ಉದ್ಧವ್ ಠಾಕ್ರೆಯನ್ನು 'ಕಪಟಿ ರಾಜ' ಎಂದ ಫಡ್ನವೀಸ್ ಪತ್ನಿ ಅಮೃತಾ, ಕೆಲವೇ ಕ್ಷಣದಲ್ಲಿ ಟ್ವೀಟ್‌ ಡಿಲೀಟ್‌!

By Suvarna NewsFirst Published Jun 22, 2022, 1:35 PM IST
Highlights

* ಮಹಾರಾ‍ಷ್ಟ್ರದಲ್ಲಿ ರಾಜಕೀಯ ಗೊಂದಲ

* ಉದ್ಧವ್ ಠಾಕ್ರೆಯನ್ನು ಕಪಟಿ ರಾಜ ಎಂದ ಫಡ್ನವೀಸ್ ಪತ್ನಿ

* ಟ್ವೀಟ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಡಿಲೀಟ್

ಮುಂಬೈ(ಜೂ.22): ಮಹಾರಾಷ್ಟ್ರದಲ್ಲಿ ಆರಂಭವಾದ ರಾಜಕೀಯ ಗೊಂದಲ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪ್ರಬಲ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದಿಂದ ಗುಜರಾತ್‌ಗೆ ಸುಮಾರು ಎರಡು ಡಜನ್ ಶಾಸಕರೊಂದಿಗೆ ತೆರಳಿರುವುದರಿಂದ ಆಡಳಿತಾರೂಢ ಶಿವಸೇನೆಯಲ್ಲಿ ಬಂಡಾಯದ ಸಾಧ್ಯತೆ ಕಂಡು ಬಂದಿದೆ. ಅದೇ ಸಮಯದಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಇತರ ಆಡಳಿತ ನಾಯಕರು ಸಮನ್ವಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಸಂಚಲನವನ್ನು ಹೆಚ್ಚಿಸಿದೆ.

ಕಪಟಿ ರಾಜನಿದ್ದ ಎಂದ ಅಮೃತಾ 

ಅಮೃತಾ ಫಡ್ನವೀಸ್ ಹಿಂದಿಯಲ್ಲಿ ಟ್ವೀಟ್ ಒಂದನ್ನು ಮಾಡುತ್ತಾ - "ಏಕ್ ಥಾ ಕಪಟಿ ರಾಜಾ" ಈ ಟ್ವೀಟ್‌ ಮಾಡಿದ್ದೇ ತಡ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಟ್ವೀಟ್ ಅನ್ನು ಚರ್ಚಿಸಲು ಪ್ರಾರಂಭಿಸಿದರು. ಇದನ್ನು ಬರೆಯುವ ಮೂಲಕ ಫಡ್ನವೀಸ್ ಅವರು ಮಹಾರಾಷ್ಟ್ರದ ಪ್ರಸ್ತುತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಗೇಲಿ ಮಾಡಿದ್ದಾರೆ ಎಂದು ಯಾರೋ ಹೇಳಿದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿದೆ, ಸಚಿವ ಏಕನಾಥ್ ಶಿಂಧೆ ಮತ್ತು ಇತರ 21 ಶಿವಸೇನೆ ಶಾಸಕರು ಸೂರತ್‌ಗೆ ತೆರಳಿದಾಗಿನಿಂದ ಕೋಲಾಹಲ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಟ್ವೀಟ್ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ, 

ಹೀಗಂದಿದ್ದು ಯಾರಿಗೆ ಎಂದು ಪ್ರಶ್ನಿಸಿದ ಜನರು

"ಕಪಟಿ ರಾಜನೊಬ್ಬನಿದ್ದ ಎಂದು ಬರೆದ ನಂತರ ಅಮೃತಾ ಫಡ್ನವೀಸ್ ಆ ಟ್ವೀಟ್ ಅನ್ನು ಸಹ ಅಳಿಸಿದ್ದಾರೆ. ಆದರೆ, ಈ ಟ್ವೀಟ್‌ನ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರು ಬಳಸಿದ ಈ ಪದಗಳನ್ನು ಶಿವಸೇನೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಳುಕು ಹಾಕಲಾಗುತ್ತಿದೆ. ಹೀಗಿರುವಾಗಲೇ ಇತ್ತ ಅಮೃತಾ ಅವರ ಪತಿ ದೇವೇಂದ್ರ ಫಡ್ನವೀಸ್ ದೆಹಲಿಗೆ ಬಂದಿದ್ದಾರೆ.. ಮಹಾರಾಷ್ಟ್ರದ ಸ್ಥಿತಿಗತಿಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚಚರ್ಚಿಸಲಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಅಮೃತಾ 

ಅಮೃತಾ ಫಡ್ನವೀಸ್ ಅವರಿಗೆ 43 ವರ್ಷ. ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಲ್ಲದೇ ಆಕ್ಸಿಸ್ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದಾರೆ. ಗ್ಲಾಮರಸ್ ಜೀವನ ಸಾಗಿಸುತ್ತಿರುವ ಅವರು ಸಂಗೀತದಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. ಸಮಾಜಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನಿಡುತ್ತಾರೆ. ಅವರೊಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದಾರೆ.

click me!