ಮಮತಾ ಮಣಿಸುವ ಕನಸಿನಲ್ಲಿದ್ದ ಬಿಜೆಪಿಗೆ ಭಾರೀ ಆಘಾತ!

By Kannadaprabha NewsFirst Published Oct 22, 2020, 10:39 AM IST
Highlights

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮಣಿಸುವ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ| ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ), ಎನ್‌ಡಿಎ ಒಕ್ಕೂಟದಿಂದ ಹೊರಗೆ

ಕೋಲ್ಕತಾ(ಅ.22): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮಣಿಸುವ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ ಎದುರಾಗಿದೆ. ಸ್ಥಳೀಯವಾಗಿ ಸಾಕಷ್ಟುಪ್ರಾಬಲ್ಯ ಹೊಂದಿರುವ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ), ಎನ್‌ಡಿಎ ಒಕ್ಕೂಟದಿಂದ ಹೊರಸರಿಯುವುದಾಗಿ ಘೋಷಿಸಿದೆ.

ಕೃಷಿ ಮಸೂದೆ ವಿರೋಧಿಸಿ ಶಿರೋಮಣಿ ಅಕಾಲಿದಳ ಎನ್‌ಡಿಎದಿಂದ ಹೊರಬಿದ್ದ ಬೆನ್ನಲ್ಲೇ ಮೈತ್ರಿಕೂಟಕ್ಕೆ ಈ ಹೊಡೆತ ಬಿದ್ದಿದೆ. ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯ ಸ್ಥಾಪನೆ ಮತ್ತು 11 ಗೋರ್ಖಾ ಸಮುದಾಯಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ಭರವಸೆಯನ್ನು ಈಡೇರಿಸಲು ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಸಂಘಟನೆಯ ಮುಖಂಡ ಬಿಮಲ್‌ ಗುರುಂಗ್‌ ಘೋಷಿಸಿದ್ದಾರೆ.

ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. 2009ರಲ್ಲಿ ಜಿಜೆಎಂ ಎನ್‌ಡಿಎ ಸೇರಿತ್ತು. ಈ ಪಕ್ಷದಿಂದ ಬಂಗಾಳದಲ್ಲಿ ಇಬ್ಬರು ಶಾಸಕರಾಗಿದ್ದಾರೆ.

ಬಿಮಲ್‌ ಗುರುಂಗ್‌ ವಿರುದ್ಧ ವಿವಿಧ ಹೋರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಕೇಸು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅವರು 2017ರಿಂದ ಭೂಗತರಾಗಿದ್ದರು. ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಬಿಮಲ್‌, ನಾನು 2 ವರ್ಷದಿಂದ ದೆಹಲಿಯಲ್ಲಿದ್ದೆ. 2 ತಿಂಗಳ ಹಿಂದೆ ಜಾರ್ಖಂಡ್‌ಗೆ ಬಂದಿದ್ದೆ. ಇನ್ನು ನನ್ನನ್ನು ಬಂಧಿಸಿದರೂ ನನಗೆ ಆತಂಕವಿಲ್ಲ ಎಂದಿದ್ದಾರೆ.

click me!