
ನವದೆಹಲಿ: ಯುರೋಪಿನ ಪ್ರತಿಷ್ಠಿತ ವಿಮಾನ ಮತ್ತು ಹೆಲಿಕಾಪ್ಟರ್ ತಯಾರಿಕಾ ಕಂಪನಿಯಾದ ಏರ್‌ಬಸ್‌ನ ಎಚ್125 ಹೆಲಿಕಾಪ್ಟರ್‌ಗಳ ‘ಬಾಡಿ’ ಇನ್ನು ಮುಂದೆ ಬೆಂಗಳೂರಿನಲ್ಲೇ ನಿರ್ಮಾಣವಾಗಲಿದೆ. ಮಹೀಂದ್ರಾ ಏರೋಸ್ಟ್ರಕ್ಚರ್ ಕಂಪನಿ ಈ ಕಾಪ್ಟರ್‌ಗಳ ಬಾಡಿ ಸಿದ್ಧಪಡಿಸಲಿದೆ. ಈ ಮೂಲಕ ‘ಮೇಕ್ ಇನ್ ಇಂಡಿಯಾ’ಗೆ ಮಹತ್ವದ ಉತ್ತೇಜನ ಸಿಕ್ಕಂತಾಗಿದೆ.
ಐದು ತಿಂಗಳ ಹಿಂದಷ್ಟೇ ಏರ್‌ಬಸ್ ಕಂಪನಿಯು ಮಹೀಂದ್ರಾ ಏರೋಸ್ಟಕ್ಚರ್ ಪ್ರೈ ಲಿ.(ಎಂಎಎಸ್‌ಪಿಎಲ್) ಸಂಸ್ಥೆಗೆ ಎಚ್130 ಹೆಲಿಕಾಪ್ಟರ್‌ಗಳ ಬಾಡಿ ನಿರ್ಮಾಣದ ಕಾಂಟ್ರ್ಯಾಕ್ಟ್ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೆಲಿಕಾಪ್ಟರ್ ನಿರ್ಮಾಣದ ಗುತ್ತಿಗೆ ಸಿಕ್ಕಿದೆ. ಎಂಎಎಸ್‌ಪಿಎಲ್‌ನ ಬೆಂಗಳೂರು ಘಟಕದಲ್ಲಿ ಈ ಬಾಡಿಗಳ ಉತ್ಪಾದನಾ ಕಾರ್ಯ ನಡೆಯಲಿದ್ದು, 2027ರಲ್ಲಿ ಪೂರೈಕೆ ಆರಂಭವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಎಚ್125 ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಏಕ ಎಂಜಿನ್‌ನ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದ್ದು, ಪ್ರಯಾಣಿಕರ ಸಾಗಣೆ, ಪ್ರವಾಸೋದ್ಯಮ, ರಕ್ಷಣಾ ಕಾರ್ಯ ಸೇರಿ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತದೆ. ಏರ್‌ಬಸ್ ಸಂಸ್ಥೆಯು ವಿವಿಧ ಶಸ್ತ್ರಾಸ್ತ್ರಗಳ ಮೂಲಕ ಭಾರತದ ನಾಗರಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಉಪಸ್ಥಿತಿ ಹೊಂದಿದೆ. ಮಹೀಂದ್ರಾ ಏರೋಸ್ಟ್ರಕ್ಚರ್ ಬಾಡಿಗಳ ನಿರ್ಮಾಣ ಕಾರ್ಯ ಮಾಡಿದರೆ, ಎಚ್125 ಕಾಪ್ಟರ್ ಮತ್ತು ಮಿಲಿಟರಿ ಉದ್ದೇಶದ ಸಿ295 ವಿಮಾನದ ಅಂತಿಮ ಜೋಡಣೆ ಕಾರ್ಯಕ್ಕಾಗಿ ಟಾಟಾ ಅಡ್ವಾನ್ಸ್‌ಡ್ ಸಿಸ್ಟಂ ಜತೆಗೆ ಏರ್‌ಬಸ್ ಒಪ್ಪಂದ ಮಾಡಿಕೊಂಡಿದೆ.
ಇನ್ನು ಭಾರತದಲ್ಲೇ ಸೇನೆಯ ಸರಕು ವಿಮಾನ ನಿರ್ಮಾಣ
ವಡೋದರಾ: ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ295 ಅತ್ಯಾಧುನಿಕ ವಿಮಾನಗಳ ಉತ್ಪಾದನೆ ಇನ್ನು ಭಾರತದಲ್ಲಿ ಆರಂಭವಾಗಲಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಿರುವ ಟಾಟಾ ಏರ್‌ಬಸ್ ವಿಮಾನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪ್ಯಾನಿಶ್ ಪ್ರಧಾನಿ ಪರ್ವೋ ಸ್ಯಾಂಚೆಜ್ ಸೋಮವಾರ ಇಲ್ಲಿ ಜಂಟಿಯಾಗಿ ಉದ್ಘಾಟಿಸಿದರು.
ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ ಹಾಗೂ ವಡೋದರಾದಲ್ಲಿರುವ ಟಾಟಾ ವಿಮಾನ ಘಟಕವು ದೇಶದ ಮೊದಲ ಖಾಸಗಿ ಸೇನಾ ವಿಮಾನ ಉತ್ಪಾದನಾ ಘಟಕ ಎನಿಸಿಕೊಳ್ಳಲಿದೆ. ಸೇನಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಇದನ್ನು ಉದ್ಘಾಟಿಸಿ ಮಾತನಾಡಿದ ಮೋದಿ, 'ಟಾಟಾ ಘಟಕವು ಸ್ಪೇನ್- ಭಾರತದ ಸಂಬಂಧ ಗಟ್ಟಿಗೊಳಿಸುವುದು ಮಾತ್ರವಲ್ಲ, 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' (ಭಾರತದಲ್ಲಿ ಉತ್ಪಾದಿಸಿ, ವಿಶ್ವಕ್ಕೆಂದು ಉತ್ಪಾದಿಸಿ) ಆಂದೋಲನಕ್ಕೆ ವೇಗ ನೀಡಲಿದೆ. ಸಿ-295 ವಿಮಾನ ಭಾರತದ ಹೊಸ ಕೆಲಸದ ಸಂಸ್ಕೃ ತಿಯ ಪ್ರತೀಕ' ಎಂದು ಹರ್ಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ