
ನವದೆಹಲಿ : ‘ನಕ್ಸಲರ ಕೇಂದ್ರೀಯ ಸಮಿತಿ ಮತ್ತು ನಕ್ಸಲರ ಪ್ರಮುಖ ಕಾರ್ಯಪಡೆ ಬಹುತೇಕ ನಿರ್ನಾಮವಾಗುವುದರೊಂದಿಗೆ 59 ವರ್ಷಗಳ ಬಳಿಕ ದೇಶ ನಕ್ಸಲ್ ಮುಕ್ತವಾಗಿ ಹೊರಹೊಮ್ಮಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ ಮಾಡಿದ್ದಾರೆ.
ದೇಶವನ್ನು 2026ರ ಮಾ.31ರೊಳಗೆ ನಕ್ಸಲ್ ಮುಕ್ತ ಮಾಡುವ ಮಾಡುವ ಕುರಿತು ಕಳೆದ ವರ್ಷ ಕೇಂದ್ರ ಸರ್ಕಾರ ನೀಡಿದ್ದ ಗಡುವಿನ ಮುನ್ನಾ ದಿನ ಅವರು ಲೋಕಸಭೆಯಲ್ಲಿ ಸೋಮವಾರ ಇಂಥದ್ದೊಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಜೊತೆಗೆ, ‘ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ’ ಎಂದು ಬಣ್ಣಿಸಿದ್ದಾರೆ.
‘ದಶಕಗಳಿಂದ ನಕ್ಸಲ್ ಹಿಂಸಾಚಾರಕ್ಕೆ ತುತ್ತಾಗಿದ್ದ ಭಾರತ ಕೊನೆಗೂ ಆ ಆತಂಕದಿಂದ ಹೊರಬಂದಿದೆ. ದೇಶದಲ್ಲಿ ನಕ್ಸಲರ ಅತ್ಯಂತ ಭದ್ರ ಎಂಬ ಕುಖ್ಯಾತಿ ಹೊಂದಿದ್ದ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭದ ಬಳಿಕ ಕೆಂಪು ಉಗ್ರರ ಕೊನೆಯ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತರ್ ವಲಯ ಕೂಡಾ ಬಹುತೇಕ ನಕ್ಸಲ್ ಮುಕ್ತವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ದೇಶವನ್ನು ಎಡಪಂಥೀಯ ಉಗ್ರವಾದದಿಂದ ಮುಕ್ತಗೊಳಿಸುವ ಯತ್ನಗಳ ಬಗ್ಗೆ ಸೋಮವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ‘ಕಾನೂನು ಇಲ್ಲದೆ 12 ರಾಜ್ಯಗಳು ಕೆಂಪು ಕಾರಿಡಾರ್ (ನಕ್ಸಲ್ ಪ್ರದೇಶ) ಆಗಿದ್ದವು. ಪರಿಣಾಮ ಈ ರಾಜ್ಯಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯದೇ 12 ಕೋಟಿ ಜನರು ಯಾವುದೇ ಹಲವು ವರ್ಷ ಬಡತನದಲ್ಲಿ ಬದುಕುತ್ತಿದ್ದರು. ನಕ್ಸಲರ ಕ್ರೌರ್ಯಕ್ಕೆ 5,000 ಭದ್ರತಾ ಸಿಬ್ಬಂದಿ ಸೇರಿದಂತೆ 20,000 ಜನ ಬಲಿಯಾಗಿದ್ದಾರೆ’ ಎಂದು ಅಂಕಿಅಂಶಗಳನ್ನು ನೀಡಿದರು.
ಜತೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ, ‘ನಮ್ಮ ಸರ್ಕಾರವು ಆದಿವಾಸಿಗಳ ಅಭಿವೃದ್ಧಿ ಮಾಡುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ. ಅದರಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ನಕ್ಸಲ್ ಮುಕ್ತ ಭಾರತವೇ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ ಹಾಗೂ ಇದನ್ನು ಎಲ್ಲಾ ಸಂಶೋಧನಾಕಾರರು ಒಪ್ಪುತ್ತಾರೆ’ ಎಂದು ಶಾ ಹೇಳಿದರು.
‘ನಕ್ಸಲೀಯರ ಕಟ್ಟ ಕಡೆಯ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತರ್ ಮೇಲೆ ನಕ್ಸಲ್‌ವಾದದ ಕರಿನೆರಳು ಗಾಢವಾಗಿ ಆವರಿಸಿತ್ತು. ಆದರೆ ಅದೀಗ ಸರಿಯುತ್ತಿದೆ. ಅಲ್ಲಿ ನಮ್ಮ ಭದ್ರತಾ ಪಡೆಗಳು ಭರದ ಕಾರ್ಯಾಚರಣೆಯ ನಡೆಸಿವೆ. ಜತೆಗೆ ಅಲ್ಲಿನ ಎಲ್ಲಾ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಸ್ಥಾಪಿಸುವ, ಪಡಿತರ ಅಂಗಡಿ ತೆರೆಯುವ ಅಭಿಯಾನ ಆರಂಭಿಸಲಾಯಿತು. ಅಲ್ಲಿನ ಜನಕ್ಕೆ ಆಧಾರ್ ಹಾಗೂ ರೇಷನ್ ಕಾರ್ಡ್ ಕೊಡಲಾಗಿದೆ. ಅದರಿಂದ ಅವರು 5 ಕೆ.ಜಿ. ಧವಸ-ಧಾನ್ಯ, ಗ್ಯಾಸ್ ಒಲೆಗಳನ್ನು ಪಡೆದಿದ್ದಾರೆ’ ಎಂದು ಅಮಿತ್ ಶಾ ಹೇಳಿದರು. ಈ ಮೂಲಕ, ನಕ್ಸಲರ ಭದ್ರಕೋಟೆಯೂ ಛಿದ್ರವಾಗಿದೆ ಎಂದರು.
ಕಾಂಗ್ರೆಸ್ ಏನೂ ಮಾಡಿಲ್ಲ:
‘ತನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್, ಮಾವೋವಾದದ ನಿರ್ಮೂಲನೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಆರೋಪಿಸಿದ ಶಾ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಕ್ಸಲರೊಂದಿಗೆ ವೇದಿಕೆ ಹಂಚಿಕೊಂಡದ್ದಲ್ಲದೆ, ಕುಖ್ಯಾತ ಕೆಂಪು ಉಗ್ರ ಹಿದ್ಮಾ ಎಂಬಾತನ ಬೆಂಬಲಿಗರಾಗಿದ್ದಾರೆ. 1970ರ ಚುನಾವಣೆಯಲ್ಲಿ ಅಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ನಕ್ಸಲರ ಬೆಂಬಲವನ್ನು ಸ್ವೀಕರಿಸಿದ್ದರು ಮತ್ತು ಮಾವೋ ಚಿಂತನೆಗಳಿಂದ ಪ್ರಭಾವಿತರಾಗಿದ್ದರು’ ಎಂದು ಹರಿಹಾಯ್ದರು.
ಜೊತೆಗೆ, ‘ದೇಶ ಸ್ವತಂತ್ರವಾದ 75 ವರ್ಷಗಳಲ್ಲಿ 60 ವರ್ಷ ಕಾಂಗ್ರೆಸ್ ಆಳ್ವಿಕೆ ನಡೆಸಿತ್ತು. ಆ ಅವಧಿಯಲ್ಲಿ ಆದಿವಾಸಿಗಳಿಗೆ ನೀರು, ವಸತಿ, ಬ್ಯಾಂಕ್‌ನಂತಹ ಸೌಲಭ್ಯಗಳನ್ನು ನೀಡಲಾಗಿರಲಿಲ್ಲ. ಮನಮೋಹನ್ ಸಿಂಗ್ ಕೂಡ ನಕ್ಸಲ್‌ವಾದವನ್ನು ಕಾಶ್ಮೀರ ಮತ್ತು ಈಶಾನ್ಯದ ಸಮಸ್ಯೆಗಳಿಗಿಂತ ದೊಡ್ಡ ತಲೆನೋವು ಎಂದು ಕರೆದಿದ್ದರಾದರೂ ಅದರ ನಿರ್ಮೂಲನೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಶಾ ಟೀಕಿಸಿದರು.
ಭಾರತದಲ್ಲಿ ನಕ್ಸಲಿಸಂ ಶುರು ಆಗಿದ್ದು ಯಾವಾಗ? ಹೇಗೆ?
ಪಶ್ಚಿಮ ಬಂಗಾಳದ ಡಾರ್ಜೀಲಿಂಗ್ ಜಿಲ್ಲೆಯ ನಕ್ಸಲ್‌ಬಾರಿ ಎಂಬಲ್ಲಿ ಜಮೀನ್ದಾರರ ದಬ್ಬಾಳಿಕೆಯನ್ನು ತಡೆಯಲಾಗದೇ ಸಣ್ಣ ರೈತರು 1967ರಲ್ಲಿ ರೊಚ್ಚಿಗೆದ್ದರು. ಗ್ರಾಮದ ಹೆಸರು ನನಕ್ಸಲ್ ಬಾರಿ ಆಗಿದ್ದರಿಂದ ನಕ್ಸಲ್ ವಾದ ಎಂಬ ಪದ ಹುಟ್ಟಿತು. ಇವರಿಗೆ ಬೆಂಬಲವಾಗಿ ನಿಂತ ಕಮ್ಯುನಿಸ್ಟ್ ನಾಯಕರು, ಜಮೀನ್ದಾರರಿಂದ ಭೂಮಿಯನ್ನು ಕಸಿಯುವಂತೆ ಪ್ರೋತ್ಸಾಹಿಸಿದರು. ಮುಂದೆ ಬಡತನ, ಭೂ ವ್ಯಾಜ್ಯ, ಅಭಿವೃದ್ಧಿಯ ಕೊರತೆ ಇತ್ಯಾದಿಗಳ ಸಮಸ್ಯೆಗಳಾದಾಗಲೆಲ್ಲಾ ಜನ ಇದೇ ರೀತಿ ದಂಗೆ ಏಳತೊಡಗಿದರು. ಇದು ಕ್ರಮೇಣ ವಿಸ್ತರಿಸುತ್ತಾ ಸಾಗಿ, ಹಲವು ರಾಜ್ಯಗಳನ್ನು ವ್ಯಾಪಿಸಿಕೊಂಡವು. ನಕ್ಸಲ್‌ಬಾರಿಯಲ್ಲಿ ಶುರುವಾದ ಇದನ್ನು ನಕ್ಸಲ್‌ವಾದವೆಂದು, ಇದರಲ್ಲಿ ತೊಡಗುವವರನ್ನು ನಕ್ಸಲರೆಂದೂ, ಅದು ವ್ಯಾಪಿಸಿರುವ ಪ್ರದೇಶವನ್ನು ‘ರೆಡ್ ಕಾರಿಡಾರ್’ ಎಂದು ಗುರುತಿಸಲಾಗುತ್ತದೆ. ಇವರ ಸಿದ್ಧಾಂತಗಳು ಚೀನಾದ ಮಾವೋ ಝೆಡಾಂಗ್‌ನಿಂದ ಪ್ರೇರಿತವಾಗಿರುವ ಕಾರಣ ಮಾವೋವಾದಿಗಳು ಎಂಬ ಹೆಸರೂ ಇದೆ.
ಎಲ್ಲರಿಗೂ ಶಾಂತಿ, ಸಮೃದ್ಧಿ ನಮ್ಮ ಆದ್ಯತೆ
ಅಮಿತ್ ಶಾ ಅವರ ಭಾಷಣ ಅತ್ಯುತ್ತಮವಾಗಿತ್ತು. ಮಹತ್ವದ ಸಂಗತಿಗಳು, ಐತಿಹಾಸಿಕ ಸಂದರ್ಭ ಮತ್ತು ಕಳೆದ ದಶಕದಲ್ಲಿ ನಮ್ಮ ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿದರು. ದಶಕಗಳಿಂದ, ನಕ್ಸಲಿಸಂ ಹಲವಾರು ಪ್ರದೇಶಗಳ ಅಭಿವೃದ್ಧಿಗೆ ಹಾನಿ ಮಾಡಿ, ಅಸಂಖ್ಯಾತ ಯುವಕರ ಭವಿಷ್ಯವನ್ನು ಹಾಳುಮಾಡಿತ್ತು. ನಾವು ಉತ್ತಮ ಆಡಳಿತದ ಮೂಲಕ ಎಲ್ಲರಿಗೂ ಶಾಂತಿ, ಸಮೃದ್ಧಿ ನೀಡುವತ್ತ ಗಮನ ಹರಿಸುತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ
ಅಮಿತ್ ಶಾ ಹೇಳಿದ್ದೇನು?
‘ನಕ್ಸಲ್ ಮುಕ್ತ ಭಾರತ’ ಮೋದಿ ಸರ್ಕಾರದ ದೊಡ್ಡ ಸಾಧನೆ
ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಗಳು ಏನೂ ಮಾಡಿರಲಿಲ್ಲ
ಹಿದ್ಮಾ ಬೆಂಬಲಿಗ ರಾಹುಲ್ ನಕ್ಸಲರ ಜತೆ ವೇದಿಕೆಯಲ್ಲಿ: ಕಿಡಿ
1967ರಿಂದ ಭಾರತದಲ್ಲಿ ನಕ್ಸಲ್‌ವಾದ ಶುರುವಾಗಿತ್ತು
- ಜಮೀನ್ದಾರಿಕೆ ವಿರುದ್ಧ ಹುಟ್ಟಿಕೊಂಡಿತ್ತು ನಕ್ಸಲ್ ಚಳವಳಿ
- 12 ರಾಜ್ಯಗಳು ಮಾವೋವಾದಿಗಳಿಂದ ನಲುಗಿದ್ದವು
- ನಕ್ಸಲ್ ದಾಳಿಗೆ 5000 ಯೋಧರು ಸೇರಿ 20000 ಜನ ಬಲಿ
- ಆದರೆ ಇತ್ತೀಚೆಗೆ ನಕ್ಸಲರ ವಿರುದ್ಧ ಸತತ ಸಂಘಟಿತ ದಾಳಿ
- ಕಡೆಯ ಭದ್ರಕೋಟೆ ಬಸ್ತರ್ ಕೂಡಾ ಇದೀಗ ನಕ್ಸಲ್ ಮುಕ್ತ
- ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ