ಸುಪ್ರೀಂ ಕೋರ್ಟ್‌ ಜಡ್ಜ್‌ಗಿಂತ ವಕೀಲರ ಆದಾಯವೇ ಹೆಚ್ಚು!

By Suvarna News  |  First Published Jul 12, 2021, 9:17 AM IST

* ಜಡ್ಜ್‌ಗಳ 10 ತಿಂಗಳ ವೇತನ ವಕೀಲರಿಂದ ಒಂದೇ ದಿನದಲ್ಲಿ ಸಂಪಾದನೆ

* ಸುಪ್ರೀಂ ಕೋರ್ಟ್‌ ಜಡ್ಜ್‌ಗಿಂತ ವಕೀಲರ ಆದಾಯವೇ ಹೆಚ್ಚು!

* ಹಾಲಿ ಸುಪ್ರೀಂ ಜಡ್ಜ್‌ ಮಾಸಿಕ ವೇತನ ನಿವೃತ್ತ ಜಡ್ಜ್‌ರ 2 ಗಂಟೆ ಕೆಲಸಕ್ಕೆ ಸಮ


ನವದೆಹಲಿ(ಜು.12): ದೇಶದಲ್ಲಿ ಅತ್ಯುನ್ನತ ನ್ಯಾಯಾಂಗ ಹುದ್ದೆಯಾದ ಸುಪ್ರೀಂಕೋರ್ಟ್‌ ನ್ಯಾಯಾಧಿಶರ ಹುದ್ದೆ ಅಲಂಕರಿಸುವುದು ಯಾರಿಗಾದರೂ ಗೌರವದ ವಿಷಯವೇ ಸರಿ. ಆದರೆ ಹಾಲಿ ಸುಪ್ರೀಂ ಕೋರ್ಟ್‌ ಜಡ್ಜ್‌ಗೆ ಸಿಗುವ ಮಾಸಿಕ 2.5 ಲಕ್ಷ ರು. ವೇತನಕ್ಕೆ ಹೋಲಿಸಿದರೆ, ಅದೇ ಹುದ್ದೆಯಿಂದ ನಿವೃತ್ತರಾದ ನ್ಯಾಯಾಧೀಶರೊಬ್ಬರು, ಇಷ್ಟುಹಣವನ್ನು ಕೇವಲ 1- 2 ಗಂಟೆಯಲ್ಲಿ ಸಂಪಾದಿಸುತ್ತಾರೆ! ನಿವೃತ್ತ ಜಡ್ಜ್‌ಗಳದ್ದು ಈ ಕಥೆಯಾದರೆ, ಹಲವು ಖ್ಯಾತನಾಮ ವಕೀಲರು, ಹಾಲಿ ಜಡ್ಜ್‌ಗಳ 6-10 ತಿಂಗಳ ವೇತನವನ್ನು ಒಂದೇ ದಿನದಲ್ಲಿ ಸಂಪಾದಿಸುತ್ತಿದ್ದಾರೆ.

ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕ.

Latest Videos

undefined

ಹಾಲಿ ಸುಪ್ರೀಂ ಜಡ್ಜ್‌ಗಳಿಗೆ ಮಾಸಿಕ 2.5 ಲಕ್ಷ ರು. ವೇತನ ಇದೆ. ಅಂದರೆ ದಿನಕ್ಕೆ 8333 ರು. ನಿತ್ಯ ಒಬ್ಬ ಜಡ್ಜ್‌ 40 ಕೇಸು ವಿಚಾರಣೆ ನಡೆಸುತ್ತಾರೆ. ಅಂದರೆ ಪ್ರತಿ ಕೇಸಿಗೆ 208 ರುಪಾಯಿ ದೊರಕುತ್ತದೆ.

ಆದರೆ ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆಗೆ ಅನುಮತಿ ಪಡೆದ ಹೊಸ ನ್ಯಾಯವಾದಿಗಳು, ಪ್ರತಿ ಕೇಸಿನ ವಿಚಾರಣೆಗೆ ಹಾಜರಾಗಲು 1-5 ಲಕ್ಷ ರು. ಪಡೆಯುತ್ತಾರೆ. ಇನ್ನು ಪ್ರಖ್ಯಾತ ವಕೀಲರ ಸಂಭಾವನೆ 10-20 ಲಕ್ಷ ರು.ವರೆಗೂ ಏರುತ್ತದೆ. ಅಂದರೆ ಒಬ್ಬ ಜಡ್ಜ್‌ ಒಂದು ಕೇಸಿನ ವಿಚಾರಣೆಗೆ ಪಡೆಯುವ ವೇತನ 208 ರು. ಆದರೆ, ಅದರೆ ಅದೇ ಕೇಸಿನ ಪರ ವಾದ ಮಂಡಿಸುವ ವಕೀಲರಿಗೆ ಸಿಗುವುದು ಲಕ್ಷ ಲಕ್ಷ.

ಹಾಗೆಂದು ಯಾವ ವಕೀಲರು ನಿತ್ಯ 40 ಕೇಸಿನ ಪರ ವಾದ ಮಾಡುವುದಿಲ್ಲ. ಆದರೆ ಅದೇ ಒಬ್ಬ ಜಡ್ಜ್‌, ಅವತ್ತಿನ ಕೇಸಿನ ವಿಚಾರಣೆ ಮುಗಿದ ಬಳಿಕ ಮತ್ತೆ ಮಾರನೇ ದಿನದ ವಿಚಾರಣೆಗೆ ಅಗತ್ಯ ಸಿದ್ಧತೆ ನಡೆಸಬೇಕಾಗುತ್ತದೆ.

ಹೀಗಾಗಿಯೇ ಬಹುತೇಕ ಜಡ್ಜ್‌ಗಳು ನಿವೃತ್ತಿ ಕಡೆಗೆ ಹೆಚ್ಚಿನ ಮುಖಮಾಡುತ್ತಿದ್ದಾರೆ. ನಿವೃತ್ತಿಯ ಬಳಿಕ ಹಲವು ಜಡ್ಜ್‌ಗಳು ಮಧ್ಯಸ್ಥಿಕೆದಾರರಾಗಿ, ಕಾನೂನು ಸಲಹೆಗಾರರಾಗಿ ದೇಶೀಯ, ಬಹುರಾಷ್ಟ್ರೀಯ ಕಂಪನಿಗಳಿಗೆ ಕಾನೂನು ಸಲಹೆ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುಮಾರು 2 ಗಂಟೆಯ ಅವಧಿಯ ಇಂಥ ಒಂದು ಸಲಹೆಗೆ 2-5 ಲಕ್ಷ ರು.ವರೆಗೂ ಶುಲ್ಕ ವಿಧಿಸುತ್ತಿದ್ದಾರೆ. ಕೆಲ ನಿವೃತ್ತ ಜಡ್ಜ್‌ಗಳು ನಿತ್ಯ ಸರಾಸರಿ 2-3 ಸಲಹೆ ನೀಡುವ ಮೂಲಕ ಖ್ಯಾತನಾಮ ವಕೀಲರಿಗೆ ಸಮನಾದ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಂಗಳಿಗೆ 30- 50 ಲಕ್ಷ ರು.ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

click me!