
ಶ್ರೀನಗರ (ಜು.10): ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ ಸಂಭವಿಸಿದ ಭಾರೀ ಮಳೆ ಮತ್ತು ಅದರಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾಗಿದ್ದ ಇನ್ನೂ ಮೂವರ ಶವ ಪತ್ತೆಯಾಗಿದೆ. ಇದರೊಂದಿಗೆ ಘಟನೆಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. ನಾಪತ್ತೆಯಾಗಿದ್ದರೆ ಎನ್ನಲಾದ 40 ಮಂದಿಗಾಗಿ ಹುಡುಕಾಟ ಮುಂದುವರೆದಿದೆ. ಘಟನೆಯಲ್ಲಿ 25 ಜನರು ಗಾಯಗೊಂಡಿದ್ದು ಅವರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಘಟನಾ ಪ್ರದೇಶದಲ್ಲಿ ಭಾರೀ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು 15 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಶುಕ್ರವಾರ ಸಂಜೆ 5.30ರ ವೇಳೆಗೆ ಅಮರನಾಥ ಗುಹೆ ಸಮೀಪದ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ದಿಢೀರ್ ಪ್ರವಾಹ ಕಾಣಿಸಿಕೊಂಡು, ಭಕ್ತರು ಉಳಿದುಕೊಂಡಿದ್ದ ಟೆಂಟ್‌ಗಳು ಕೊಚ್ಚಿಹೋಗಿದ್ದವು. ಪ್ರವಾಹದ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಕಲ್ಲು ಮತ್ತು ಮಣ್ಣು ಕೂಡಾ ಹರಿದುಬಂದ ಕಾರಣ ಅವಗಢದ ತೀವ್ರತೆ ಹೆಚ್ಚಾಗಿದೆ.
ಅಮರನಾಥದಲ್ಲಿ ಮೇಘಸ್ಫೋಟ ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತ
ರಕ್ಷಣೆಗೆ ಸೇನೆ: ಘಟನಾ ಸ್ಥಳದಲ್ಲಿ ಶುಕ್ರವಾರದಿಂದಲೇ ಎನ್‌ಡಿಆರ್‌ಎಫ್, ಸೇನೆ, ಬಿಎಸ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಸಂಜೆಯಿಂದೀಚೆಗೆ 15 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಪದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ. ಅತ್ಯಾಧುನಿಕ ಯಂತ್ರೋಪಕರಣ, ತರಬೇತಿ ಪಡೆದ ಶ್ವಾನಗಳನ್ನು ಬಳಸಿಕೊಂಡು ಅವಶೇಷಗಳ ಅಡಿಯಲ್ಲಿ ಸಿಕ್ಕಿದವರ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದಲ್ಲದೆ ಎಂಐ-17 ಕಾಪ್ಟರ್‌ಗಳನ್ನೂ ಗಾಯಾಳುಗಳ ತ್ವರಿತ ತೆರವಿಗಾಗಿ ಬಳಸಿಕೊಳ್ಳಲಾಗಿದೆ.
ತೆಲಂಗಾಣ ಬಿಜೆಪಿ ಶಾಸಕ ಬಚಾವ್: ಶುಕ್ರವಾರದ ಘಟನೆಯಲ್ಲಿ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಅವರ ಕುಟುಂಬ ಕೂಡಾ ಬಚಾವ್ ಆಗಿದೆ. ಹೆಲಿಕಾಪ್ಟರ್ ಮೂಲಕ ಯಾತ್ರೆಗೆ ಆಗಮಿಸಿದ್ದ ನಮ್ಮ ಕುಟುಂಬ ವರ್ಗ ಅದರಲ್ಲೇ ಮರಳಬೇಕಿತ್ತು. ಆದರೆ ಪ್ರತಿಕೂಲ ಹವಮಾನ ಹಿನ್ನೆಲೆಯಲ್ಲಿ ಕಾಪ್ಟರ್ ಬಿಟ್ಟು ನಾವೆಲ್ಲಾ ಕುದುರೆ ಮೂಲಕ ಕೆಳಗಿಳಿಯಲು ನಿರ್ಧರಿಸಿದೆವು. ನಾವು ನೋಡನೋಡುತ್ತಿದ್ದಂತೆ ಭಾರೀ ಮಳೆ ಸುರಿದು ಪ್ರವಾಹ ಸೃಷ್ಟಿಯಾಯಿತು. ಪ್ರವಾಹದಲ್ಲಿ ಭಕ್ತಾದಿಗಳಿದ್ದ ಟೆಂಟ್‌ಗಳೆಲ್ಲಾ ಕೊಚ್ಚಿಕೊಂಡು ಹೋದವು ಎಂದು ರಾಜಾ ಸಿಂಗ್ ತಿಳಿಸಿದ್ದಾರೆ.
Amarnath Yatra: ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ: ಸಿಎಂ ಬೊಮ್ಮಾಯಿ!
ಯಾತ್ರೆ ಅಬಾಧಿತ: 6000 ಜನರ 11ನೇ ತಂಡ ಅಮರನಾಥ ಗುಹೆಯತ್ತ: ಶುಕ್ರವಾರದ ಅವಗಢದ ಹೊರತಾಗಿಯೂ 6000 ಭಕ್ತರನ್ನು ಒಳಗೊಂಡ 11ನೇ ತಂಡ ಶನಿವಾರ ಕಾಶ್ಮೀರದಲ್ಲಿನ ಎರಡು ಬೇಸ್ ಕ್ಯಾಂಪ್‌ಗಳತ್ತ ಜಮ್ಮುವಿನಿಂದ ಪ್ರಯಾಣ ಬೆಳೆಸಿದೆ. ಅಮರನಾಥಕ್ಕೆ ಒಟ್ಟು ಎರಡು ಮಾರ್ಗಗಳಲ್ಲಿ ಪ್ರಯಾಣ ಕೈಗೊಳ್ಳಬಹುದು. ಮೊದಲ ಮಾರ್ಗ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಬರುವ ನುನ್ವಾನ್ ಮೂಲಕ ಸಾಗುವ ದಾರಿ. ಇಲ್ಲಿ ಭಕ್ತರು 48 ಕಿ.ಮೀ ಪ್ರಯಾಣಿಸಬೇಕು. ಎರಡನೇ ಮಾರ್ಗ ಮಧ್ಯಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಬರುವ ಬಲ್ಟಾಲ್ ಮೂಲಕ ಸಾಗುವಂತದ್ದು. ಇಲ್ಲಿ ಕೇವಲ 14 ಕಿ.ಮೀ ದೂರ ಕ್ರಮಿಸಿದರೆ ಸಾಕು. ಆದರೆ ಹಾದಿ ಕಠಿಣ ಮಾರ್ಗವನ್ನು ಹೊಂದಿರುವ ಕಾರಣ, ಬಹಳಷ್ಟುಜನ ಈ ಹಾದಿಯನ್ನು ಬಳಸುವುದಿಲ್ಲ.
ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿಲ್ಲ: ಹವಾಮಾನ ಇಲಾಖೆ
ಅಮರನಾಥ ಗುಹೆ ಬಳಿ ಶುಕ್ರವಾರ ಕಾಣಿಸಿಕೊಂಡ ದಿಢೀರ್ ಪ್ರವಾಹಕ್ಕೆ ಆ ಪ್ರದೇಶದಲ್ಲಿ ಬಿದ್ದ ಭಾರೀ ಮಳೆ ಕಾರಣವೇ ಹೊರತೂ, ಮೇಘಸ್ಫೋಟವಲ್ಲ. ಶುಕ್ರವಾರ ಆ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದೆ. ಗುಹೆಯ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಂಜೆ 4.30ರಿಂದ 6.30ರ ಅವಧಿಯಲ್ಲಿ 3.1 ಸೆಂ.ಮೀನಷ್ಟುಮಳೆ ಸುರಿದಿದೆ ಎಂದು ಇಲಾಖೆ ಹೇಳಿದೆ. ಒಂದು ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 10 ಸೆಂ.ಮೀ. ಮಳೆ ಸುರಿದರೆ ಆಗ ಮಾತ್ರವೇ ಅದನ್ನು ಮೇಘಸ್ಫೋಟವೆಂದು ಪರಿಗಣಿಸಲಾಗುವುದು ಎಂದು ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ