ಮಂಗಳೂರು ವಿಮಾನ ನಿಲ್ದಾಣ ಶೀಘ್ರದಲ್ಲೇ ಅದಾನಿ ತೆಕ್ಕೆಗೆ ಹೋಗುತ್ತಿದೆ. ಅಕ್ಟೋಬರ್ 31ರೊಳಗೆ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರವಾಗಲಿದೆ
ನವದೆಹಲಿ (ಅ.23): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಈ ತಿಂಗಳಾಂತ್ಯದೊಳಗೆ ಪ್ರಸಿದ್ಧ ಉದ್ಯಮ ಸಮೂಹವಾಗಿರುವ ಅದಾನಿ ಗ್ರೂಪ್‌ಗೆ ವರ್ಗಾವಣೆಯಾಗಲಿದೆ. ಅಕ್ಟೋಬರ್ 31ರೊಳಗೆ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ವಿಮಾನಯಾನ ಸಚಿವಾಲಯ ಹಾಗೂ ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಕಂಪನಿಗಳು ಬುಧವಾರ ಸಹಿ ಹಾಕಿವೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್, ವಲಸೆ ಹಾಗೂ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ವ್ಯವಹಾರಗಳನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ಈಗ ಸಹಿ ಹಾಕಿದ್ದು, ಇದರ ಜೊತೆಗೇ ಸಿಎನ್‌ಎಸ್-ಎಟಿಎಂ, ಅಂದರೆ ಸಂಪರ್ಕ ಮತ್ತು ವಿಚಕ್ಷಣ ವ್ಯವಸ್ಥೆ ಹಾಗೂ ಏರ್ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಸೇವೆಗಳನ್ನೂ ಹಸ್ತಾಂತರಿಸುವುದಕ್ಕೆ ಸಹಿ ಹಾಕಲಾಗಿದೆ.
ಕೊರೋನೊತ್ತರ ಭಾರತದಲ್ಲಿ ಅಂಬಾನಿ-ಅದಾನಿ ಏಕಸ್ವಾಮ್ಯ? ..
ಮಂಗಳೂರು ವಿಮಾನ ನಿಲ್ದಾಣದ ನಂತರ ನವೆಂಬರ್ 2ಕ್ಕೆ ಲಖನೌ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ನ.11ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಅದಾನಿ ಸಮೂಹದ ತೆಕ್ಕೆಗೆ ಹೋಗಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲೇ ಲಖನೌ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರಂ ಹಾಗೂ ಗುವಾಹಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ನಂತರ ಬಿಡ್‌ನಲ್ಲಿ ಭಾಗವಹಿಸಿದ್ದ ಅದಾನಿ ಸಮೂಹ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನೂ ಗೆದ್ದುಕೊಂಡಿತ್ತು.