ಸಂಸದರಲ್ಲಿ ಕೋವಿಡ್‌ ಹೆಚ್ಚಳ, ಸಂಸತ್‌ ಅಧಿವೇಶನ ಮುಕ್ತಾಯ!

By Suvarna NewsFirst Published Sep 24, 2020, 8:14 AM IST
Highlights

ಸಂಸತ್‌ ಅಧಿವೇಶನ ಮುಕ್ತಾಯ| 18 ದಿನಕ್ಕೆ ನಿಗದಿತ ಅಧಿವೇಶನ 10 ದಿನಕ್ಕೆ ಸೀಮಿತ| ಸಂಸದರಲ್ಲಿ ಕೋವಿಡ್‌ ಹೆಚ್ಚಳ ಹಿನ್ನೆಲೆ ನಿರ್ಧಾರ

ನವದೆಹಲಿ(ಸೆ.24): ಕೊರೋನಾ ಹಾವಳಿಯ ನಡುವೆಯೇ ಆರಂಭವಾಗಿದ್ದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನವು ಬುಧವಾರ ಅಂತ್ಯವಾಗಿದೆ. ತನ್ಮೂಲಕ ಉಭಯ ಸದನಗಳ ಅಧಿವೇಶನವು ನಿಗದಿತ ದಿನಕ್ಕಿಂತ 8 ದಿನಗಳ ಮುಂಚಿತವಾಗಿಯೇ ಮುಕ್ತಾಯವಾದಂತಾಗಿದೆ. ಸೆ.14ರಿಂದ ಆರಂಭವಾಗಿದ್ದ ಉಭಯ ಸದನಗಳ ಕಲಾಪವು ನಿಗದಿಯಂತೆ ಅ.1ಕ್ಕೆ ಮುಕ್ತಾಯವಾಗಬೇಕಿತ್ತು.

ಕಲಾಪದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ವ್ಯಾಪಿಸದಂತೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕಟ್ಟೆಚ್ಚರ ವಹಿಸಲು ಇದೇ ಮೊದಲ ಬಾರಿಗೆ ರಾಜ್ಯಸಭೆ ಮತ್ತು ಲೋಕಸಭೆಯ ಸದನವನ್ನು ಒಟ್ಟಿಗೆ ಸೇರಿಸಿ ಒಮ್ಮೆ ಲೋಕಸಭೆ ಕಲಾಪ ಮತ್ತು ಇನ್ನೊಮ್ಮೆ ರಾಜ್ಯಸಭೆ ಕಲಾಪ ನಡೆಸಲಾಗಿತ್ತು. ಆದಾಗ್ಯೂ, ಹೆಚ್ಚಿನ ಸಂಸದರಿಗೆ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ 8 ದಿನಗಳ ಮುಂಚಿತವಾಗಿಯೇ ಸಂಸತ್ತಿನ ಮುಂಗಾರು ಕಲಾಪ ಅಂತ್ಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರು, ‘18 ದಿನಗಳ ಕಲಾಪವನ್ನು 10 ದಿನಕ್ಕೇ ಮೊಟಕುಗೊಳಿಸಲಾಗುತ್ತಿದೆ. ಆದರೆ, ಈ 10 ದಿನಗಳ ಕಲಾಪವು ಫಲಪ್ರದವಾಗಿದ್ದು, 25 ಮಸೂದೆಗಳು ಅಂಗೀಕಾರವಾಗಿವೆ ಮತ್ತು 6 ಮಸೂದೆಗಳು ಮಂಡನೆಯಾಗಿವೆ’ ಎಂದು ಹೇಳಿದ್ದಾರೆ.

click me!