ಕೆನಡಾ ಜನರಿಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಭಾರತೀಯ ವೀಸಾ ಸೇವೆಯನ್ನು ಇಂದಿನಿಂದ ಪುನಾರಂಭಿಸಲಾಗುತ್ತದೆ ಎಂದು ಕೆನಡಾದಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ.
ನವದೆಹಲಿ: ಕೆನಡಾ ಜನರಿಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಭಾರತೀಯ ವೀಸಾ ಸೇವೆಯನ್ನು ಇಂದಿನಿಂದ ಪುನಾರಂಭಿಸಲಾಗುತ್ತದೆ ಎಂದು ಕೆನಡಾದಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದ ಕಾರಣ ಉಭಯ ದೇಶಗಳ ಸಂಬಂಧ ಹಳಸಿತ್ತು.
ಸ್ಥಿತಿ ಇನ್ನೂ ಸಂಪೂರ್ಣವಾಗಿ ಸರಿಹೋಗಿಲ್ಲದ ಕಾರಣ ಕೆಲವು ವೀಸಾಗಳನ್ನು ಮಾತ್ರ ನೀಡಲಾಗುತ್ತಿದೆ. ಎಂಟ್ರಿ, ವ್ಯಾಪಾರ, ವೈದ್ಯಕೀಯ, ಕಾನ್ಫರೆನ್ಸ್ ವಿಭಾಗಗಳಲ್ಲಿ ವೀಸಾಗಳನ್ನು ನೀಡಲಾಗುತ್ತದೆ. ಒಟ್ಟಾವ, ಟೊರಂಟೋ ಮತ್ತು ವ್ಯಾನ್‌ಕೋವರ್‌ನಲ್ಲಿರುವ ರಾಯಭಾರಿಗಳು ವೀಸಾ ಪುನಾರಂಭಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅದು ಸ್ಪಷ್ಟಪಡಿಸಿದೆ.
ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ (Canada PM) ಜಸ್ಟಿನ್ ಟ್ರುಡೋ ಹೇಳಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದಕ್ಕೆ ಭಾರತ ತಾತ್ಕಾಲಿಕವಾಗಿ ತಡೆ ನೀಡಿತ್ತು. ಇದಾದ ನಂತರ ಕೆನಡಾ ಅಲ್ಲಿರುವ ಭಾರತೀಯ ರಾಯಭಾರಿಯನ್ನು ವಜಾ ಮಾಡಿತ್ತು ಇದಕ್ಕೆ ಪ್ರತಿಯಾಗಿ ಭಾರತವೂ ಸಹ ಕೆನಡಾದ ರಾಯಭಾರಿಗಳನ್ನು ಕೂಡಲೇ ದೇಶ ಬಿಟ್ಟು ಹೋಗುವಂತೆ ತಪ್ಪಿದರೆ ಎಲ್ಲಾ ರಾಜತಾಂತ್ರಿಕ ಸವಲತ್ತುಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಇದಾದ ನಂತರ ಭಾರತದಲ್ಲಿದ್ದ 41 ಕೆನಡಾ ರಾಯಭಾರಿಗಳು ಭಾರತ ಬಿಟ್ಟು ಸ್ವದೇಶಕ್ಕೆ ತೆರಳಿದ್ದರು.
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ನಡೆದ ಜಿ-20 ಶೃಂಗ ಸಭೆಗೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋಗೆ (Justin Trudo) ಪ್ರಧಾನಿ ನರೇಂದ್ರ ಮೋದಿ ಖಲಿಸ್ತಾನ್ ಉಗ್ರರನ್ನು ಮಟ್ಟ ಹಾಕುವಂತೆ ಕೇಳಿದ್ದರು. ಖಲಿಸ್ತಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ತಮ್ಮ ಮತಬ್ಯಾಂಕ್‌ಗಾಗಿ ಖಲಿಸ್ತಾನ ಪರ ಹೇಳಿಕೆ ನೀಡುತ್ತಾ, ಭಾರತವನ್ನು ದೂಷಿಸುವ ಜಸ್ಟಿನ್ ಟ್ರುಡೋ, ಭಾರತದ ಪ್ರಧಾನಿ ಎಚ್ಚರಿಕೆ ಬಳಿಕವೂ ಮೃಧು ಧೋರಣೆ ತಳೆದಿದ್ದರು. ಅವರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಗದು ಎಂದು ಹೇಳುತ್ತಾ ಖಲಿಸ್ತಾನಿಗಳಿಗೆ (Khalistan) ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಇತ್ತ ಸಭೆ ಮುಗಿಸಿ ಕೆನಡಾ ತೆರಳಲು ಮುಂದಾದ ಜಸ್ಟಿನ್ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತ ಏರ್ ಇಂಡಿಯಾ ವಿಮಾನ ಸೇವೆ ಒದಗಿಸಲು ಮುಂದಾಗಿತ್ತು. ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವಂತೆ ಭಾರತ ಸೂಚಿಸಿತ್ತು. ಆದರೆ ದರ್ಪದಿಂದಲೇ ನಿರಾಕರಿಸಿದ ಜಸ್ಟಿನ್ ಟ್ರುಡೋ, ನಮ್ಮ ಕೆನಡಾದ ತಾಂತ್ರಿಕ ತಂಡ ಕೆಲವೇ ಸಮಯದಲ್ಲಿ ದುರಸ್ಥಿ ಮಾಡಲಿದ್ದಾರೆ ಎಂದಿದ್ದರು. ಆದರೆ ಇದಕ್ಕೆ ಬರೋಬ್ಬರಿ 36 ಗಂಟೆ ತೆಗೆದುಕೊಂಡಿತ್ತು. ಇದರಿಂದ ಟ್ರುಡೋ ಮತ್ತಷ್ಟು ಮುಜುಗರಕ್ಕೆ ಒಳಗಾಗಿದ್ದರು. ಇದಾದ ನಂತರ ಜಸ್ಟೀನ್ ಟ್ರುಡೋ ಅವರ ಸರ್ಕಾರ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿತ್ತು. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.
ಕಳೆದ ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಜ್ಜರ್‌ನ ಹತ್ಯೆಯಾಗಿತ್ತು, ಈ ಹತ್ಯೆಯಲ್ಲಿ ಭಾರತದ ಪ್ರಮುಖ ಪಾತ್ರವಿದೆ ಎಂದು ಕೆನಡಾ ಆರೋಪಿಸಿದೆ. ಇದಕ್ಕೆ ಪ್ರತೀಕಾರವಾಗಿ ಒಟ್ಟವಾದಲ್ಲಿರುವ ಭಾರತದ ಗುಪ್ತಚರ ಇಲಾಖೆ ಮುಖ್ಯಸ್ಥನ್ನು ತೆಗೆದು ಹಾಕಿತ್ತು.