
ನವದೆಹಲಿ(ಏ.12): ದೇಶದಲ್ಲಿ ಸತತ 5ನೇ ದಿನವೂ 1 ಲಕ್ಷಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣಗಳು ದಾಖಲಾಗಿವೆ. ಭಾನುವಾರ ಬೆಳಗ್ಗೆ 8ಕ್ಕೆ ಮುಕ್ತಾಯಗೊಂಡ 24 ತಾಸಿನ ಅವಧಿಯಲ್ಲಿ ದೇಶದಲ್ಲಿ 1,52,879 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ಸಾಂಕ್ರಾಮಿಕ ವ್ಯಾಧಿ ಆರಂಭವಾದ ಬಳಿಕ ದೃಢಪಟ್ಟಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ.
ಇದೇ ವೇಳೆ, ಹೊಸ ಸೋಂಕಿತರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 11.08 ಲಕ್ಷ ತಲುಪಿದೆ. ಇದೂ ಸಹ ಸಾರ್ವಕಾಲಿಕ ಗರಿಷ್ಠ ಸಂಖ್ಯೆ. ಪಾಸಿಟಿವಿಟಿ ದರ ಕೂಡ ಕಳೆದ 4 ವಾರದಲ್ಲಿ 3.5 ಪಟ್ಟು ಹೆಚ್ಚಿದೆ. ಹೀಗಾಗಿ ಕೊರೋನಾದ 2ನೇ ಅಲೆ ನಿಜಕ್ಕೂ ಆತಂಕದ ವಿಚಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ಫೆ.12ರಂದು ದೇಶದಲ್ಲಿ ಕನಿಷ್ಠ ಅಂದರೆ 1.35 ಲಕ್ಷ ಮಾತ್ರವೇ ಸಕ್ರಿಯ ಸೋಂಕಿತರಿದ್ದರು. ಅದು ಒಟ್ಟು ಕೇಸಿನಲ್ಲಿ ಶೇ.1.25ರಷ್ಟಾಗಿತ್ತು. ಆದರೆ ಇದೀಗ ಆ ಪ್ರಮಾಣವು ಶೇ.8.29ಕ್ಕೆ ತಲುಪಿದೆ. ಜೊತೆಗೆ ಚೇತರಿಕೆ ಪ್ರಮಾಣವೂ ಶೇ.90.44ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.
ಮತ್ತೊಂದೆಡೆ ಭಾನುವಾರ ಬೆಳಗ್ಗಿನ 8 ಗಂಟೆಯವರೆಗಿನ 24 ತಾಸು ಅವಧಿಯಲ್ಲಿ 839 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು ಅ.18, 2020ರ ನಂತರದಲ್ಲಿ ದಾಖಲಾದ ಗರಿಷ್ಠ ಸಂಖ್ಯೆ.
5 ರಾಜ್ಯಗಳಲ್ಲಿ 70% ಸಕ್ರಿಯ ಸೋಂಕು:
ದೇಶದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.70.82ರಷ್ಟುಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ಈ 5 ರಾಜ್ಯಗಳಲ್ಲಿಯೇ ಇವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಅದರಲ್ಲೂ ಮಹಾರಾಷ್ಟ್ರವೊಂದರಲ್ಲಿಯೇ ಶೇ.48.57ರಷ್ಟುಸಕ್ರಿಯ ಸೋಂಕಿತರಿದ್ದಾರೆ. ಜೊತೆಗೆ ಈ ಐದು ರಾಜ್ಯಗಳೂ ಸೇರಿ ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ರಾಜಸ್ಥಾನ ಈ 10 ರಾಜ್ಯಗಳಲ್ಲಿ ದೈನಂದಿನ ಸೋಂಕು ಪ್ರಮಾಣ ಆತಂಕಾರಿಯಾಗಿ ಹೆಚ್ಚುತ್ತಿದೆ. ನಿತ್ಯ ದೃಢಪಡುತ್ತಿರುವ ಪ್ರಕರಣಗಳ ಪೈಕಿ 80.92ರಷ್ಟುಕೇಸ್ ಈ 10 ರಾಜ್ಯಗಳಲ್ಲಿಯೇ ಪತ್ತೆಯಾಗುತ್ತಿದೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ