I.N.D.I.A ಮೈತ್ರಿಕೂಟಕ್ಕೆ ಬಿಗ್‌ ಶಾಕ್! ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಗುಡ್‌ಬೈ?

By Kannadaprabha NewsFirst Published Oct 23, 2023, 8:10 AM IST
Highlights

ಪಿಡಿಎ (ಪಿಛಡೇ, ದಲಿತ ಹಾಗೂ ಅಲ್ಪಸಂಖ್ಯಾತ) ಕೂಟವು ಚುನಾವಣೆಯಲ್ಲಿ ವಿಜಯಶಾಲಿಯಾಗಲಿದೆ. ಅಖಿಲೇಶ್ ಯಾದವ್‌ ಬಡವರಿಗೆ ನ್ಯಾಯ ಒದಗಿಸಲಿದ್ದಾರೆ’ ಎಂದು ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಲಖನೌ (ಅಕ್ಟೋಬರ್ 23, 2023): ಬಿಜೆಪಿ ವಿರುದ್ಧ 2024ರ ಲೋಕಸಭೆ ಚುನಾವಣೆಯಲ್ಲಿ ಸೆಣಸಲು ರೂಪುಗೊಂಡಿರುವ ಇಂಡಿಯಾ ಕೂಟದಲ್ಲಿ ಬಿರುಕು ಗೋಚರಿಸುವ ಲಕ್ಷಣಗಳು ಕಂಡಿವೆ. ಕೂಟದ ಪ್ರಮುಖ ಸದಸ್ಯ ಪಕ್ಷವಾದ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್‌ ಯಾದವ್‌ ಅವರ ಗೂಢಾರ್ಥದ ಟ್ವೀಟ್ ಹಾಗೂ ಇತ್ತೀಚೆಗೆ ಮಧ್ಯಪ್ರದೇಶ ವಿಧಾನಸಭೆ ಟಿಕೆಟ್‌ಗೆ ಸಂಬಂಧಿಸಿ ಅಖಿಲೇಶ್‌ ಹಾಗೂ ಕಾಂಗ್ರೆಸ್‌ ನಡುವೆ ನಡೆದ ಸಂಘರ್ಷ ಈ ಒಡಕಿನ ಊಹಾಪೋಹಕ್ಕೆ ಇಂಬು ನೀಡಿವೆ.

ಭಾನುವಾರ ಟ್ವೀಟ್‌ ಮಾಡಿರುವ ಅಖಿಲೇಶ್‌, ‘2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ನೇತಾಜಿ ಮುಲಾಯಂ ಸಿಂಗ್‌ ಯಾದವ್‌ ಅಮರರಾಗಿರುತ್ತಾರೆ. ಪಿಡಿಎ (ಪಿಛಡೇ, ದಲಿತ ಹಾಗೂ ಅಲ್ಪಸಂಖ್ಯಾತ) ಕೂಟವು ಚುನಾವಣೆಯಲ್ಲಿ ವಿಜಯಶಾಲಿಯಾಗಲಿದೆ. ಅಖಿಲೇಶ್ ಯಾದವ್‌ ಬಡವರಿಗೆ ನ್ಯಾಯ ಒದಗಿಸಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇಂಡಿಯಾ ಕೂಟ ಗೆಲ್ಲಲಿದೆ ಎಂಬ ಬದಲು ಪಿಡಿಎ ಗೆಲ್ಲಲಿದೆ ಎಂದು ಅಖಿಲೇಶ್‌ ಮಾಡಿದ ಟ್ವೀಟ್‌ ನಾನಾ ಊಹಾಪೋಹಕ್ಕೆ ನಾಂದಿ ಹಾಡಿದ್ದು, ಅವರು ಇಂಡಿಯಾ ಕೂಟ ತೊರೆಯಬಹುದು ಎಂಬ ಸುದ್ದಿಗಳಿಗೆ ನೀರೆರೆದಿದೆ.

होगा 24 का चुनाव
PDA का इंक़लाब pic.twitter.com/K7RUPKPxl6

— Akhilesh Yadav (@yadavakhilesh)

ಇದನ್ನು ಓದಿ: ರಾಜ್ಯದಲ್ಲಿ ‘ಕೈ’ ಗೆಲ್ಲಿಸಿದ್ರೂ ಸುನೀಲ್‌ ಕನುಗೋಲಿಗೆ ತೆಲಂಗಾಣದಿಂದ ಗೇಟ್‌ಪಾಸ್‌: 3 ಭೂಕಂಪವಾದ್ರೂ ಇವರಿಗೆ ಎಚ್ಚರನೇ ಆಗಿಲ್ಲ!

ಮಧ್ಯ ಪ್ರದೇಶ ಸೀಟು ಜಟಾಪಟಿ:
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಎಸ್ಪಿ ಹಾಗೂ ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಸಂಘರ್ಷ ನಡೆದಿತ್ತು. ಇಂಡಿಯಾ ಕೂಟದ ಸದಸ್ಯ ಪಕ್ಷ ಆಗಿದ್ದಕ್ಕೆ ಎಸ್‌ಪಿ, ಮಧ್ಯಪ್ರದೇಶದಲ್ಲಿ 6 ಸೀಟಿಗೆ ಬೇಡಿಕೆ ಇಟ್ಟಿತ್ತು. ಆದರೆ ಕಾಂಗ್ರೆಸ್‌ ಒಂದೂ ಸೀಟು ನೀಡಿರಲಿಲ್ಲ. ಇದರಿಂದ ಕೆಂಡಾಮಂಡಲವಾಗಿದ್ದ ಅಖಿಲೇಶ್‌, ‘ಇಂಡಿಯಾ ಕೂಟ ದೇಶವ್ಯಾಪಿ ಮೈತ್ರಿಕೂಟವಾಗಿದೆ ಎಂದು ಭಾವಿಸಿ ಸೀಟು ಕೇಳಿದ್ದೆವು. ಆದರೆ ಮಧ್ಯಪ್ರದೇಶದಲ್ಲಿ ನಮಗೆ ಸೀಟು ನಿರಾಕರಿಸಿ ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿದೆ’ ಎಂದಿದ್ದರು. 

ಇದಕ್ಕೆ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಕಮಲ್‌ನಾಥ್‌ ಅವರು, ‘ಮಧ್ಯಪ್ರದೇಶದಲ್ಲಿ ಅಖಿಲೇಶ್‌, ವಖಿಲೇಶ್‌ ಯಾರು? ಅವರನ್ನು ಬಿಟ್ಹಾಕಿ’ ಎಂದು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‌ ವಿರುದ್ಧ 18 ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧಿಸಿದೆ. ಈ ಎಲ್ಲ ವಿದ್ಯಮಾನಗಳು ಅಖಿಲೇಶ್‌ ಅವರು ಇಂಡಿಯಾ ಕೂಟ ಬಿಡಬಹುದೆಂಬ ಚರ್ಚೆಗೆ ನಾಂದಿ ಹಾಡಿವೆ.

ಇದನ್ನೂ ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

click me!