ್ಲಿದ್ದಾರೆ. ಈಗಾಗಲೇ ಕಾರ್ಯದರ್ಶಿಗಳ ಸಮಿತಿ ಹಾಗೂ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್ ಶ್ರೀವಾಸ್ತವ ಅವರು ಈರುಳ್ಳಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.

click me!