ಅಮಿತ್‌ ಶಾ ವರ್ಸಸ್‌ ದೀದಿ ವಾಕ್ಸಮರ!

By Kannadaprabha NewsFirst Published Apr 12, 2021, 7:36 AM IST
Highlights

ಅಮಿತ್‌ ಶಾ ವರ್ಸಸ್‌ ದೀದಿ ವಾಕ್ಸಮರ| ‘ನಾಲ್ವರನ್ನು ಬಲಿ ಪಡೆದ ಬಂಗಾಳ ಹಿಂಸೆಗೆ ಮಮತಾ ಕಾರಣ’| ನನ್ನ ರಾಜೀನಾಮೆ ಕೇಳುವ ಮಮತಾ ಮೇ 2ಕ್ಕೆ ರಾಜೀನಾಮೆ ಕೊಡ್ತಾರೆ: ಶಾ| ಗೃಹ ಸಚಿವ, ಕೇಂದ್ರ ಸರ್ಕಾರ ಎರಡೂ ಅಸಮರ್ಥ: ದೀದಿ ತಿರುಗೇಟು

ಕೋಲ್ಕತಾ(ಏ.12): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನದ ವೇಳೆ ನಾಲ್ವರು ಸಿಐಎಸ್‌ಎಫ್‌ ಗೋಲಿಬಾರ್‌ಗೆ ಬಲಿಯಾದ ಘಟನೆ ಇದೀಗ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ.

ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ಕೇಂದ್ರೀಯ ಪಡೆಗಳಿಗೆ ಮುತ್ತಿಗೆ ಹಾಕುವಂತೆ ಕರೆ ನೀಡುತ್ತಿದ್ದರು. ಅದರಿಂದ ಪ್ರಚೋದಿತರಾಗಿ ಜನರು ಕೂಚ್‌ ಬೆಹಾರ್‌ನಲ್ಲಿ ಸಿಐಎಸ್‌ಎಫ್‌ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ 4 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಪಾದಿಸಿದ್ದಾರೆ. ಅಲ್ಲದೆ, ‘ಮಮತಾ ನನ್ನ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಜನರು ಸೂಚಿಸಿದರೆ ರಾಜೀನಾಮೆಗೆ ನಾನು ರೆಡಿ. ಆದರೆ ಮೇ 2ರಂದು ಮಮತಾ ಅವರೇ ರಾಜೀನಾಮೆ ನೀಡಬೇಕಾಗುತ್ತದೆ’ ಎಂದು ಕಿಚಾಯಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮಮತಾ, ‘ಕೂಚ್‌ ಬೆಹಾರ್‌ನಲ್ಲಿ ನಡೆದಿದ್ದು ಹತ್ಯಾಕಾಂಡ. ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂದು ಸಿಐಎಸ್‌ಎಫ್‌ಗೆ ಗೊತ್ತೇ ಇಲ್ಲ. ಜನರ ಮೇಲೆ ಕೇಂದ್ರೀಯ ಭದ್ರತಾ ಪಡೆಗಳ ಒಂದು ವರ್ಗ ದೌರ್ಜನ್ಯ ಎಸಗುತ್ತಿದೆ ಎಂದು ಹೇಳುತ್ತಲೇ ಬಂದಿದ್ದೇನೆ. ಯಾರೊಬ್ಬರೂ ಗಮನ ಹರಿಸಲಿಲ್ಲ. ನಾವು ಅಸಮರ್ಥ ಕೇಂದ್ರ ಗೃಹಮಂತ್ರಿ ಹಾಗೂ ಅಸಮರ್ಥ ಕೇಂದ್ರ ಸರ್ಕಾರವನ್ನು ಹೊಂದಿದ್ದೇವೆ’ ಎಂದು ಚಾಟಿ ಬೀಸಿದ್ದಾರೆ.

ಮಮತಾ ಹೊಣೆ ಅಲ್ಲವೇ?:

ನಾದಿಯಾ ಜಿಲ್ಲೆಯ ಶಾಂತಿಪುರದಲ್ಲಿ ಭಾನುವಾರ್‌ ರೋಡ್‌ ಶೋ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಮಿತ್‌ ಶಾ, ‘ಕೇಂದ್ರೀಯ ಪಡೆಗಳಿಗೆ ಘೇರಾವ್‌ ಹಾಕಲು ಸಲಹೆ ಮಾಡಿದ್ದ ಮಮತಾ ಅವರು ಕೂಚ್‌ ಬೆಹಾರ್‌ನ ಸೀತಾಲ್‌ಕುಚಿಯಲ್ಲಿ ಸಂಭವಿಸಿದ ಸಾವಿಗೆ ಹೊಣೆ ಅಲ್ಲವೆ?’ ಎಂದು ಪ್ರಶ್ನಿಸಿದರು.

‘ಮಮತಾ ಬ್ಯಾನರ್ಜಿ ಅವರು ಸಾವಿನ ವಿಚಾರದಲ್ಲೂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಘಟನೆಯಲ್ಲಿ ಮೃತರಾದ ನಾಲ್ವರಿಗೆ ಮಮತಾ ಸಂತಾಪ ಸೂಚಿಸಿದ್ದಾರೆ. ಆದರೆ ಆನಂದ ಬರ್ಮನ್‌ ಎಂಬ ವ್ಯಕ್ತಿ ಕೂಡ ಮೃತಪಟ್ಟಿದ್ದು, ಆತನಿಗೆ ಕಂಬನಿ ಮಿಡಿದಿಲ್ಲ. ಏಕೆಂದರೆ ಆತ ರಾಜಬೋಂಗ್ಶಿ ಸಮುದಾಯದವನು. ಆತ ಮಮತಾ ವೋಟ್‌ ಬ್ಯಾಂಕ್‌ ಅಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಮಧ್ಯೆ ಸಿಲಿಗುರಿಯಲ್ಲಿ ಮಾತನಾಡಿದ ಮಮತಾ ಅವರು, ‘ಕೇಂದ್ರೀಯ ಪಡೆಗಳು ಮೃತಶವಗಳಿಗೂ ಗುಂಡಿನ ಮಳೆಗರೆದಿವೆ. ನಾನು ಸೀತಾಲ್‌ಕುಚಿಗೆ ತೆರಳುತ್ತೇನೆ. ಆದರೆ ಕೇಂದ್ರ ಚುನಾವಣಾ ಆಯೋಗ ರಾಜಕಾರಣಿಗಳ ಪ್ರವೇಶಕ್ಕೆ 72 ತಾಸು ನಿರ್ಬಂಧ ಹೇರಿದೆ. ಸತ್ಯಾಂಶ ಮುಚ್ಚಿಡಲು ಈ ರೀತಿ ಮಾಡಿದೆ’ ಎಂದು ಆರೋಪಿಸಿದರು.

click me!