
ಶ್ರೀನಗರ (ಜು.10): ಪಹಲ್ಗಾಮ್ ಉಗ್ರರ ದಾಳಿಯ ಭೀತಿಯನ್ನು ಬದಿಗೊತ್ತಿ ಈ ವರ್ಷದ ಅಮರನಾಥ ಯಾತ್ರೆಗೆ ದೇಶದಾದ್ಯಂತ ಭಕ್ತರು ದಾಖಲೆ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಆದರೆ, ಯಾತ್ರೆ ಆರಂಭವಾದ ಕೇವಲ ಐದೇ ದಿನಗಳಲ್ಲಿ ಗುಹೆಯೊಳಗಿನ ಪವಿತ್ರ ನೈಸರ್ಗಿಕ ಹಿಮಲಿಂಗವು ಶೇಕಡಾ 90 ಕ್ಕಿಂತ ಹೆಚ್ಚು ಕರಗಿಹೋಗಿದೆ! ಇನ್ನೂ 50 ಕ್ಕೂ ಹೆಚ್ಚು ದಿನಗಳ ಯಾತ್ರೆ ಬಾಕಿ ಇರುವಾಗಲೇ ಹಿಮಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗುವ ಹಂತ ತಲುಪಿದೆ. ಈ ದಿಢೀರ್ ಬೆಳವಣಿಗೆಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕಳಕಳಿಗೆ ಕಾರಣವಾಗಿದ್ದು, ಇದಕ್ಕೆ ಜಾಗತಿಕ ತಾಪಮಾನ ಮಾತ್ರ ಕಾರಣವೇ ಅಥವಾ ಯಾವುದೋ ಆಪತ್ತಿನ ಮುನ್ಸೂಚನೆಯೋ ಎನ್ನುವ ಚರ್ಚೆ ಶುರುವಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 3,888 ಮೀಟರ್ (12,756 ಅಡಿ) ಎತ್ತರದಲ್ಲಿರುವ ಅನಂತನಾಗ್ ಜಿಲ್ಲೆಯ ಹಿಮಾಲಯದ ಲಿಡ್ಡರ್ ಕಣಿವೆಯ ಈ ಸೂಕ್ಷ್ಮ ಪರಿಸರದಲ್ಲಿ ನಡೆಯುತ್ತಿರುವ ಈ ವಿದ್ಯಮಾನದ ಸಾಕಷ್ಟು ವೈರಲ್ ಆಗಿದೆ.
ಹಿಮಲಿಂಗವು ವೇಗವಾಗಿ ಕರಗುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ, ಯಾತ್ರೆಯ ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದಿನಕ್ಕೆ ಗರಿಷ್ಠ 10,000 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಬೇಕೆಂಬ ನಿಯಮವಿದ್ದರೂ, ನಿಯಮ ಉಲ್ಲಂಘನೆಯಾಗುತ್ತಿದೆಯೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗುಹೆಯ ಬಳಿ ಪ್ರಸ್ತಾಪಿಸಲಾಗಿರುವ ರೋಪ್‌ವೇ ಯೋಜನೆಯ ಅಗತ್ಯವಾದರೂ ಏನಿದೆ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಅಬ್ದುಲ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸುಪ್ರೀಂ ಕೋರ್ಟ್ ಸೂಚಿಸಿರುವ ಮಿತಿಯ ಪ್ರಕಾರ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ತಲಾ 10,000 ಯಾತ್ರಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 3 ರಂದು ಕಠಿಣ ಭದ್ರತೆಯ ನಡುವೆ ಯಾತ್ರೆ ಆರಂಭವಾದ ಮೊದಲ 4 ದಿನಗಳಲ್ಲೇ ಬರೋಬ್ಬರಿ 93,000 ಯಾತ್ರಿಕರು ದರ್ಶನ ಪಡೆದಿದ್ದಾರೆ. ಜುಲೈ 5 ರ ವೇಳೆಗೆ 32,000 ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದು, ಎರಡನೇ ದಿನವೊಂದರಲ್ಲೇ 20,000 ಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಎಂದು ಶ್ರೀ ಅಮರನಾಥ ದೇವಸ್ಥಾನ ಮಂಡಳಿ (SASB) ಮುಖ್ಯಸ್ಥರೂ ಆಗಿರುವ ಎಲ್‌ಜಿ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಆದರೆ, ಕಡ್ಡಾಯ ಆರೋಗ್ಯ ಪ್ರಮಾಣಪತ್ರ ಅಥವಾ RFID ಕಾರ್ಡ್ ಇಲ್ಲದೆ ಸಾವಿರಾರು 'ನೋಂದಣಿ ರಹಿತ' (Unregistered) ಯಾತ್ರಿಕರು ಬರುತ್ತಿರುವುದು ಭದ್ರತೆ ಮತ್ತು ಮೂಲಸೌಕರ್ಯದ ಮೇಲೆ ಭಾರಿ ಒತ್ತಡ ಹೇರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಜಗತ್ತಿನ ಇತರ ಪರ್ವತ ಶ್ರೇಣಿಗಳಿಗೆ ಹೋಲಿಸಿದರೆ ಹಿಮಾಲಯ ವಲಯವು ಅತ್ಯಂತ ವೇಗವಾಗಿ ಬಿಸಿಯಾಗುತ್ತಿದೆ. ಬದಲಾಗುತ್ತಿರುವ ಹಿಮಪಾತದ ಮಾದರಿ, ಗ್ಲೇಸಿಯರ್‌ಗಳ ಕರಗುವಿಕೆ ಮತ್ತು ಗುಹೆಯೊಳಗಿನ ತಾಪಮಾನ ಹಾಗೂ ಆರ್ದ್ರತೆಯ ಏರುಪೇರು ಹಿಮಲಿಂಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿದ್ದ ಭಕ್ತರೊಬ್ಬರು ಮಾತನಾಡಿ, "ಹಿಂದೆ ಬಾಬಾ 40 ರಿಂದ 45 ದಿನ ದರ್ಶನ ನೀಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು 5 ರಿಂದ 7 ದಿನಕ್ಕೆ ಇಳಿದಿದೆ. ನಾವು 4ನೇ ದಿನವೇ ಬಂದರೂ ಲಿಂಗವು ತುಂಬಾ ಚಿಕ್ಕದಾಗಿತ್ತು" ಎಂದು ಬೇಸರ ಹಂಚಿಕೊಂಡಿದ್ದಾರೆ. ಈ ಹಿಂದೆ 2018 ರಲ್ಲಿ 29 ದಿನ, 2020 ರಲ್ಲಿ 38 ದಿನ, 2022 ರಲ್ಲಿ 28 ದಿನ ಹಾಗೂ 2024 ರಲ್ಲಿ ಕೇವಲ ಒಂದು ವಾರದಲ್ಲಿ ಹಿಮಲಿಂಗ ಕರಗಿತ್ತು. ಆದರೆ ಈ ಬಾರಿ ಕೇವಲ 5 ದಿನದಲ್ಲೇ ಕರಗಿರುವುದು ಆತಂಕದ ತೀವ್ರತೆಯನ್ನು ಹೆಚ್ಚಿಸಿದೆ.
ಕಳೆದ ಎರಡು ದಶಕಗಳಲ್ಲಿ ಯಾತ್ರಾ ಮಾರ್ಗದಲ್ಲಿ ಭಾರಿ ಬದಲಾವಣೆಗಳಾಗಿವೆ. ರಸ್ತೆಗಳ ಅಗಲೀಕರಣ, ತಾತ್ಕಾಲಿಕ ತಂಗುದಾಣಗಳ ವಿಸ್ತರಣೆ, ಗುಹೆಯ ತೀರಾ ಹತ್ತಿರಕ್ಕೆ ಲಂಗರ್‌ಗಳ (ಉಚಿತ ದಾಸೋಹ) ಸ್ಥಳಾಂತರ, ಸೌರ ದೀಪಗಳು ಮತ್ತು ಹೆವಿ ಮೆಷಿನರಿಗಳ ಬಳಕೆ ಹೆಚ್ಚಾಗಿದೆ. ಇತ್ತೀಚೆಗೆ ನಿರ್ಮಿಸಲಾದ ಮಳೆ ಆಶ್ರಯ ತಾಣವು (Rain Shelter) ಸ್ಥಳೀಯ ಸೂಕ್ಷ್ಮ ಹವಾಮಾನವನ್ನು (Microclimate) ಬದಲಾಯಿಸಿ, ಹಿಮಲಿಂಗ ಕರಗಲು ಕಾರಣವಾಗುತ್ತಿದೆಯೇ ಎಂಬ ಬಗ್ಗೆ ಸ್ವತಂತ್ರ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅಶ್ವನಿ ಹಂದಾ ಒತ್ತಾಯಿಸಿದ್ದಾರೆ. ಶೇಷನಾಗ್ ಮತ್ತು ಪಂಚತರ್ಣಿ ನಡುವಿನ ಸುರಂಗ ಮಾರ್ಗದ ಪ್ರಸ್ತಾಪವೂ ಚರ್ಚೆಯಲ್ಲಿದೆ.
ಎರಡು ದಶಕಗಳ ಹಿಂದೆ ವಾರ್ಷಿಕವಾಗಿ ಕೇವಲ 1 ಲಕ್ಷದಷ್ಟಿದ್ದ ಯಾತ್ರಿಕರ ಸಂಖ್ಯೆ 2011 ಮತ್ತು 2012 ರ ವೇಳೆಗೆ 6 ಲಕ್ಷ ದಾಟಿತ್ತು. ಕೋವಿಡ್ ನಂತರ ಈಗ ಮತ್ತೆ ಜನಪ್ರವಾಹ ಹೆಚ್ಚಾಗುತ್ತಿದೆ. ಹಿಮಲಿಂಗದ ದಿಢೀರ್ ಕರಗುವಿಕೆಗೆ ದೇವಸ್ಥಾನ ಮಂಡಳಿಯಿಂದ ಇನ್ನೂ ಯಾವುದೇ ಅಧಿಕೃತ ವೈಜ್ಞಾನಿಕ ವರದಿ ಬಂದಿಲ್ಲವಾದರೂ, ಕೋಟ್ಯಂತರ ಹಿಂದೂಗಳ ಆರಾಧ್ಯ ದೈವದ ಪವಿತ್ರ ಹಿಮಲಿಂಗವನ್ನು ಉಳಿಸಿಕೊಳ್ಳಲು ಮತ್ತು ಹಿಮಾಲಯದ ಸೂಕ್ಷ್ಮ ಪರಿಸರವನ್ನು ರಕ್ಷಿಸಲು ಯಾತ್ರಿಕರ ಸಂಖ್ಯೆ ಹಾಗೂ ಮೂಲಸೌಕರ್ಯಗಳ ಮೇಲೆ ನಿಯಂತ್ರಣ ಹೇರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ