
ಲಕ್ನೋ(ಸೆ.16): ಮುಂದಿನ ವರ್ಷ, 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಇನ್ನೂ ಸರಿ ಸುಮಾರು 5 ತಿಂಗಳ ಸಮಯವಿದೆ. ಹೀಗಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಮತದಾರರನ್ನು ಸೆಳೆಯುವ ಯತ್ನ ಆರಂಭಿಸಿವೆ. ಹೌದು ದೇಶದ ಅತಿದೊಡ್ಡ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಎಲ್ಲಾ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ. ಹೀಗಿರುವಾಗ ದೆಹಲಿ ಗದ್ದುಗೆ ಏರಿರುವ, ಆಡಳಿತ ಪಕ್ಷ ಆಮ್ ಆದ್ಮಿ ಕೂಡಾ ಯುಪಿ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದೆ. ಸದ್ಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಚುನಾವಣೆಯಲ್ಲಿ ಆಪ್ ಗೆದ್ದರೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಇದೇ ವೇಳೆ ಇತ್ತ ಟ್ವಿಟರ್‌ನಲ್ಲಿ ಭಾರೀ ಟೀಕೆಗಳೂ ವ್ಯಕ್ತವಾಗಿವೆ.
ಹೌದು ದೆಹಲಿಯ ಉಪಮುಖ್ಯಮಂತ್ರಿ, ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋಗೆ ಗುರುವಾರ ಭೇಟಿ ನೀಡಿದ್ದಾರೆ. ಇಲ್ಲಿ ಚುನಾವಣಾ ಘೋಷಣೆಗಳನ್ನು ಮಾಡಿದ ಸಿಸೋಡಿಯಾ ಯುಪಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದರೆ, ಯುಪಿಯ ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ, 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದರೊಂದಿಗೆ ರೈತರಿಗೆ ಕೃಷಿಗಾಗಿ ಬಳಸುವ ವಿದ್ಯುತ್ ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ.
ಟ್ವಿಟರ್‌ನಲ್ಲಿ ಖಾರ ಪ್ರತಿಕ್ರಿಯೆ
ಆಮ್ ಆದ್ಮಿ ಪಕ್ಷ ಈಗಾಗಲೇ ಪಂಜಾಬ್-ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ ಎಂಬುವುದು ಉಲ್ಲೇಖನೀಯ. ಈಗ ಉತ್ತರ ಪ್ರದೇಶದಲ್ಲೂ ಇಂತಹುದ್ದೊಂದು ಘೋಷಣೆ ಮಾಡಿದೆ. ಆದರೆ ಈ ಭರವಸೆ ಕೊಟ್ಟ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಅನೇಕ ತೀಕ್ಷ್ಣವಾದ ಕಾಮೆಂಟ್‌ಗಳು ಬಂದಿವೆ. ಒಬ್ಬ ಬಳಕೆದಾರರು ಉಚಿತ ವಿದ್ಯುತ್ ಹಿಂದಿನ ಅಸಲಿಯತ್ತನ್ನು ಗೂಗಲ್‌ನಲ್ಲಿ ಹುಡುಕಿ ಎಂದಿದ್ದಾರೆ.
ಮೊದಲು ದೆಹಲಿ ನಿವಾಸಿಗರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಿ. ಕೈಗಾರಿಕೆಗಳ ಮೇಲೆ ತೆರಿಗೆ ಹಾಕುವ ಮೂಲಕ, ನೀವು ಸಾರ್ವಜನಿಕರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತೀರಿ. 2013 ರಿಂದ ಇಲ್ಲಿಯವರೆಗೆ ನೀವು ಕೈಗಾರಿಕೆಗಳ ಮೇಲೆ ಎಷ್ಟು ತೆರಿಗೆ ಹೆಚ್ಚಿಸಿದ್ದೀರಿ ಎಂದು ಸಾರ್ವಜನಿಕರಿಗೆ ತಿಳಿಸಿ, ಇದು ಪರೋಕ್ಷವಾಗಿ ಸಾರ್ವಜನಿಕರ ಮೇಲೆಯೇ ಪರಿಣಾಮ ಬೀರುತ್ತದೆ ಎಂದು ಮತ್ತೊಬ್ಬಾತ ಟ್ವೀಟ್ ಮಾಡಿದ್ದಾನೆ.
ವಿದ್ಯುತ್ ಜೊತೆ ಗಲಭೆಗಳು ಕೂಡಾ ಫ್ರೀಯಾಗಿ ಸಿಗುತ್ತವೆ ಎಂದು ಮತ್ತೊಬ್ಬಾತ ಟ್ವೀಟ್ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ