ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಲಾಗುವುದು. ‘ಲಡ್ಕಿ ಬಹಿನ್’ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ 1500 ರು. ಮೊತ್ತವನ್ನು 2100 ರು.ಗೆ ಏರಿಕೆ ಮಾಡಲಾಗುವುದು.
ಮುಂಬೈ (ನ.11): ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಲಾಗುವುದು. ‘ಲಡ್ಕಿ ಬಹಿನ್’ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ 1500 ರು. ಮೊತ್ತವನ್ನು 2100 ರು.ಗೆ ಏರಿಕೆ ಮಾಡಲಾಗುವುದು. ಮತಾಂತರ ತಡೆಗೆ ಬಲಿಷ್ಠ ಕಾನೂನು ಜಾರಿಗೆ ತರಲಾಗುವುದು ಎಂದು ಆಡಳಿತಾರೂಢ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿರುವ ಸಂದರ್ಭದಲ್ಲೇ ಉಚಿತ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆ ‘ಸಂಕಲ್ಪ ಪತ್ರ 2024’ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬೈನಲ್ಲಿ ಭಾನುವಾರ ಬಿಡುಗಡೆ ಮಾಡಿದರು.
ಈ ಭರವಸೆಗಳ ಪೈಕಿ ರೈತರ ಸಾಲ ಮನ್ನಾ ಗಮನ ಸೆಳೆದಿದೆ. ಇತ್ತೀಚೆಗೆ ಬಿಜೆಪಿ ಯಾವ ರಾಜ್ಯಗಳಲ್ಲೂ ರೈತರ ಸಾಲ ಮನ್ನಾದ ಭರವಸೆ ನೀಡಿರಲಿಲ್ಲ. ಆದರೆ ರೈತರ ಆತ್ಮಹತ್ಮೆಯಿಂದ ಸದಾ ಸುದ್ದಿಯಲ್ಲಿರುವ ಮಹಾರಾಷ್ಟ್ರದಲ್ಲಿ ರೈತರ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಲ ಮನ್ನಾದ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಯಾವ ರೈತರ ಸಾಲ ಮನ್ನಾ ಮಾಡಲಾಗುವುದು, ಸಾಲದ ಮನ್ನಾದ ಪ್ರಮಾಣವೆಷ್ಟು ಎಂಬುದನ್ನು ಪ್ರಸ್ತಾಪಿಸಲಾಗಿಲ್ಲ.
ಇದರ ಜೊತೆಗೆ ಬಡವರಿಗೆ ಮಹಾರಾಷ್ಟ್ರದಲ್ಲಿ ಕೌಶಲ್ಯ ಗಣತಿ ನಡೆಸಲಾಗುವುದು. ಉದ್ಯಮ ವಲಯದ ಬೇಡಿಕೆಯನ್ನು ಪರಿಗಣಿಸಿ, ಉದ್ಯೋಗ ಬಯಸುವವರ ಕೌಶಲ್ಯವನ್ನು ತರಬೇತಿ ಮೂಲಕ ಮೇಲ್ದರ್ಜೆಗೇರಿಸಲಾಗುವುದು. ‘ಅಕ್ಷಯ ಅನ್ನ’ ಯೋಜನೆಯಡಿ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ಉಚಿತ ಆಹಾರ ಧಾನ್ಯವನ್ನು ಪ್ರತಿ ತಿಂಗಳೂ ಪೂರೈಸಲಾಗುವುದು ಎಂದು ಪ್ರಣಾಳಿಕೆ ಹೇಳುತ್ತದೆ.
ಜೆಡಿಎಸ್‌ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ನಮ್ಮ ಪಾಡಿಗೆ ನಾವಿರೋಣ: ಡಿಕೆಶಿ
25 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲಾಗುವುದು. ವೃದ್ಧರ ಮಾಸಾಶನ 1500 ರು.ನಿಂದ 2100 ರು.ಗೆ ಹೆಚ್ಚಳ, 10 ಲಕ್ಷ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರು. ಸ್ಟೈಪೆಂಡ್ ನೀಡಲಾಗುವುದು. ಅವಶ್ಯ ವಸ್ತುಗಳ ಬೆಲೆಯನ್ನು ಸ್ಥಿರವಾಗಿ ಇಡಲಾಗುವುದು. ರಸಗೊಬ್ಬರ ಖರೀದಿಸುವ ರೈತರ ಎಸ್‌ಜಿಎಸ್‌ಟಿಯನ್ನು ಮರಳಿಸಲಾಗುವುದು ಎಂದೂ 25 ಅಂಶಗಳ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಉಚಿತ ಅಕ್ಕಿ ಹಾಗೂ ಮಹಿಳೆಯರಿಗೆ ಮಾಸಿಕ 2000 ರು. ನೀಡುವ ಯೋಜನೆ ಈಗಾಗಲೇ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ರೂಪದಲ್ಲಿ ಜಾರಿಯಾಗಿವೆ ಎಂಬುದು ಗಮನಾರ್ಹ.