
ಕಣ್ಣೂರು: ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ, ಕೋಮು ಗಲಭೆಗೆ ಆರ್‌ಎಸ್‌ಎಸ್ ಕಾರಣ, ಆರ್‌ಎಸ್‌ಎಸ್ ನಾಯಕರು ಯುವ ಸಮುದಾಯವನ್ನು ಎತ್ತಿ ಕಟ್ಟುತ್ತಿದ್ದಾರೆ ಎಂಬೆಲ್ಲಾ ಆರೋಪಗಳನ್ನು ಮಾಡಿ ಸಚಿವ ಪ್ರಿಯಾಂಕಾ ಖರ್ಗೆ ಸೇರಿದಂತೆ ಅನೇಕರು ಆರ್‌ಎಸ್‌ಎಸ್‌ನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು. ಆರ್‌ಎಸ್‌ಎಸ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದೆಲ್ಲಾ ಕೆಲ ದಿನಗಳಿಂದ ಜೋರಾಗಿಯೇ ಕೂಗಾಡುತ್ತಿದ್ದಾರೆ. ಆದರೆ ಇಲ್ಲೊಂದು ಕಡೆ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರೊಬ್ಬರು ಕೇರಳದ ಮುಸ್ಲಿಂ ನಟ ಮಮ್ಮುಟ್ಟಿ ಎಂದೇ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಮೊಹಮ್ಮದ್ ಕುಟ್ಟಿ ಅವರ ಆರೋಗ್ಯದ ಸುಧಾರಣೆಗಾಗಿ ಅಲ್ಲಿನ ದೇಗುಲವೊಂದಕ್ಕೆ ಚಿನ್ನದ ಕಳಸವನ್ನು ಕೊಡುಗೆಯಾಗಿ ನೀಡಿದ್ದಾರೆ.
ಹೌದು ಕೇರಳದ ಹಿರಿಯ ಆರ್‌ಎಸ್ಎಸ್ ಪ್ರಚಾರಕ ಅಖಿಲ ಭಾರತೀಯ ಸಂಪರ್ಕ ತಂಡದ ಸದಸ್ಯ ಜಯಕುಮಾರ್ ಹಾಗೂ ಕೇರಳದ ಖ್ಯಾತ ಮಲೆಯಾಳಿ ನಟ ಮುಸ್ಲಿಂ ಸಮುದಾಯದ ಮಮ್ಮುಟ್ಟಿ ಅವರದ್ದು ಜಾತಿ ಧರ್ಮಗಳನ್ನು ಮೀರಿದ ಸ್ನೇಹ. ಇದೇ ಕಾರಣಕ್ಕೆ ಕೇರಳದ ಕಣ್ಣೂರಿನಲ್ಲಿರುವ ರಾಜರಾಜೇಶ್ವರ ದೇಗುಲಕ್ಕೆ ಮಮ್ಮುಟ್ಟಿ ಅವರ ಆರೋಗ್ಯದಲ್ಲಿ ಚೇತರಿಕೆಗೆ ಹಾಗೂ ಅವರ ದೀರ್ಘ ಆಯುಷ್ಯಕ್ಕೆ ಹಾರೈಸಿ ಚಿನ್ನದ ಕಳಸವನ್ನು ದಾನವಾಗಿ ನೀಡಿದ್ದಾರೆ ಜಯಕುಮಾರ್ ಅವರು.
ಕಳೆದ 8 ತಿಂಗಳು ಅಮೆರಿಕಾದಲ್ಲಿ ಚಿಕಿತ್ಸೆ: ನಿನ್ನೆಯಷ್ಟೇ ತಾಯ್ನಾಡಿಗೆ ಮರಳಿದ ಮಮ್ಮುಟ್ಟಿ
ಅನಾರೋಗ್ಯಕ್ಕೀಡಾಗಿದ್ದ ಮಮ್ಮುಟ್ಟಿಯವರು ಕಳೆದ 8 ತಿಂಗಳಿಂದ ಅಮೆರಿಕಾದಲ್ಲಿ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದಿದ್ದು ಗುಣಮುಖರಾಗಿದ್ದಾರೆ. ನಿನ್ನೆಯಷ್ಟೇ ಅವರು ಅಮೆರಿಕಾದಿಂದ ಕೇರಳದ ಕೊಚ್ಚಿಯಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ಸಮಯದಲ್ಲಿ ಅವರ ಸ್ನೇಹಿತ ಜಯಕುಮಾರ್ ಅವರು ಕಣ್ಣೂರಿನ ರಾಜರಾಜೇಶ್ವರಿ ದೇಗುಲದಲ್ಲಿ ಅವರ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆಯ ಭಾಗವಾಗಿ ಚಿನ್ನದ ಕಳಸವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ 8 ತಿಂಗಳ ಹಿಂದೆ ಮಮ್ಮುಟ್ಟಿ ಅವರು ಸಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಅವರು ತಮ್ಮ ಸಿನಿಮಾ ರಂಗದ ಕೆಲಸಗಳಿಂದ ದೀರ್ಘ ಬ್ರೇಕ್ ತೆಗೆದುಕೊಂಡಿದ್ದರಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಊಹಾಪೋಹಾಗಳು ಹಬ್ಬಿದ್ದವು. ಆದರೆ ಅವರ ತಂಡ ಕುಟುಂಬದವರು ಅವರ ಆಪ್ತರು ಈ ಊಹಾಪೋಹಾಗಳನ್ನು ನಿರಾಕರಿಸಿದ್ದರು. ಈಗ ಮಮ್ಮುಟ್ಟಿ ಅವರು ಎಲ್ಲಾ ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಂಡು ಹುಷಾರಾಗಿದ್ದಾರೆ ಎಂದು ವರದಿಯಾಗಿದೆ.
ಈ ಆಚರಣೆಯಲ್ಲಿ ಸಾಂಪ್ರದಾಯಿಕ ಪೊನ್ನಿಂಕುಡಂ ಅಂದರೆ ಚಿನ್ನದ ಪಾತ್ರೆಯನ್ನು ಅರ್ಪಿಸಲಾಗುತ್ತದೆ. ಈ ರಾಜರಾಜೇಶ್ವರಿ ದೇಗುಲದ ಆಡಳಿತ ಮಂಡಳಿಯವರು ಜಯಕುಮಾರ್ ಅವರ ಈ ನಿರ್ಧಾರವನ್ನು ಸ್ವಾಗತಿಸಿ ಅವರಿಗೆ ದೇಗುಲದ ದೇವರ ಫೋಟೋಫ್ರೇಮ್‌ನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ರಾಜರಾಜೇಶ್ವರ ದೇಗುಲವೂ ತಲಿಪರಂಬ ನಗರದಿಂದ 3 ಕಿಲೋ ಮೀಟರ್ ದೂರದಲ್ಲಿದೆ. ಈ ದೇಗುಲವೂ ನೆಯ್ಯಿ ವಿಳಕ್ಕುಎಂದು ಕರೆಯಲ್ಪಡುವ ತುಪ್ಪದ ದೀಪ ಹಾಗೂ ಮತ್ತು ಪೊಣ್ಣುಕುಡಂ ಅರ್ಪಣೆಗೆ ಹೆಸರುವಾಸಿಯಾಗಿದೆ ಇವೆರಡು ಇಲ್ಲಿನ ಪ್ರಮುಖ ಆಚರಣೆಗಳಾಗಿವೆ.
ಹಲವರು ಗಣ್ಯಾತಿಗಣ್ಯರ ಆಕರ್ಷಿಸುತ್ತಿರುವ ರಾಜರಾಜೇಶ್ವರ ದೇಗುಲ
ಈ ರಾಜರಾಜೇಶ್ವರ ದೇಗುಲವೂ ಬಹಳ ಪ್ರಸಿದ್ಧ ದೇಗುಲವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡ 2017ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ವೇಳೆ ಈ ದೇಗುಲಕ್ಕೆ ಭೇಟಿ ನೀಡಿ ಪೊನ್ನಿಕುಡಂ ಸೇವೆ ಸಲ್ಲಿಸಿದ್ದರು. ಹಾಗೆಯೇ ತಮಿಳುನಾಡಿನ ಸಿಎಂ ಜಯಲಲಿತಾ, ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ, ಐಸಿಸಿ ಮಾಜಿ ಚೇರ್‌ಮ್ಯಾನ್ ಎನ್ ಶ್ರೀನಿವಾಸನ್ ಸೇರಿದಂತೆ ಅನೇಕ ಗಣ್ಯರು ಈ ದೇಗುಲಕ್ಕೆ ಭೇಟಿ ನೀಡಿ ರಾಜರಾಜೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.
ಸಿನಿಮಾ ಹಾಗೂ ರಾಜಕೀಯದ ಹಲವು ಗಣ್ಯರನ್ನು ಈ ದೇಗುಲ ಸೆಳೆಯುತ್ತಲೇ ಇದೆ. ದೇವಾಲಯದ ಇತಿಹಾಸದ ಪ್ರಕಾರ ಇಲ್ಲಿ ಅಗಸ್ತ್ಯ ಋಷಿಗಳು ಅದನ್ನು ಬೆಳಗಿಸಿದಾಗಿನಿಂದಲೂ ಇಲ್ಲಿನ ದೇವಾಲಯದಲ್ಲಿ ತುಪ್ಪದ ದೀಪವು ಉರಿಯುತ್ತಲೇ ಇದೆ ಎಂದು ಹೇಳಲಾಗುತ್ತದೆ. ಈ ರಾಜರಾಜೇಶ್ವರ ದೇಗುಲದ ದೇವರು ಇದು ಚೇರ ಸಾಮ್ರಾಜ್ಯದ ಪ್ರಧಾನ ದೇವತೆ ಮತ್ತು ಕೊಳತುನಾಡು ಸೂರ್ಯ ರಾಜವಂಶದ ಪೋಷಕ ದೇವತೆಯಾಗಿತ್ತು. ಕ್ರಿ.ಶ. 1014 ಮತ್ತು ಕ್ರಿ.ಶ. 1044 ರ ನಡುವೆ ರಾಜೇಂದ್ರ ಚೋಳನು ವಶಪಡಿಸಿಕೊಂಡ ನಂತರ ಈ ಬಿರುದು ಬಂದಿತು ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿ ರಾತ್ರಿ 8 ಗಂಟೆಯ ನಂತರ ಒಳ ವೃತ್ತದ ಪ್ರದೇಶದಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತದೆ. ಟಿಪ್ಪು ಸುಲ್ತಾನನ ಪಡೆಗಳ ದಾಳಿಯನ್ನು ಈ ದೇಗುಲವೂ ಎದುರಿಸಿದ ಹಿನ್ನೆಲೆ ಇದೆ.
ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ NEET ಪಾಸಾದ 4 ಮಕ್ಕಳ ತಾಯಿ 47ರ ಹರೆಯದ ಮಹಿಳೆ
ಇದನ್ನೂ ಓದಿ: ಚುನಾವಣೆಗೆ ನಿಲ್ಲದೇ ಶಾಸಕನೂ ಆಗದೇ ಸಚಿವನಾದ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ