ಕರ್ನಾಟಕ ಸೇರಿ 17 ರಾಜ್ಯಗಳಿಗೆ ಈ 3 ಯೋಜನೆಗಳಿಗೆ 8000 ಕೋಟಿ ರೂ. ನೆರವು ಘೋಷಿಸಿದ ಅಮಿತ್ ಶಾ

By Kannadaprabha NewsFirst Published Jun 14, 2023, 4:06 PM IST
Highlights

ದೇಶದಲ್ಲಿ ದುರಂತಗಳು ಸಂಭವಿಸಿದ ಸಮಯದಲ್ಲಿ ಉಂಟಾಗುವ ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿಕೆಯಾಗುವತ್ತ ಕ್ರಮ ವಹಿಸಬೇಕು ಎಂದು ಅಮಿತ್‌ ಶಾ ಹೇಳಿದ್ದಾರೆ.

ನವದೆಹಲಿ (ಜೂನ್ 14, 2023): ಬೆಂಗಳೂರು ಸೇರಿದಂತೆ ದೇಶದ 7 ಪ್ರಮುಖ ನಗರಗಳಲ್ಲಿ ಪ್ರವಾಹದಿಂದ ಉಂಟಾಗುವ ದುರಂತದ ಪ್ರಮಾಣವನ್ನು ತಗ್ಗಿಸಲು 2500 ಕೋಟಿ ರೂ. ಸೇರಿದಂತೆ ವಿಪತ್ತು ನಿರ್ವಹಣೆಗೆ 8 ಸಾವಿರ ಕೋಟಿ ರೂ. ಮೌಲ್ಯದ 3 ಪ್ರಮುಖ ಯೋಜನೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಣೆ ಮಾಡಿದ್ದಾರೆ.

ಎಲ್ಲಾ ರಾಜ್ಯಗಳಲ್ಲೂ ಅಗ್ನಿಶಾಮಕ ಸೇವೆಯ ಆಧುನೀಕರಣ, 7 ಪ್ರಮುಖ ನಗರಗಳಲ್ಲಿ ಪ್ರವಾಹದಿಂದಾಗುವ ದುರಂತ ತಡೆಗೆ ಕ್ರಮ, 17 ರಾಜ್ಯಗಳಲ್ಲಿ ಭೂಕುಸಿತ ತಡೆಗೆ ಕ್ರಮ ಕೈಗೊಳ್ಳುವುದು ಈ ಯೋಜನೆಗಳಲ್ಲಿ ಸೇರಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರ ಜೊತೆ ಸಭೆ ನಡೆಸಿದ ಅಮಿತ್‌ ಶಾ ಈ ಯೋಜನೆಗಳನ್ನು ಘೋಷಿಸಿದ್ದಾರೆ.

Latest Videos

ಇದನ್ನು ಓದಿ: ಕುಸ್ತಿಪಟುಗಳ ಪ್ರೊಟೆಸ್ಟ್‌ ಅಂತ್ಯ : ಅಮಿತ್‌ ಶಾ ಸಂಧಾನದ ಬಳಿಕ ಪ್ರತಿಭಟನೆ ಕೈಬಿಟ್ಟ ಕ್ರೀಡಾಳುಗಳು

ಎಲ್ಲಾ ರಾಜ್ಯಗಳಲ್ಲೂ ಅಗ್ನಿಶಾಮಕ ಘಟಕಗಳ ಆಧುನೀಕರಣಕ್ಕೆ 5 ಸಾವಿರ ಕೋಟಿ ರೂ., ಬೆಂಗಳೂರು, ಮುಂಬೈ. ಚೆನ್ನೈ, ಕೋಲ್ಕತಾ, ಅಹಮದಾಬಾದ್‌, ಹೈದರಾಬಾದ್‌ ಮತ್ತು ಪುಣೆ ನಗರಗಳಲ್ಲಿ ಪ್ರವಾಹದ ದುರಂತಗಳನ್ನು ತಡೆಗಟ್ಟಲು 2.5 ಸಾವಿರ ಕೋಟಿ ರೂ, 17 ರಾಜ್ಯಗಳಲ್ಲಿ ಭೂಕುಸಿತವನ್ನು ತಪ್ಪಿಸಲು ಸುಮಾರು 825 ಕೋಟಿ ರೂ.ಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಕುರಿತಾದ ಯೋಜನೆಗಳು ಸಹ ಸಿದ್ದವಾಗಿದ್ದು, ಯೋಜನೆಯ ರೂಪುರೇಷೆಗಳನ್ನು ರಾಜ್ಯಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ದುರಂತಗಳು ಸಂಭವಿಸಿದ ಸಮಯದಲ್ಲಿ ಉಂಟಾಗುವ ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿಕೆಯಾಗುವತ್ತ ಕ್ರಮ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲ್ಲ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಇನ್ನೂ ಹೆಚ್ಚಿನ ಕೆಲಸ ಮಾಡುವ ಮೂಲಕ ಇದನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಮಣಿಪುರದಲ್ಲಿ ಅಮಿತ್‌ ಶಾ ಶಾಂತಿ ಮಂತ್ರ: ಮೀಟಿ, ಕುಕಿ ಸಮುದಾಯದ ನಾಯಕರ ಜತೆ ಶಾಂತಿ ಸಭೆ

click me!