
ನವದೆಹಲಿ: 2018-2022ರ ಅವಧಿಯಲ್ಲಿ ದೇಶಾದ್ಯಂತ 701 ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ 788 ಮಂದಿಯನ್ನು ಬಂಧಿಸಲಾಗಿದ್ದು, 500 ಮಂದಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಇದರ ಪೈಕಿ 131 ಮಂದಿಗೆ ಶಿಕ್ಷೆಯೂ ಪ್ರಕಟವಾಗಿದೆ. ಅದೇ ರೀತಿ ಈ ಅವದಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) 5,023 ಪ್ರಕರಣ ದಾಖಲಾಗಿದೆ. ಈ ಕೇಸುಗಳಲ್ಲಿ 8,947 ಮಂದಿಯನ್ನು ಬಂಧಿಸಲಾಗಿದ್ದು, 6,503 ಮಂದಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಅದರಲ್ಲಿ 550 ಮಂದಿಗೆ ಶಿಕ್ಷಯೂ ಪ್ರಕಟವಾಗಿದೆ ಎಂದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಅಕ್ರಮ ಕಾಯ್ದೆ ವ್ಯಾಪ್ತಿಗೆ ವಿದ್ಯಾರ್ಥಿಗಳಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ವ್ಯಾಪ್ತಿಯಿಂದ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ತಿಳಿಸಿದರು. ಲೋಕಸಭೆಗೆ ಈ ಕುರಿತು ಸ್ಪಷ್ಟನೆ ನೀಡಿದ ತೋಮರ್, ‘ಸಾರ್ವಜನಿಕ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಕಾರಣವಾಗುವ ಬಾಹ್ಯ ಸಂಸ್ಥೆಗಳು, ಮಾಫಿಯಾಗಳನ್ನು ನಿಯಂತ್ರಿಸಲು ಕಾಯ್ದೆ ತರುತ್ತಿದ್ದೇವೆಯೇ ಹೊರತು ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಇದರಿಂದ ಪಾರದರ್ಶಕತೆ ಹೆಚ್ಚಾಗಿ ಪ್ರಾಮಾಣಿಕ ಅಭ್ಯರ್ಥಿಗಳು ತೇರ್ಗಡೆಯಾಗಲು ಅನುವು ಮಾಡಿಕೊಡುತ್ತದೆ’ ಎಂದು ತಿಳಿಸಿದರು. ಈ ಕಾಯ್ದೆಯಡಿ ದೋಷಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿ ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಚುನಾವಣಾ ಆಯುಕ್ತರ ಆಯ್ಕೆಗೆ ಇಂದು ಮೋದಿ ನೇತೃತ್ವದ ಸಮಿತಿ ಸಭೆ
ನವದೆಹಲಿ: ನೂತನ ಚುನಾವಣಾ ಆಯುಕ್ತರ ನೇಮಕ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಬುಧವಾರ ಸಭೆ ಸೇರಲಿದೆ. ಪ್ರಸ್ತುತ ಚುನಾವಣಾ ಆಯುಕ್ತರಾಗಿರುವ ಅನೂಪ್ ಕುಮಾರ್ ಪಾಂಡೆ ಫೆ.14ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ನೇತೃತ್ವದ ಆಯ್ಕೆ ಸಮಿತಿಯು ಐವರ ಹೆಸರನ್ನು ಶಿಫಾರಸು ಮಾಡಿದೆ. ಈ ಹೆಸರುಗಳ ಪೈಕಿ ಒಬ್ಬರನ್ನು ಪ್ರಧಾನಿ ಮೋದಿ, ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಕೇಂದ್ರ ಸಚಿವರನ್ನು ಒಳಗೊಂಡ ನೇಮಕಾತಿ ಸಮಿತಿ ಅಂತಿಮಗೊಳಿಸಲಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಹೊಸ ಚುನಾವಣಾ ಆಯುಕ್ತರನ್ನು ನೇಮಿಸುತ್ತಿದ್ದರು.
Sedition Case ದೇಶದ್ರೋಹದ ಕಾಯ್ದೆ ಸದ್ಯಕ್ಕೆ ತಡೆ ಸಾಧ್ಯವೇ? ಸುಪ್ರೀಂ ಕೋರ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ