
ನವದೆಹಲಿ(ಜು.22): ಇತ್ತೀಚೆಗೆ ಕರ್ನಾಟಕದಲ್ಲಿ ರೈತರು, ನಿಗದಿತ ಮಾರುಕಟ್ಟೆಹೊರತಾಗಿ ತಮಗೆ ಬೇಕಾದ ಕಡೆ ಕೃಷಿ ಉತ್ಪನ್ನ ಮಾಡಬಹುದು ಎಂದು ಅಲ್ಲಿನ ಸರ್ಕಾರ ಅಧ್ಯಾದೇಶ ಹೊರಡಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯ 2 ಸುಗ್ರೀವಾಜ್ಞೆಗಳ ಅಧಿಸೂಚನೆ ಮಂಗಳವಾರ ಪ್ರಕಟವಾಗಿದೆ.
ಈ ಪ್ರಕಾರ ನೋಂದಾಯಿತ ಮಾರುಕಟ್ಟೆಯ ಹೊರತಾಗಿ ರೈತರು ತಮ್ಮ ಇಷ್ಟಕ್ಕೆ ಅನುಗುಣವಾಗಿ ರಾಜ್ಯದ ಗಡಿ ದಾಟಿಯೂ ಕೃಷಿ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗಲಿದೆ ಹಾಗೂ ಖಾಸಗಿ ಕಂಪನಿಗಳ ಜತೆ ಬೆಳೆ ಬೆಳೆವ ಮುನ್ನವೇ ಒಪ್ಪಂದ ಮಾಡಿಕೊಂಡು ಉತ್ಪನ್ನಗಳನ್ನು ಮಾರಬಹುದಾಗಿದೆ.
ಈ ಕುರಿತಂತೆ ಮಂಗಳವಾರ ‘ಕೃಷಿ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ ಸುಗ್ರೀವಾಜ್ಞೆ’ ಮತ್ತು ‘ಕೃಷಿ ಸಬಲೀಕರಣ ಹಾಗೂ ದರ ರಕ್ಷಣಾ-ಕೃಷಿ ಸೇವೆ ಒಪ್ಪಂದ’ ಎಂಬ ಅಧ್ಯಾದೇಶ ಹೊರಡಿಸಲು ಜೂನ್ 5ರಂದೇ ನಿರ್ಧರಿಸಲಾಗಿತ್ತು. ಈ ಅಧ್ಯಾದೇಶಗಳ ಅಧಿಸೂಚನೆಯನ್ನು ಈಗ ಕೃಷಿ ಸಚಿವಾಲಯ ಪ್ರಕಟಿಸಿದೆ.
ಸುಗ್ರೀವಾಜ್ಞೆಯಲ್ಲೇನಿದೆ?:
- ರೈತರು ತಮ್ಮ ಉತ್ಪನ್ನಗಳನ್ನು ನೋಂದಾಯಿತ ಎಪಿಎಂಸಿ ಹೊರತುಪಡಿಸಿ ಅಂತಾರಾಜ್ಯ ಹಾಗೂ ಅಂತರ್‌ಜಿಲ್ಲಾ ಮಾರಾಟ ಮಾಡಬಹುದು.
- ರೈತರು ಉತ್ಪನ್ನಗಳನ್ನು ಗೋದಾಮು, ಕೋಲ್ಡ್ ಸ್ಟೋರೇಜ್, ಕಾರ್ಖಾನೆ ಆವರಣ- ಹೀಗೆ ಯಾವುದೇ ಸ್ಥಳದಲ್ಲಿ ಮಾರಬಹುದು.
- ನಿರ್ದಿಷ್ಟವ್ಯಾಪಾರ ಪ್ರದೇಶದಲ್ಲಿ ರೈತರು ಇ-ಟ್ರೇಡಿಂಗ್ ಮಾಡಬಹುದು.
- ಇ-ಟ್ರೇಡಿಂಗ್ ಮೂಲಕ ಖಾಸಗಿ ಕಂಪನಿಗಳು, ಕೃಷಿ ಸೊಸೈಟಿಗಳು, ಕೃಷಿ ಉತ್ಪನ್ನ ಸಂಸ್ಥೆಗಳು ಉತ್ಪನ್ನ ಖರೀದಿಸಬಹುದು.
- ಒಂದು ವೇಳೆ ಇ-ಟ್ರೇಡಿಂಗ್ ನಿಯಮ ಉಲ್ಲಂಘಿಸಿದರೆ 50 ಸಾವಿರ ರು.ನಿಂದ 10 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.
- ಉಲ್ಲಂಘನೆ ಇನ್ನೂ ಮುಂದುವರಿದರೆ ದಿನಕ್ಕೆ 10 ಸಾವಿರ ರು.ನಂತೆ ದಂಡ ವಿಧಿಸಲಾಗುವುದು
- ಕೃಷಿ ಉತ್ಪನ್ನಗಳನ್ನು ಖರೀದಿಸಿದವರು ಅದೇ ದಿನವೇ ರೈತನಿಗೆ ಹಣ ಕೊಡಬೇಕು. ಕೆಲವು ನಿರ್ದಿಷ್ಟಸಂದರ್ಭದಲ್ಲಿ 3 ವಾರದೊಳಗೆ ಕೊಡಬೇಕು.
- ರಾಜ್ಯ ಸರ್ಕಾರಗಳು ರೈತರ ಮೇಲೆ ಹಾಗೂ ಇ-ಟ್ರೇಡಿಂಗ್ ವೇದಿಕೆಗಳ ಮೇಲೆ ಯಾವುದೇ ಮಾರುಕಟ್ಟೆಶುಲ್ಕ, ಸೆಸ್ ವಿಧಿಸಕೂಡದು.
- ಯಾವುದಾದರೂ ವ್ಯಾಪಾರ ವಿವಾದ ಉಂಟಾದಲ್ಲಿ ಆ ಬಗ್ಗೆ ಸಬ್ ಜುಡಿಷಿಯಲ್ ಮ್ಯಾಜಿಸ್ಪ್ರೇಟರಿಗೆ ದೂರಬಹುದು.
- ರೈತರು ಬೆಳೆ ಬೆಳೆವ ಮುನ್ನವೇ ಅದರ ಮಾರಾಟಕ್ಕೆ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಬಹುದು. ಇದಕ್ಕೆ ಒಪ್ಪಂದದ ಸಂದರ್ಭದಲ್ಲೇ ದರ ನಿಗದಿ ಆಗಿರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ